ದೇಶಕ್ಕೆ ಬಿಜೆಪಿ ಕೊಡುಗೆ ಶೂನ್ಯ

ಆಲ್ದೂರು: ಹಿಂದುತ್ವವನ್ನು ಆಧಾರವಾಗಿಟ್ಟುಕೊಂಡು ನಮ್ಮಿಂದ ಮಾತ್ರ ಹಿಂದುಗಳನ್ನು ರಕ್ಷಿಸಲು ಸಾಧ್ಯ ಎಂದು ಜನರ ದಿಕ್ಕುತಪ್ಪಿಸಿ ಅಧಿಕಾರಕ್ಕೆ ಬಂದ ಬಿಜೆಪಿ ದೇಶಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಎಂಎಡಿಬಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಆರೋಪಿಸಿದರು.

ಪಟ್ಟಣದಲ್ಲಿ ಏರ್ಪಡಿಸಿದ್ದ ಎಸ್ಸಿ ಮೋರ್ಚಾ ಪದಗ್ರಹಣ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಉದ್ಯೋಗ ಸೃಷ್ಟಿಸುತ್ತೇವೆ, ಬಡವರು, ಮಧ್ಯಮ ವರ್ಗದವರನ್ನು ಅಭಿವೃದ್ಧಿ ಮಾಡುತ್ತವೆ ಎಂದು ಸುಳ್ಳು ಹೇಳಿದ್ದಾರೆ. ಈವರೆಗೆ ಎಷ್ಟು ಕಾರ್ಖಾನೆ ಸ್ಥಾಪಿಸಿ ಉದ್ಯೋಗ ನೀಡಿದ್ದಾರೆ ಎಂಬುದನ್ನು ಖಚಿತ ಪಡಿಸಲಿ ಎಂದರು.

ಇಂದಿರಾ ಗಾಂಧಿ ಪ್ರಧಾನಿಯಾದಾಗ ದಲಿತರಿಗೆ ಭೂಮಿ, ರಸ್ತೆ, ವಿದ್ಯುತ್, ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸಿದರು. ಸಂವಿಧಾನ ರಚನೆಯಿಂದ ಹಿಂದುಳಿದವರ ಬದುಕು ಗಟ್ಟಿಗೊಂಡಿದೆ ಎಂದು ಹೇಳಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಸಂವಿಧಾನ ಬದಲಾವಣೆಗೆ ಮೋದಿ ಸರ್ಕಾರ ಹುನ್ನಾರ ನಡೆಸುತ್ತಿದೆ. ದಲಿತರಿಗೆ ಕಾಂಗ್ರೆಸ್ ಅನೇಕ ಕೊಡುಗೆ ನೀಡಿದೆ. ಹಿಂದುಳಿದ ಮಕ್ಕಳ ಉಚಿತ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್​ಗಳನ್ನು ಸ್ಥಾಪಿಸಿದೆ. ವಿದೇಶ ಪ್ರವಾಸ, ಸಾಲ ಮನ್ನಾ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.