ಲೋಕಸಭೆ ಚುನಾವಣೆ ನಂತರದ ಮೊದಲ ಸಂಸದೀಯ ಪಕ್ಷದ ಸಭೆ ರದ್ದುಗೊಳಿಸಿದ ಬಿಜೆಪಿ: ಹಿರಿಯ ನಾಯಕನ ಅಗಲಿಕೆಯೇ ಕಾರಣ

ನವದೆಹಲಿ: ಇಂದು ನಡೆಯಬೇಕಿದ್ದ ಬಿಜೆಪಿ ಸಂಸದೀಯ ಪಕ್ಷದ ಸಭೆ ರದ್ದುಗೊಂಡಿದೆ. ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಸಂಸದರ ಮೊದಲ ಸಭೆಯನ್ನು ಇಂದು ಬೆಳಗ್ಗೆ 9.30ಕ್ಕೆ ಆಯೋಜಿಸಲಾಗಿತ್ತು. ಆದರೆ ಇಂದು ನಡೆಯುತ್ತಿಲ್ಲ ಎಂದು ಪಕ್ಷ ತಿಳಿಸಿದೆ.

ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಹಾಗೂ ರಾಜ್ಯಸಭಾ ಸದಸ್ಯ ಮದನ್​ ಲಾಲ್​ ಸೈನಿ ಅವರು ನಿನ್ನೆ ಶ್ವಾಸಕೋಶ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಈ ಸಭೆ ರದ್ದುಗೊಳಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮದನ್​ ಲಾಲ್​ ಅವರು ದೆಹಲಿಯ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸೋಮವಾರ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡ ಹಿನ್ನೆಲೆಯಲ್ಲಿ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಸಂಜೆ ಸುಮಾರು 7ಗಂಟೆಗೆ ಮೃತಪಟ್ಟಿದ್ದಾರೆ.

ಮದನ್​ಲಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮದನ್​ ಲಾಲ್​ ಜೀ ಸಾವು ನಮ್ಮ ಬಿಜೆಪಿ ಕುಟುಂಬಕ್ಕೆ ದೊಡ್ಡ ನಷ್ಟ. ರಾಜಸ್ಥಾನದಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಅವರ ಕೊಡುಗೆ ಅಪಾರ. ಎಲ್ಲರೊಂದಿಗೆ ಬೆರೆತು ಸಾಮರಸ್ಯದಿಂದ ಇರುತ್ತಿದ್ದರು. ಅವರ ಈ ಸ್ವಭಾವದಿಂದಲೇ ಎಲ್ಲರಿಂದ ಗೌರವಕ್ಕೆ ಪಾತ್ರರಾಗಿದ್ದರು. ಓಂ ಶಾಂತಿ ಎಂದು ಟ್ವೀಟ್​ ಮಾಡಿದ್ದಾರೆ.

ಗೃಹ ಸಚಿವ ಅಮಿತ್​ ಷಾ ಅವರು ಕೂಡ ಟ್ವೀಟ್​ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೇ ಅಂತಿಮ ದರ್ಶನ ಪಡೆದಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರು ಮದನ್​ ಲಾಲ್​ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಆ ದೇವರು ಕುಟುಂಬಕ್ಕೆ ನೀಡಲಿ. ಮದನ್​ಲಾಲ್ ಅವರ ಆತ್ಮ ಶಾಂತಿಯಲ್ಲಿ ನೆಲೆಸಲಿ ಎಂದು ಹೇಳಿದ್ದಾರೆ. ಮದನ್​ ಅವರ ಸಾವು ಶಾಕ್​ ಹಾಗೂ ದುಃಖ ನೀಡುವ ಸುದ್ದಿ ಎಂದು ಟ್ವೀಟ್​ ಮಾಡಿದ್ದಾರೆ.

Leave a Reply

Your email address will not be published. Required fields are marked *