ಕಣ್ಣೂರು ವಿಮಾನ ನಿಲ್ದಾಣ ಷಾ ಮೊದಲ ಪ್ರಯಾಣಿಕ

ಕಾಸರಗೋಡು: ಪೂರ್ವನಿಗದಿತ ಕಾರ್ಯಕ್ರಮದನ್ವಯ ಬಿಜೆಪಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಮಿತ್ ಷಾ ಕಣ್ಣೂರು ವಿಮಾನ ನಿಲ್ದಾಣಕ್ಕೆ ಶನಿವಾರ ಬೆಳಗ್ಗೆ 11.50ಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ಈ ಮೂಲಕ ಉದ್ಘಾಟನೆಗೂ ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೊದಲ ಪ್ರಯಾಣಿಕರಾದರು.

ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೆ, ಸಿ.ಕೆ ಪದ್ಮನಾಭನ್ ಸಹಿತ ಬಿಜೆಪಿಯ ಹಲವು ಮುಖಂಡರು, ರಾಜ್ಯಸಭಾ ಸದಸ್ಯರ ಸಹಿತ ಸಾವಿರಾರು ಮಂದಿ ಬೆಂಬಲಿಗರು ಅಮಿತ್‌ಷಾ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಕಣ್ಣೂರು ಜಿಲ್ಲಾ ಬಿಜೆಪಿ ಸಮಿತಿಗಾಗಿ ನಿರ್ಮಿಸಿದ ನೂತನ ಕಚೇರಿ ಉದ್ಘಾಟನೆ, ಕಣ್ಣೂರು ಪಿಣರಾಯಿಯಲ್ಲಿ ರಾಜಕೀಯ ಹಿಂಸಾಚಾರದಿಂದ ಸಾವನ್ನಪ್ಪಿದ ಪಕ್ಷದ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ ನಂತರ ಶಿವಗಿರಿ ಮಠಕ್ಕೆ ತೆರಳಿದರು.