ರಾಹುಲ್‌ ಗಾಂಧಿ ಮಂದಬುದ್ಧಿಯವ ಎಂದಿದ್ದ ಬಿಜೆಪಿ ಸಂಸದೆಯಿಂದಲೇ ಈಗ ಹೊಗಳಿಕೆ!

ಡೆಹರಾಡೂನ್‌: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಪ್ರಬುದ್ಧತೆ ಇಲ್ಲ ಎಂದು ಟೀಕಿಸಿದ್ದ ಬಿಜೆಪಿ ಸಂಸದೆ ಸರೋಜ್‌ ಪಾಂಡೆ ಇದೀಗ ರಾಹುಲ್ ಗಾಂಧಿ ಅವರು ಪ್ರಬುದ್ಧತೆಯ ಕೆಲ ಲಕ್ಷಣಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಛತ್ತೀಸ್‌ಗಢದ ರಾಜ್ಯಸಭಾ ಸಂಸದೆಯಾಗಿರುವ ಪಾಂಡೆ, ಈ ಹಿಂದೆ ರಾಹುಲ್‌ ಗಾಂಧಿಯವರು ಮಂದ ಬುದ್ಧಿಯವರು ಎಂದು ಹೇಳಿ ಟೀಕಿಸಿದ್ದರು.

ಅವರೀಗ ಪ್ರಬುದ್ಧತೆಯ ಕೆಲವು ಚಿಹ್ನೆಗಳನ್ನು ತೋರಿಸುತ್ತಿದ್ದಾರೆ ಎಂದು ಇತ್ತೀಚಿಗಿನ ರಾಹುಲ್‌ ಗಾಂಧಿ ಅವರ ರಾಜಕೀಯ ನಡೆ ಕುರಿತು ಪ್ರಶ್ನಿಸಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

“ವ್ಯಾಪಂ ಹಗರಣವನ್ನು ಕಾಂಗ್ರೆಸ್‌ ಈ ಹಿಂದೆ ಹೇಗೆ ರಾಜಕೀಯಕ್ಕೆ ಬಳಸಿಕೊಂಡಿತ್ತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಹಾಗಿದ್ದರೂ ಅದು ಅವರಂದುಕೊಂಡತೆ ಕೆಲಸ ಮಾಡಲಿಲ್ಲ. ನಿರೀಕ್ಷೆಯಂತೇ ಬಿಜೆಪಿ ನೇತೃತ್ವದ ಸರ್ಕಾರವು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂಬುದು ಬಹಿರಂಗವಾಗಿತ್ತು. ಆದ್ದರಿಂದಲೇ ಈಗ ರಫೇಲ್‌ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ,” ಎಂದು ಅವರು ಹೇಳಿದರು.

ಕೋಕ ಕೋಲಾ ಸಂಸ್ಥಾಪಕರು ನಿಂಬೆ ಪಾನಕವನ್ನು ಮಾರುತ್ತಿದ್ದಾರೆ ಎಂದಿದ್ದ ರಾಹುಲ್‌ ಗಾಂಧಿ ಅವರನ್ನು 2018ರಲ್ಲಿ ಪಾಂಡೆ ಅವರು ಮಂದ ಬುದ್ಧಿಯವ ಎಂದು ಹೀಯಾಳಿಸಿದ್ದರು.

ರಾಹುಲ್‌ ಮಾತುಗಳು ಆಶ್ಚರ್ಯವೆನಿಸುತ್ತವೆ. ಅವರು ಖಂಡಿತವಾಗಿಯೂ ಕಲಿಯಲು ಪ್ರಯತ್ನಿಸುತ್ತಿರಬಹುದು. ಆದರೆ ಕಲಿಕೆಗೆ ನಿರ್ದಿಷ್ಟವಾದ ವಯಸ್ಸಿರುತ್ತದೆ. 40 ನೇ ವಯಸ್ಸಿನ ನಂತರ ಕಲಿಯುವ ವ್ಯಕ್ತಿಯನ್ನು ಕಲಿತವರು ಎಂದು ಹೇಳಲಾಗುವುದಿಲ್ಲ. ಇಂಥವರನ್ನು ಮಂದಬುದ್ಧಿಯ ವ್ಯಕ್ತಿಗಳು ಎಂದು ಕರೆಯಲಾಗುತ್ತದೆ ಎಂದು ಹೇಳಿದ್ದರು. (ಏಜೆನ್ಸೀನ್)