ಮೋದಿ ವಿಜಯ ಸಂಕಲ್ಪ ಯಾತ್ರೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ಸಂಘಟನೆ ಬಲಪಡಿಸುವಿಕೆ ಹಾಗೂ ವಾತಾವರಣ ನಿರ್ವಣಕ್ಕೆ ‘ಮೋದಿ ವಿಜಯ ಸಂಕಲ್ಪ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮೊದಲ ಹಂತದಲ್ಲಿ ಫೆ. 22ರಿಂದ ಮಾ. 19ರವರೆಗೆ ಮೋದಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ. ಫೆ.22ಕ್ಕೆ ಬೀದರ್​ನಲ್ಲಿ ಯಾತ್ರೆಗೆ ಚಾಲನೆ ನೀಡಲಾಗುವುದು. ಬಿಜೆಪಿ ಸ್ಥಳೀಯ ನಾಯಕರು ಆಯಾ ಜಿಲ್ಲೆಗಳ ಯಾತ್ರೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲ್ ಉಪಸ್ಥಿತರಿರಲಿದ್ದಾರೆ ಎಂದರು.

ಇಡೀ ಯಾತ್ರೆಯ ಪೂರ್ವತಯಾರಿ ಸಲುವಾಗಿ ಫೆ. 21ಕ್ಕೆ ಚಿಕ್ಕಬಳ್ಳಾಪುರದ ದೇವನಹಳ್ಳಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಶಕ್ತಿ ಕೇಂದ್ರ ಪ್ರಮುಖರ ಸಭೆ ನಡೆಸಲಿದ್ದಾರೆ. ಮಾ. 1ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕಲಬುರಗಿ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮೊದಲ ಬಾರಿ ಮತದಾನದ ಹಕ್ಕು ಪಡೆದ ಯುವಜನತೆಯನ್ನು ಸೆಳೆಯಲು ಈ ಬಾರಿ ಆದ್ಯತೆ ನೀಡಲಾಗುತ್ತದೆ. ರಾಜ್ಯದಲ್ಲಿ ಲಕ್ಷಾಂತರ ಯುವಕರು ಹೊಸದಾಗಿ ಸೇರ್ಪಡೆಯಾಗಿದ್ದು, ಬೆಂಗಳೂರೊಂದರಲ್ಲೇ 89,000 ಹೊಸ ಮತದಾರರಿದ್ದಾರೆ. ಅವರನ್ನು ಪಕ್ಷದತ್ತ ಸೆಳೆಯಲು ಗಮನ ಹರಿಸಲಾಗುವುದು ಎಂದರು.

ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಮೊದಲ ರ‍್ಯಾಲಿ ಹುಬ್ಬಳ್ಳಿಯಲ್ಲಿ ಅತ್ಯಂತ ಯಶಸ್ವಿಯಾಗಿದೆ. ನಿರೀಕ್ಷೆಗಿಂತ ಎರಡು ಪಟ್ಟು ಜನ ಆಗಮಿಸಿದ್ದರು. ಮಾ. 1ರಂದು ಕಲಬುರಗಿಯ ರ್ಯಾಲಿಗೂ ಸಿದ್ಧತೆ ನಡೆದಿದೆ. ಪ್ರಧಾನಿಯವರು ಮುಂದೆ 3 ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ಸೇರಿ ಇತರ ಪ್ರಮುಖ ವಲಯಗಳನ್ನು ಗುರುತಿಸಲಾಗಿದ್ದು, ಪ್ರಧಾನಿ ಸಮಯಾವಕಾಶ ನೋಡಿಕೊಂಡು ಆಯೋಜಿಸಲಾಗುವುದು ಎಂದು ತಿಳಿಸಿದರು.

ಕಲಬುರಗಿಯಲ್ಲಿ ಸರ್​ಪ್ರೖೆಸ್!: ಕಲಬುರಗಿಯಲ್ಲಿ ಮಾ.1ಕ್ಕೆ ನಡೆಯುವ ಪ್ರಧಾನಿ ಮೋದಿ ರ್ಯಾಲಿಯಲ್ಲಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಯಡಿಯೂರಪ್ಪ ಕುತೂಹಲ ಉಳಿಸಿದರು. ಈವರೆಗೆ ಯಾರೂ ಸಂಪರ್ಕ ಮಾಡಿಲ್ಲ. ಆ ದಿನವರೆಗೆ ಕಾದು ನೋಡೋಣ ಎಂದು ಮಾರ್ವಿುಕವಾಗಿ ನುಡಿದರು.

ಆಪರೇಷನ್ ಆಡಿಯೋದಿಂದ ಲಾಭ: ಸಿಎಂ ಎಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ ಆಡಿಯೋ ಪ್ರಕರಣದಿಂದ ನಷ್ಟಕ್ಕಿಂತ ಪಕ್ಷಕ್ಕೆ ಲಾಭವೇ ಆಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಆಡಿಯೋ ಪ್ರಕರಣ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಖಂಡಿತ ಪರಿಣಾಮ ಬೀರಲಿದೆ. ನಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ. ಯಾವುದೇ ತಪ್ಪು ಕೂಡ ಮಾಡಿಲ್ಲ. ಪ್ರಕರಣವು ಶೇ.100 ರಾಜಕೀಯ ಷಡ್ಯಂತ್ರ ಎಂಬುದು ಸಾಬೀತಾಗಲಿದ್ದು, ಪಕ್ಷಕ್ಕೆ ಫಲ ನೀಡಲಿದೆ ಎಂದು ತಿಳಿಸಿದರು.

ಒಂದೆರಡು ಸಂಸದರ ಬದಲಾವಣೆ ಸಾಧ್ಯತೆ

ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಕುತೂಹಲಕಾರಿಯಾಗಿ ಯಡಿಯೂರಪ್ಪ ಉತ್ತರಿಸಿದರು. ಸದ್ಯ ಎಲ್ಲ ಸಂಸದರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆಡಳಿತವಿರೋಧಿ ಅಲೆ ಇಲ್ಲ. ಹಾಲಿ ಸಂಸದರ ಕಾರ್ಯ ನಿರ್ವಹಣೆ ಬಗ್ಗೆ ಆರೋಪಗಳಿರುವ ಉದಾಹರಣೆ ಇಲ್ಲ. ಹಾಗೇನಾದರೂ ಒಂದೆರಡು ಕ್ಷೇತ್ರಗಳಲ್ಲಿ ಬದಲಾವಣೆ ಮಾಡಬೇಕು ಎನ್ನಿಸಿದರೆ ಕೇಂದ್ರದ ವರಿಷ್ಠರೇ ತೀರ್ವನಿಸುತ್ತಾರೆ ಎಂದರು. ಒಂದೆರಡು ಕ್ಷೇತ್ರಗಳು ಎಂಬುದನ್ನು ಪದೇಪದೆ ಯಡಿಯೂರಪ್ಪ ಉಚ್ಚರಿಸಿದ್ದು, ಈ ಕುರಿತು ಕುತೂಹಲ ಹೆಚ್ಚಿಸಿದೆ.

ರಾಜ್ಯದ ವಿವಿಧೆಡೆ ಬಿಜೆಪಿ ಯಾತ್ರೆಗಳ ವಿವರ

ಮಾ.2-ತುಮಕೂರು-ಬೆ.11. ಮಾ.3-ಚಿತ್ರದುರ್ಗ-ಬೆ.11, ದಾವಣಗೆರೆ-ಸಂ.4. ಮಾ.4-ಹಾವೇರಿ-ಬೆ.11, ಶಿರಸಿ- ಸಂ.4. ಮಾ.5-ಚಿಕ್ಕೋಡಿ-ಬೆ.11, ಬೆಳಗಾವಿ-ಸಂ.4. ಮಾ.6-ಧಾರವಾಡ-ಬೆ.11. ಮಾ.7-ಕೊಪ್ಪಳ-ಬೆ.11, ಬಳ್ಳಾರಿ- ಸಂ.4. ಮಾ.8-ಬೆಂಗಳೂರು ಉತ್ತರ-ಮ.3. ಮಾ.9-ಬೆಂಗಳೂರು ಕೇಂದ್ರ-ಮ.3. ಮಾ.10-ಬೆಂಗಳೂರು ದಕ್ಷಿಣ-ಮ.3. ಮಾ.11-ಬೆಂಗಳೂರು ಗ್ರಾ.-ಮ.3. ಮಾ.12-ಕೋಲಾರ-ಬೆ.11. ಮಾ.13-ಶಿವಮೊಗ್ಗ-ಬೆ.11. ಮಾ.14-ಉಡುಪಿ-ಬೆ.11. ಮಾ.15-ಮಂಗಳೂರು-ಬೆ.11. ಮಾ.16-ಮಡಿಕೇರಿ-ಬೆ.11. ಮಾ.17-ಚಾಮರಾಜನಗರ-ಬೆ.11, ಮೈಸೂರು-ಸಂ.4. ಮಾ.18-ಮಂಡ್ಯ-ಬೆ.11, ಹಾಸನ-ಸಂ.4. ಮಾ.19-ಚಿಕ್ಕಮಗಳೂರು.

ಮೈತ್ರಿ ಸರ್ಕಾರದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

ಮೈತ್ರಿ ಸರ್ಕಾರ ಉಳಿಯುತ್ತದೆಯೋ, ಹೋಗುತ್ತದೆಯೋ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬೇರೆ ಪಕ್ಷಗಳ ಶಾಸಕರು ಮುಂಬೈಗೆ ಹೋದರೆ ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲುವತ್ತ ಹೆಜ್ಜೆ ಇಟ್ಟಿದ್ದೇವೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು. ರಾಜ್ಯದ ಜನರ ವಿಚಾರ ಪ್ರಸ್ತಾಪಿಸುವಲ್ಲಿ ಹಾಗೂ ಲೋಕಸಭೆಗೆ ಪಕ್ಷವನ್ನು ಸಿದ್ಧಗೊಳಿಸುವಲ್ಲಿ ರಾಜ್ಯ ಬಿಜೆಪಿ ಯಾವುದೇ ರೀತಿಯಲ್ಲಿ ಸಮಯ ವ್ಯರ್ಥ ಮಾಡಿಲ್ಲ ಎಂದ ಯಡಿಯೂರಪ್ಪ, ಇತ್ತೀಚೆಗೆ ಐದು ತಂಡಗಳಲ್ಲಿ ರಾಜ್ಯಾದ್ಯಂತ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಅಧ್ಯಯನ ನಡೆಸಲಾಗಿದೆ. ಆ ಮೂಲಕ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಲಾಗಿದೆ. ಈಗಾಗಲೇ ಲೋಕಸಭಾ ಚುನಾವಣಾ ಸಿದ್ಧತಾ ಕಾರ್ಯಗಳು ನಡೆದಿದೆ ಎಂದರು. ಟಿಕೆಟ್​ಗೆ ಪೈಪೋಟಿ ನಡೆಯುತ್ತಿರುವುದರ ಕುರಿತು ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ ಅಲೆ ಇರುವುದರಿಂದ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹೋಗಾಗಿ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೋದಿ ವಿಜಯ ಸಂಕಲ್ಪ ಯಾತ್ರೆ ವೇಳೆಯಲ್ಲೇ ಗೆಲ್ಲುವ ಸಾಧ್ಯತೆ ಹೆಚ್ಚಿರುವ ಆಕಾಂಕ್ಷಿಗಳನ್ನು ಗುರುತಿಸಲಾಗುವುದು. ಬಳಿಕ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.