ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ

ಚಿಂಚೋಳಿ: ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರ ದೇಶದ ಚಿತ್ರಣವೇ ಬದಲಾಗಲಿದೆ. ಹೀಗಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದಕ್ಕಾಗಿ ಬೀದರ್ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಸುನೀಲ್ ವಲ್ಲ್ಯಾಪುರೆ ಮನವಿ ಮಾಡಿದರು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬೀದರ್ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಶನಿವಾರ ಬೆಳಗ್ಗೆ 9ಕ್ಕೆ ಲಕ್ಷ್ಮೀ ದೇವಾಲಯದಿಂದ ಡೊಳ್ಳು ವಾದ್ಯಗಳೊಂದಿಗೆ ಪ್ರಚಾರ ಆರಂಭಿಸಿ, ವಿವಿಧ ಬಡಾವಣೆಗಳಲ್ಲಿ ಮನೆ- ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಂಶಾಡಳಿತ ಮತ್ತು ಸ್ವಾರ್ಥ ರಾಜಕೀಯದಿಂದ ಜನ ರೋಸಿ ಹೋಗಿದ್ದಾರೆ. `ಮತ್ತೊಂದು ಬಾರಿ ನರೇಂದ್ರ ಮೋದಿ’ ಎಂಬ ಘೋಷ ವಾಕ್ಯದೊಂದಿಗೆ ದೇಶದ ಜನ ಸಾಗುತ್ತಿದ್ದಾರೆ ಎಂದರು.
ಮುಂಬರುವ ದಿನಗಳಲ್ಲಿ ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಮತ ನೀಡಿ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಿ ಎಂದು ಕೋರಿದರು.
ಪ್ರಮುಖರಾದ ಲಕ್ಷ್ಮಣ ಆವಂಟಿ, ಭೀಮಶೆಟ್ಟಿ ಮುರುಡಾ, ಸಂತೋಷ ಗಡಂತಿ, ಅಜೀತ ಪಾಟೀಲ್, ರವಿಕಾಂತ ಹೊಸಬಾವಿ, ಶಿವಕುಮಾರ ಪೋಚಾಲಿ, ಶಶಿಧರ ಕಳಸ್ಕರ್, ಲಕ್ಷ್ಮೀಕಾಂತ ಸುಂಕದ, ಸಂಗಪ್ಪ ಮಾಸ್ಟರ್, ಅಲ್ಲಮಪ್ರಭು ಪಾಟೀಲ್, ಶ್ರೀನಿವಾಸ ಘಾಲಿ, ಪ್ರದೀಪ ಮೇತ್ರಿ, ರಾಧಾಕೃಷ್ಣ, ಸುನೀಲ ಲೊಡ್ಡನೂರ್, ಮೋಗಲಪ್ಪ ಕರಕಟ್ಟಿ, ದಶರಥ ಬಿರಾಪುರ, ನಾಗರಾಜ ನಾಟೀಕಾರ ಇತರರಿದ್ದರು.