ಆಡಿಯೋ ಪ್ರಕರಣದ ಎಎಸ್​ಐಟಿ ತನಿಖೆ ನಡೆಸದಂತೆ ಬಿಜೆಪಿ ಸದಸ್ಯರಿಂದ ಸ್ಪೀಕರ್​ಗೆ ಮನವಿ

ಬೆಂಗಳೂರು: ಆಪರೇಷನ್​ ಕಮಲದ ಆಡಿಯೋ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸುವ ನಿರ್ಧಾರದ ವಿರುದ್ಧ ಬಿಜೆಪಿ ಸದನದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದರೆ, ಆಡಳಿತ ಪಕ್ಷ ಮತ್ತು ಸ್ಪೀಕರ್​ ಈ ನಿಲುವಿನಿಂದ ಹಿಂದೆ ಸರಿಯದಿರಲು ನಿರ್ಧರಿಸಿದೆ.

ಸರ್ಕಾರದ ವಿರುದ್ಧದ ಹೋರಾಟದಲ್ಲಿ ಬಿಜೆಪಿಯ ಮಾಧುಸ್ವಾಮಿ, ಶ್ರೀರಾಮುಲು, ಸುರೇಶ್​ ಕುಮಾರ್​, ಬೋಪಯ್ಯ ಮತ್ತಿತರರು ಮಾತನಾಡಿದರು.

ಬಿಜೆಪಿಯಿಂದ ಮೊದಲಿಗೆ ಮಾತನಾಡಿದ ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ, “ದೊಡ್ಡ ಮನಸ್ಸು ಮಾಡಿ ಈ ಪ್ರಕರಣ ಇಲ್ಲಿಗೆ ಕೈ ಬಿಡಿ. ತಪ್ಪಾಗಿದೆ. ನಾವು ತಪ್ಪು ಒಪ್ಪಿಕೊಳ್ಳುತ್ತೇವೆ. ತನಿಖೆಯ ವಿಚಾರದಲ್ಲಿ ನಮಗೇನೂ ಹಠವಿಲ್ಲ. ಆದರೆ, ಎಸ್​ಐಟಿ ತನಿಖೆಯ ವಿಚಾರದಲ್ಲಿ ನಮಗೆ ದೊಡ್ಡ ಹಠವಿದೆ. ಆ ವಿಚಾರದಲ್ಲಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಿಮ್ಮ ಕಾಲದಲ್ಲಿ ಶಾಸಕರನ್ನು ಕ್ರಿಮಿನಲ್ ಪ್ರಕರಣದ ವ್ಯಾಪ್ತಿಗೆ ತರುವ ಕೆಲಸ ಆಗುವುದು ಬೇಡ,” ಎಂದರು.

ನಂತರ ಮಾತನಾಡಿದ ಶಾಸಕ ಶ್ರೀರಾಮುಲು, ನಿಮ್ಮ (ರಮೇಶ್​ಕುಮಾರ್​) ಪ್ರಾಮಾಣಿಕತೆ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಸದನದಲ್ಲಿ ನೀವು ದೊಡ್ಡ ಸ್ಥಾನದಲ್ಲಿ ಇದ್ದೀರಿ. ಸ್ಪೀಕರ್ ಆಗಿ ನೀವು ಎರಡು ಕಡೆಯವರಿಗೂ ನ್ಯಾಯ ಕೊಡಬೇಕು,” ಎಂದು ಮನವಿ ಮಾಡಿದರು.

ಶಾಸಕ ಸುರೇಶ್​ಕುಮಾರ್​ ಮಾತನಾಡಿ, ಮಂಗಳೂರು ಶಾಸಕ ರಾಜೇಶ್ ನಾಯಕ್ ಭಾನುವಾರ ಬೆಂಗಳೂರಿಗೆ ಬರುತ್ತಿದ್ದಾಗ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಿಧಾನ ಪರಿಷತ್ ಸದಸ್ಯರೊಬ್ಬರು ನಾಳೆ ಈ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಲಾಗುತ್ತದೆ ಎಂದಿದ್ದಾರೆ. ವಿಧಾನ ಪರಿಷತ್ ಸದಸ್ಯರು ಜ್ಯೋತಿಷಿಯೇನಲ್ಲ. ಅಂದರೆ ಈ ಪ್ರಕರಣ ನಿಷ್ಪಕ್ಷಪಾತವಾಗಿ ನಡೆಯುವುದಿಲ್ಲ ಎಂದರ್ಥ. ನಂತರ ಪ್ರಕರಣ ಯಾವ ಮಟ್ಟಕ್ಕೆ ಹೋಗುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು. ಹಾಗಾಗಿ ಎಸ್​ಐಟಿ ತನಿಖೆಗೆ ಬೇಡ,” ಎಂದು ಒತ್ತಾಯಿಸಿದರು.

ಮಾಜಿ ಸ್ಪೀಕರ್​ ಬೋಪಯ್ಯ ಮಾತನಾಡಿ, ” ಸ್ಪೀಕರ್ ಮೇಲೆ ಬಂದಿರುವ ಆರೋಪ ಸುಳ್ಳು ಎಂದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಇದು ಎರಡು ವ್ಯಕ್ತಿಗಳ ನಡುವೆ ನಡೆದ ಸಂಭಾಷಣೆ. ಹೀಗೆ ಆಗಬಾರದಿತ್ತು. ಆದರೆ, ಆಗಿ ಹೋಗಿದೆ. ಬಜೆಟ್ ಮಂಡನೆ ಬಿಟ್ಟು ಮುಖ್ಯಮಂತ್ರಿಯಾದವರು ಸುದ್ದಿಗೋಷ್ಠಿ ಕರೆದು ಸಭಾಧ್ಯಕ್ಷರ ಹೆಸರು ಪ್ರಕಟಿಸುವ ಅಗತ್ಯವೇನಿತ್ತು. ಸಭಾಧ್ಯಕ್ಷರ ಕೊಠಡಿಯಲ್ಲೇ ಸಭೆ ಕರೆದು ಮೂರು ಪಕ್ಷಗಳ ಪ್ರಮುಖರ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬಹುದಿತ್ತು,” ಎಂದು ಹೇಳಿದರು.

ಈ ಮೂಲಕ ಎಸ್​ಐಟಿ ತನಿಖೆ ಬೇಡವೆಂದು ನಿಲುವು ತಳೆದಿರುವ ಬಿಜೆಪಿ ಸ್ಪೀಕರ್​ ಮೂಲಕ ಆಡಳಿತ ಪಕ್ಷದ ಮೇಲೆ ಒತ್ತಡ ಹೇರುವ ಪ್ರಯತ್ನಗಳನ್ನು ಸದನದಲ್ಲಿ ಮಾಡಿತು.