ನಟಿ ರಮ್ಯಾರ ಹ್ಯಾಟ್ರಿಕ್​ ಸಾಧನೆಯನ್ನು ಕೊಂಡಾಡಿದ ಬಿಜೆಪಿ ಶಾಸಕ ಸುರೇಶ್​ ಕುಮಾರ್​

ಬೆಂಗಳೂರು: ಕಾಂಗ್ರೆಸ್​ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ, ನಟಿ ರಮ್ಯಾ ಅವರು ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್​ ಕುಮಾರ್​ ಅವರು ವ್ಯಂಗ್ಯವಾಡಿದ್ದಾರೆ.

ತಮ್ಮ ಟ್ವಿಟರ್​ ಖಾತೆಯ ಮೂಲಕ ನಟಿ ರಮ್ಯಾ ಅವರನ್ನು ಕುಟುಕಿರುವ ಸುರೇಶ್​ ಕುಮಾರ್​, ಕೊನೆಗೂ ಮತದಾನ ಮಾಡುವುದಕ್ಕೆ ಬರದೆ ನಟಿ ರಮ್ಯಾ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇವರು ಕಾಂಗ್ರೆಸ್​ನ ಸೋಷಿಯಲ್ ಮೀಡಿಯಾ ಪ್ರಮುಖರು ಎಂದು ಕಾಲೆಳೆದಿದ್ದಾರೆ.

ರಾಜ್ಯದಲ್ಲಿ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿಯೂ ನಟಿ ರಮ್ಯಾ ಮತದಾನ ಮಾಡಲು ಗೈರಾಗಿದ್ದರು. ಮಂಡ್ಯದಲ್ಲಿ ಸಂಸದರಾಗಿದ್ದ ಸಿ.ಎಸ್​. ಪುಟ್ಟರಾಜು ಅವರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ತೆರವಾಗಿದ್ದ ಸಂಸದ ಸ್ಥಾನಕ್ಕೆ ನಡೆದ ಲೋಕಸಭೆಯ ಉಪಚುನಾವಣೆಯಲ್ಲಿಯೂ ರಮ್ಯಾ ಕಾಣಲೇ ಇಲ್ಲ. ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡದೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಹಿಂದೆ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ಮಿಜೋರಾಂನ ಪಂಚರಾಜ್ಯ ವಿಧಾನಸಭಾ ಚುನಾವಣೆ ಸಮಯದಲ್ಲಿ ಎಲ್ಲರೂ ಮತದಾನ ಮಾಡಿ ಎಂದು ಟ್ವೀಟ್​ ಮಾಡುವ ಮೂಲಕ ಟ್ರೋಲ್​ಗೆ ಒಳಗಾಗಿದ್ದರು. ಮೊದಲು ನೀವು ವೋಟ್​ ಮಾಡಿ ಆನಂತರ ನಮಗೆ ಹೇಳಿ ಎಂದು ನೆಟ್ಟಿಗರು ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *