ಪಾಲಿಕೆ ಆಯುಕ್ತೆ ವಿರುದ್ಧ ಕ್ರಮಕ್ಕೆ ಆಗ್ರಹ

ಶಿವಮೊಗ್ಗ: ಮಹಾನಗರ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ ಮೇಲೆ ಆಯುಕ್ತೆ ಚಾರುಲತಾ ಸೋಮಲ್ ಸುಳ್ಳು ದೂರು ದಾಖಲಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಮುಖಂಡರು ಶನಿವಾರ ಡಿಸಿ ಕಚೇರಿ ಎದುರು ಬಾಯಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು.

ಲೋಕಸಭೆ ಉಪ ಚುನಾವಣೆ ನೀತಿ ಸಂಹಿತೆ ಪರಿಣಾಮ ಪಾಲಿಕೆ ಅಧಿಕಾರಿಗಳೇ ಸಾಂಸ್ಕೃತಿಕ ದಸರಾ ನಾಡಹಬ್ಬವನ್ನು ವೈಭವಯುತವಾಗಿ ಪರಂಪರೆಗೆ ಅನುಗುಣವಾಗಿ ಆಚರಿಸಬಹುದಿತ್ತು. ಆದರೆ ನೀರಸವಾಗಿ ದಸರಾ ಆಚರಿಸಿ ಶಿವಮೊಗ್ಗ ಜನರ ಭಾವನೆಗೆ ನೋವು ತಂದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ದಸರಾ ಉತ್ಸವವನ್ನು ವೈಭವದಿಂದ ಆಚರಿಸುವಂತೆ ಚನ್ನಬಸಪ್ಪ ಮೊಬೈಲ್ ಮೂಲಕ ಆಯುಕ್ತರಿಗೆ ಹೇಳಿದ್ದಕ್ಕೆ ಅವರ ಮೇಲೇ ದೂರು ದಾಖಲಿಸಲಾಗಿದೆ. ಇದು ಚುನಾಯಿತ ಪ್ರತಿನಿಧಿಗಳಿಗೆ ಮಾಡಿದ ಅಪಮಾನವಾಗಿದೆ ಎಂದು ದೂರಿದರು.

ನಗರ ಚುನಾವಣಾಧಿಕಾರಿ ಮತ್ತು ಪಾಲಿಕೆ ಆಯುಕ್ತರಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಚಾರುಲತಾ ಸೋಮಲ್ ಅವರು ಚುನಾಯಿತ ಪ್ರತಿನಿಧಿ ವಿರುದ್ಧವೇ ದೂರು ದಾಖಲು ಮಾಡಿದ್ದು, ಅವರು ಸಾಮಾನ್ಯ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಾರೆ ಎಂಬ ನಂಬಿಕೆ ದೂರವಾಗಿದೆ ಎಂದರು.

ಪ್ರತಿ ವರ್ಷ ಶಿವಪ್ಪ ನಾಯಕ ಅರಮನೆಯಲ್ಲಿ ಆಯೋಜಿಸುತ್ತಿದ್ದ ಸಾಂಸ್ಕೃತಿಕ ದಸರಾ ಸ್ಥಗಿತಗೊಳಿಸಿದ್ದು, ಈ ವರ್ಷವೂ ಆಚರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಶಾಸಕರಾದ ಕೆ.ಎಸ್.ಈಶ್ವರಪ್ಪ, ಎಸ್.ರುದ್ರೇಗೌಡ, ಕಾರ್ಪೆರೇಟರ್​ಗಳಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಸುವರ್ಣ ಶಂಕರ್, ಸುರೇಖಾ ಮುರಳೀಧರ್, ಮುಖಂಡರಾದ ಎಸ್.ದತ್ತಾತ್ರಿ, ನಾಗರಾಜ್, ಡಿ.ಸೋಮಸುಂದರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.