2 ಲಕ್ಷಕ್ಕೂ ಅಧಿಕ ಸದಸ್ಯತ್ವ ಬಿಜೆಪಿ ಗುರಿ

ಪಿ.ಬಿ. ಹರೀಶ್ ರೈ ಮಂಗಳೂರು

ನಿಗದಿತ ಸಂಖ್ಯೆಗೆ ಮಿಸ್ ಕಾಲ್ ನೀಡಿದರೆ ಸದಸ್ಯತ್ವ ನೋಂದಣಿಯ ಲಿಂಕ್ ಸಿಗುತ್ತದೆ. ಇದರಲ್ಲಿ ಫೋಟೊ, ವಿಳಾಸ ಸಹಿತ ವಿವರ ಅಪ್‌ಲೋಡ್ ಮಾಡಿದರೆ ಸದಸ್ಯತ್ವ ಚೀಟಿ ಲಭ್ಯ. ಮೊಬೈಲ್ ಮೂಲಕವೇ ಸದಸ್ಯತ್ವ ನೋಂದಣಿ ಮಾಡುವ ವಿನೂತನ ತಂತ್ರವನ್ನು ಈ ಬಾರಿ ಬಿಜೆಪಿ ಬಳಸಿದ್ದು, ಕಾರ್ಯಕರ್ತರು ತಮ್ಮ ಸದಸ್ಯತ್ವ ನೋಂದಣಿಯ ಚೀಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುತ್ತಿದ್ದಾರೆ.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಭರ್ಜರಿ ಗೆಲುವಿನ ಬಳಿಕ ದ.ಕ. ಜಿಲ್ಲಾ ಬಿಜೆಪಿ ಈಗ ಸದಸ್ಯತ್ವ ಅಭಿಯಾನದ ಜೋಶ್‌ನಲ್ಲಿದೆ. ವಾಟ್ಸಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಶಾಸಕರು ಸೇರಿದಂತೆ ಬಿಜೆಪಿ ನಾಯಕರ, ಕಾರ್ಯಕರ್ತರ ಸದಸ್ಯತ್ವ ನೋಂದಣಿಯ ಚೀಟಿ ಹರಿದಾಡುತ್ತಿದೆ. ಯುವಕರು, ಕಾಲೇಜು ವಿದ್ಯಾರ್ಥಿಗಳು ಇದರಿಂದ ಆಕರ್ಷಿತರಾಗಿ ಸದಸ್ಯತ್ವ ನೋಂದಣಿಯಲ್ಲಿ ತೊಡಗಿದ್ದಾರೆ ಎನ್ನುತ್ತಾರೆ ಬಿಜೆಪಿ ನಾಯಕರು.

ಮತದಾರ ಕಾರ್ಯಕರ್ತ: ಬಿಜೆಪಿ ಬೆಂಬಲಿಸುವ ಮತದಾರರನ್ನು ಈ ಬಾರಿ ಪಕ್ಷದ ಸದಸ್ಯರಾಗಿ ನೋಂದಣಿ ಮಾಡುವುದು ಬಿಜೆಪಿಯ ಉದ್ದೇಶ. ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 25 ಸಾವಿರದಂತೆ 2 ಲಕ್ಷಕ್ಕೂ ಅಧಿಕ ಮಂದಿಯನ್ನು ಸದಸ್ಯರಾಗಿ ನೋಂದಾಯಿಸುವ ಗುರಿ ಬಿಜೆಪಿ ಹೊಂದಿದೆ. ದೇಶಾದ್ಯಂತ ಬಿಜೆಪಿಯ ಸದಸ್ಯತ್ವ ಅಭಿಯಾನ ಆರಂಭಗೊಂಡಿದ್ದು, ಜೂ.29ರಂದು ಸಂಸದೆ ಶೋಭಾ ಕರಂದ್ಲಾಜೆ ದ.ಕ.ಜಿಲ್ಲಾ ಮಟ್ಟದ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಆಗಸ್ಟ್ 11ರವರೆಗೆ ಅಭಿಯಾನ ನಡೆಯಲಿದೆ.

ಸಕ್ರಿಯ ಕಾರ್ಯಕರ್ತ: 25 ಮಂದಿಯನ್ನು ಸದಸ್ಯರಾಗಿ ನೋಂದಾಯಿಸುವ ಕಾರ್ಯಕರ್ತನಿಗೆ ಪಕ್ಷದ ಸಕ್ರಿಯ ಕಾರ್ಯಕರ್ತನಾಗುವ ಅವಕಾಶವಿದೆ. ಅಂಥವರ ಹೆಸರು ಪ್ರತೀ ವಿಧಾನಸಭೆ ಕ್ಷೇತ್ರ ಸಮಿತಿಯಿಂದ ಜಿಲ್ಲಾ ಸಮಿತಿಗೆ ರವಾನೆಯಾಗಲಿದೆ. ಜಿಲ್ಲಾ ಮಟ್ಟದ ಸಮಿತಿ ಈ ಹೆಸರುಗಳನ್ನು ಪರಿಶೀಲಿಸಿ ಸಕ್ರಿಯ ಕಾರ್ಯಕರ್ತರ ಪಟ್ಟಿ ಅಂತಿಮಗೊಳಿಸುತ್ತದೆ. ಬಳಿಕ ಪಟ್ಟಿ ರಾಜ್ಯ ಸಮಿತಿಗೆ ರವಾನೆಯಾಗಲಿದೆ. ಸದಸ್ಯತ್ವ ನೋಂದಣಿ ಪೂರ್ಣಗೊಂಡ ಬಳಿಕ ಬೂತ್ ಮಟ್ಟದಲ್ಲಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸಹಿತ ಸಮಿತಿ ರಚನೆಯಾಗಲಿದೆ. ಬಳಿಕ ಹಂತಹಂತವಾಗಿ ಕ್ಷೇತ್ರ (ಮಂಡಲ), ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ನೂತನ ಪದಾಧಿಕಾರಿಗಳ ಕಾರ್ಯ ನಡೆಯಲಿದೆ.

ವಿಸ್ತಾರಕ್ ಯೋಜನೆ: ಸದಸ್ಯತಾ ನೋಂದಣಿಗಾಗಿ ಬಿಜೆಪಿ ವಿಸ್ತಾರಕ್ ಯೋಜನೆ ರೂಪಿಸಿದೆ. ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕ, ಹಿರಿಯ ನಾಯಕರ ಸಹಿತ 60 ಮಂದಿಯ ಪಟ್ಟಿಯನ್ನು ಪಕ್ಷ ಸಿದ್ಧಪಡಿಸಿದೆ. ಈ 60 ಮಂದಿಯ ತಂಡಕ್ಕೆ ಸದಸ್ಯತಾ ನೋಂದಣಿ ಬಗ್ಗೆ ವಿಶೇಷ ತರಬೇತಿ ನೀಡಲಾಗಿದ್ದು, ಅವರು ಜು.23ರಿಂದ 30ರವರೆಗೆ ಬೂತ್ ಮಟ್ಟದಲ್ಲಿ ಪ್ರವಾಸ ನಡೆಸಿ ಸದಸ್ಯತ್ವ ನೋಂದಣಿ ನಡೆಸಲಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಬಿರುಸಿನಿಂದ ನಡೆದಿದೆ. ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ನೋಂದಣಿ ಕಾರ್ಯದಲ್ಲಿ ತೊಡಗಿದ್ದಾರೆ. ಮೊಬೈಲ್ ಮೂಲಕ ನೋಂದಣಿ ಮಾಡುವ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಆಂಡ್ರಾೃಯ್ಡಾ ಫೋನ್‌ನಲ್ಲಿ ಲಿಂಕ್ ಮೂಲಕ ನೇರವಾಗಿ ನೋಂದಣಿ ಮಾಡುವ ಸೌಲಭ್ಯವಿದೆ. ನಿರ್ದಿಷ್ಟ ಸಂಖ್ಯೆಗೆ ಹೆಸರು, ಮೊಬೈಲ್ ನಂಬರ್, ವಿಳಾಸ ಎಸ್‌ಎಂಎಸ್ ಮಾಡುವ ಮೂಲಕವೂ ಸದಸ್ಯತ್ವ ಪಡೆಯಬಹುದು.
– ಗೋಪಾಲಕೃಷ್ಣ ಹೇರಳೆ, ಸಂಚಾಲಕ, ದ.ಕ.ಬಿಜೆಪಿ ಸದಸ್ಯತ್ವ ಅಭಿಯಾನ

Leave a Reply

Your email address will not be published. Required fields are marked *