ಷಾ ಸವಾಲು ಗೆದ್ದ ಕರಾವಳಿಯ ಬಿಜೆಪಿ ಶಾಸಕರು

ವಿಜಯವಾಣಿ ಸುದ್ದಿಜಾಲ ಮಂಗಳೂರು

ತನ್ನ ಕ್ಷೇತ್ರದಲ್ಲಿ ಲೀಡ್ ಕಾಯ್ದುಕೊಳ್ಳಲು ವಿಫಲರಾದ ಸಚಿವ ಖಾದರ್
ಬಿಜೆಪಿ ಶಾಸಕರು ತಮ್ಮ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯ ಲೀಡ್ ಕಾಯ್ದುಕೊಳ್ಳಲೇ ಬೇಕು.. ಇದು ಬಿಜೆಪಿ ಶಾಸಕರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೀಡಿದ್ದ ಕಟ್ಟುನಿಟ್ಟಿನ ಆದೇಶ. ಈಗ ಕರಾವಳಿಯ ಶಾಸಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನೀಡಿದ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದ.ಕ. ಮತ್ತು ಉಡುಪಿಯ ಎಲ್ಲ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯ ಲೀಡ್ ಮೀರಿ ಬಿಜೆಪಿ ಮತ ಬಾಚಿಕೊಂಡಿದೆ.
ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ರಾಜ್ಯದ ಬಿಜೆಪಿ ಶಾಸಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಅಮಿತ್ ಷಾ, ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಸಾಲದು; ತಮ್ಮ ಕ್ಷೇತ್ರದಲ್ಲಿ ಲೀಡ್ ಕಾಯ್ದುಕೊಳ್ಳಲೇ ಬೇಕು ಎಂದು ಶಾಸಕರಿಗೆ ಸೂಚಿಸಿದ್ದರು.

ಸಾಧನೆ ಪರಿಗಣನೆ: ಲೋಕಸಭೆ ಚುನಾವಣೆ ಬಳಿಕ ಕರ್ನಾಟಕ ಸರ್ಕಾರ ಉಳಿಯುವುದಿಲ್ಲ. ಯಾವುದೇ ಸಂದರ್ಭ ವಿಧಾನಸಭೆ ಚುನಾವಣೆ ಬರಬಹುದು. ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು. ವಿಧಾನಸಭಾ ಕ್ಷೇತ್ರವಾರು ಪಡೆದ ಮತವನ್ನು ಶಾಸಕರ ಸಾಧನೆ ಎಂದು ಪರಿಗಣಿಸಲಾಗುವುದು. ಲೋಕಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಮತ ಕಡಿಮೆಯಾಗದಂತೆ ಶಾಸಕರು ಎಚ್ಚರ ವಹಿಸಬೇಕೆಂದು ಷಾ ಖಡಕ್ ಸೂಚನೆ ನೀಡಿದ್ದರು.

ನೆಲೆ ಭದ್ರ: ದ.ಕ. ಜಿಲ್ಲೆಯ 7 ಹಾಗೂ ಉಡುಪಿಯ 5 ಬಿಜೆಪಿ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಲೀಡ್ ಕೊಡುವ ಸವಾಲು ಎದುರಾಗಿತ್ತು.
ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ ಮತಕ್ಕಿಂತಲೂ ಅಧಿಕ ಮತ ಗಳಿಸುತ್ತೇವೆ ಎನ್ನುವ ವಿಶ್ವಾಸ ಬಿಜೆಪಿ ಪಾಳಯದಲ್ಲಿತ್ತು. ಜತೆಗೆ ಮೋದಿ ಅಲೆ ಶಾಸಕರಿಗೆ ವರದಾನವಾಗಿ ಪರಿಣಮಿಸಿತು. ಇದರಿಂದ ವಿಧಾನಸಭೆಯಲ್ಲಿ ಪಡೆದ ಲೀಡ್‌ಗಿಂತ ಎರಡು ಪಟ್ಟು, ಮೂರು ಪಟ್ಟು ಅಧಿಕ ಮುನ್ನಡೆ ಸಾಧಿಸುವುದು ಸಾಧ್ಯವಾಗಿದೆ. ತನ್ಮೂಲಕ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ನೆಲೆ ಭದ್ರ ಪಡಿಸಿಕೊಂಡಿದ್ದಾರೆ.

ಉಸ್ತುವಾರಿ ಸಚಿವರಿಗೆ ಹಿನ್ನಡೆ:
ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂದು ಕೆಪಿಸಿಸಿ ಕೂಡ ಕಾಂಗ್ರೆಸ್ ಸಚಿವರಿಗೆ ಸೂಚನೆ ನೀಡಿತ್ತು. ಈ ಹಿಂದಿನ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಸತತ ಸೋಲು ಕಂಡಿದ್ದರೂ, ಮಂಗಳೂರು (ಹಿಂದಿನ ಉಳ್ಳಾಲ) ಕ್ಷೇತ್ರದಲ್ಲಿ ಲೀಡ್ ಸಾಧಿಸಿತ್ತು. ಆದರೆ ಈಗ ಕಾಂಗ್ರೆಸ್‌ನ ಏಕೈಕ ಶಾಸಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಗೆ ತಮ್ಮ ಕ್ಷೇತ್ರದಲ್ಲೇ ಹಿಂದಿನ ಲೀಡ್ ಕಾಯ್ದುಕೊಳ್ಳುವುದು ಸಾಧ್ಯವಾಗಿಲ್ಲ.

2013ರ ಚುನಾವಣೆಯಲ್ಲಿ ಖಾದರ್ ಮಂಗಳೂರು ಕ್ಷೇತ್ರದಲ್ಲಿ 29,111 ಮತಗಳ ಅಂತರದಿಂದ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು. 2018ರ ಚುನಾವಣೆಯಲ್ಲಿ ಗೆಲುವಿನ ಅಂತರ 19,739 ಮತಗಳಿಗೆ ಇಳಿದಿತ್ತು. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯ ಸೋಲು-ಗೆಲುವು ಈ ಕ್ಷೇತ್ರದಲ್ಲಿ ದೊರೆಯುವ ಲೀಡ್ ಮೇಲೆ ಅವಲಂಬಿಸಿತ್ತು. ಆದರೆ ಇಲ್ಲಿ ಕಾಂಗ್ರೆಸ್ 11,392 ಮತಗಳ ಲೀಡ್ ಮಾತ್ರ ಸಾಧಿಸಿದೆ. ಎಸ್‌ಡಿಪಿಐ ಜಿಲ್ಲೆಯಲ್ಲೇ ಅತಿ ಹೆಚ್ಚು 10,042 ಮತಗಳನ್ನು ಈ ಕ್ಷೇತ್ರದಲ್ಲಿ ಪಡೆದಿರುವುದು ಗಮನಾರ್ಹ ಅಂಶ.

Leave a Reply

Your email address will not be published. Required fields are marked *