ಸಿಕ್ಕಿರುವ ‘ಉಪ’ಅವಕಾಶವನ್ನೂ ಕೈಚೆಲ್ಲಿದ ಬಿಜೆಪಿ ನಾಯಕರು

|ರಮೇಶ ದೊಡ್ಡಪುರ

ಬೆಂಗಳೂರು: ವಿಶ್ವದ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾದರೂ ರಾಜ್ಯದಲ್ಲಿ ಅಖಿಲ ಕರ್ನಾಟಕ ವ್ಯಾಪ್ತಿ ಹೊಂದಿಲ್ಲ ಎಂಬ ಹಣೆಪಟ್ಟಿ ಕಳಚಿಕೊಳ್ಳುವ ಅವಕಾಶವನ್ನೂ ಈ ಉಪಚುನಾವಣೆಯಲ್ಲಿ ಬಿಜೆಪಿ ಕಳೆದುಕೊಂಡಿದೆ.

ರಾಜ್ಯದ ಮೂರನೇ ಎರಡಕ್ಕಿಂತಲೂ ಹೆಚ್ಚು ಅಂದರೆ 88 (ಶೇ.39.2) ವಿಧಾನಸಭಾ ಕ್ಷೇತ್ರ ಹೊಂದಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಅಸ್ತಿತ್ವವೇ ಭದ್ರವಾಗಿಲ್ಲ. ಸದ್ಯ ಉಪಚುನಾವಣೆ ನಡೆಯುತ್ತಿರುವ ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆ ಚುನಾವಣೆಗೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನೇ ಹಾಕಿಲ್ಲ. ಬಿಜೆಪಿಗೆ ಇದು ವರವಾಗಿದ್ದರೂ ಉತ್ತಮ ಮತಗಳಿಸಿ ಸಂಘಟನೆ ಸದೃಢಗೊಳಿಸಿಕೊಳ್ಳುವ ಸುವರ್ಣ ಅವಕಾಶ ಬಳಸಿಕೊಳ್ಳದಿರುವ ಬಗ್ಗೆ ಪಕ್ಷದಲ್ಲೇ ಅಪಸ್ವರ ಕೇಳಿಬಂದಿದೆ. ಇನ್ನು, ಈ ಚುನಾವಣೆ ಉಸ್ತುವಾರಿ ವಹಿಸಿಕೊಂಡ ನಾಯಕರು ಎತ್ತ ಹೋಗಿದ್ದಾರೆ ಎಂದು ಹುಡುಕುವ ಸ್ಥಿತಿಯಿದೆ.

ಪರಿಚಿತ ಮುಖವಿದ್ದರೆ ಮತ: ಸದ್ಯ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಸ್ತಿತ್ವ ಇಲ್ಲವೇ ಇಲ್ಲ ಎಂಬಂತಿಲ್ಲ. 1998ರಲ್ಲಿ ಶೇ.13.06, 1999ರಲ್ಲಿ ಶೇ.10.31 ಮತ ಪಡೆದಿತ್ತು. 2009ರಲ್ಲಿ ಪ್ರಭಾವಿ ವ್ಯಕ್ತಿತ್ವವಾಗಿದ್ದ ಎಲ್.ಆರ್. ಶಿವರಾಮೇಗೌಡ ಕಣಕ್ಕಿಳಿದಾಗ ಈ ಪ್ರಮಾಣ ಶೇ.14.04ಕ್ಕೇರಿತ್ತು. 2014ರಲ್ಲಿ ಮತ್ತೆ ಶೇ.7.29ಕ್ಕೆ ಕುಸಿದಿದೆ.

ರಾಮನಗರದಲ್ಲೂ ಇದೇ ಸ್ಥಿತಿ ಇದೆ. 2018ರಲ್ಲಿ ಕೇವಲ ಶೇ.2.84, 2013ರಲ್ಲಿ ಶೇ.1.9 ಮತವನ್ನು ಬಿಜೆಪಿ ಅಭ್ಯರ್ಥಿ ಪಡೆದಿದ್ದಾರೆ. 2008ರಲ್ಲಿ ಎಂ.ಆರ್.ರುದ್ರೇಶ್ ಕಣದಲ್ಲಿದ್ದಾಗ ಶೇ.18.52 ಮತ ಪಡೆದಿದ್ದರು. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮತಗಳು ಸಣ್ಣ ಪ್ರಮಾಣದಲ್ಲಿದ್ದರೂ ಪರಿಚಿತ ವ್ಯಕ್ತಿ ಕಣಕ್ಕಿಳಿದರೆ ಪಕ್ಷದ ಪ್ರಭಾವ ಸಹಜವಾಗಿಯೇ ಹೆಚ್ಚಳವಾಗುತ್ತಿತ್ತು. ಮತ ಪ್ರಮಾಣವೂ ಗೆಲುವಿನ ಸಮೀಪಕ್ಕೆ ಬರುತ್ತಿತ್ತು.

ಠೇವಣಿ ಉಳಿದರೆ ಸಾಕಿದೆ!

ಈ ಬಾರಿ ಮಂಡ್ಯದಲ್ಲಿ ‘5 ರೂ. ಡಾಕ್ಟರ್’ ಎಂದೇ ಖ್ಯಾತಿ ಪಡೆದ ಡಾ.ಶಂಕರೇ ಗೌಡ ಅವರನ್ನು ಅಥವಾ ಮಾಜಿ ಎಂಎಲ್​ಸಿ ಅಶ್ವತ್ಥ ನಾರಾಯಣಗೌಡ ಅವರನ್ನು ಕಣಕ್ಕಿಳಿಸಲು ಒತ್ತಾಯಿಸಲಾಗಿತ್ತು. ಸ್ವತಃ ಆರ್.ಅಶೋಕ್ ಅವರೇ ಸ್ಪರ್ಧಿಸಿದ್ದರೂ ಸಂಘಟನೆ ಬಲವರ್ಧನೆಗೆ ಉತ್ತಮ ಎಂಬ ಬೇಡಿಕೆಯಿತ್ತು. ಕೊನೆಗೆ ಅಪರಿಚಿತರೊಬ್ಬರು ಕಣಕ್ಕಿಳಿದಿದ್ದಾರೆ. ರಾಜಕೀಯ ವಲಯದಲ್ಲಿ ಸಕ್ರಿಯರಾಗಿರುವವರನ್ನು ಹೊರತುಪಡಿಸಿ ಜನಸಾಮಾನ್ಯರಿಗೆ ಮಾಜಿ ಶಾಸಕ ದೊಡ್ಡಬೋರೇಗೌಡರ ಪರಿಚಯವಿಲ್ಲ. ಅವರ ಸಹೋದರನ ಪುತ್ರ ಎಂದು ಹೇಗೆ ಪ್ರಚಾರ ಮಾಡುವುದು? ರಾಮನಗರದಲ್ಲೂ ಇದೇ ಅವಕಾಶವಿತ್ತು. 2008ರಲ್ಲಿ ಸ್ಪರ್ಧಿಸಿ ಉತ್ತಮ ಮತ ಪಡೆದಿದ್ದ ರುದ್ರೇಶ್ ಸ್ಪರ್ಧೆ ಬಹುತೇಕ ಖಚಿತ ಎನ್ನುವಷ್ಟರಲ್ಲೇ ಚಂದ್ರಶೇಖರ್ ಕಣಕ್ಕಿಳಿಸಲಾಗಿದೆ. ಪರಿಚಿತ ವ್ಯಕ್ತಿತ್ವವಿದ್ದರೆ, ಪಕ್ಷವನ್ನು ಬ್ರಾ್ಯಂಡ್ ಮಾಡಬಹುದು. ನಾಯಕತ್ವವೇ ಇಲ್ಲದೆ ಮುನ್ನಡೆಯುವುದು ಹೇಗೆ? ಗೆಲ್ಲುವುದಿರಲಿ, ಮಂಡ್ಯದಲ್ಲಿ 1.5 ಲಕ್ಷ ಮತ ಹಾಗೂ ರಾಮನಗರದಲ್ಲಿ ಠೇವಣಿ ಉಳಿಸಿಕೊಂಡರೆ ಸಾಕಿದೆ ಎನ್ನುವ ಸ್ಥಿತಿ ಇದೆ ಎಂಬುದನ್ನು ಪಕ್ಷದ ರಾಜ್ಯ ಪದಾಧಿಕಾರಿಗಳೇ ಹೇಳುತ್ತಾರೆ.

ಕ್ಷೇತ್ರ ಉಸ್ತುವಾರಿಗಳು ಎಲ್ಲಿ ಹೋದರು?

ರಾಮನಗರ ಕ್ಷೇತ್ರಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಿ.ಪಿ.ಯೋಗೇಶ್ವರ್, ಮುನಿರಾಜು ಗೌಡ, ಆನೇಕಲ್ ನಾರಾಯಣಸ್ವಾಮಿ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ. ಮಂಡ್ಯಕ್ಕೆ ಆರ್.ಅಶೋಕ್, ಪ್ರತಾಪ್ ಸಿಂಹ, ನಾಗೇಂದ್ರ, ಡಿ.ಎಸ್.ವೀರಯ್ಯಗೆ ಹೊಣೆ ನೀಡಲಾಗಿದೆ. ಟಿಕೆಟ್ ಅಂತಿಮಗೊಳಿಸುವ ಸಮಯ ಹೊರತುಪಡಿಸಿ ಆರ್.ಅಶೋಕ್ ಹಾಗೂ ಸದಾನಂದಗೌಡರು ಬಿರುಸಿನ ಪ್ರಚಾರ ನಡೆಸಿದ್ದನ್ನು ಕಂಡಿಲ್ಲ. ಇನ್ನುಳಿದ ನಾಯಕರನ್ನು ಕೇಳುವಂತೆಯೇ ಇಲ್ಲ.

ಸೋಲಲೆಂದೇ ಸೆಣೆಸಿದರೆ!

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಇದೇ ಮೊದಲ ಬಾರಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಗಣಿತದ ಲೆಕ್ಕಾಚಾರದಂತೆ, ಎರಡೂ ಪಕ್ಷಗಳು ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಿದ ಕೂಡಲೆ ಎರಡೂ ಪಕ್ಷದ ಮತದಾರರು ಒಟ್ಟಾಗಿ ಮತ ಚಲಾಯಿಸುವುದಿಲ್ಲ. ಸ್ಥಳೀಯವಾಗಿ ಕಚ್ಚಾಡಿಕೊಂಡಿರುವ ಅನೇಕ ಕ್ಷೇತ್ರಗಳ ಸ್ಥಳೀಯ ಕಾರ್ಯಕರ್ತರು ಒಂದಾಗುವುದು ಕನಸಿನ ಮಾತು. ಸದ್ಯ ಮಂಡ್ಯ ರಾಮನಗರದ ಸ್ಥಿತಿ ಹಾಗೆಯೇ ಇದೆ. ಈ ಸ್ಥಳೀಯ ನಾಯಕರು, ಮತದಾರರನ್ನು ಸೆಳೆದು ಎರಡನೇ ಸ್ಥಾನದಲ್ಲಿ ಉತ್ತಮ ಮತ ಪಡೆದರೆ ಮುಂದಿನ ಚುನಾವಣೆಗೆ ಅನುಕೂಲವಾಗುತ್ತಿತ್ತು. ಎರಡೂ ಕಡೆ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಒಂದೆಡೆ ಆರ್.ಅಶೋಕ್ ಹಾಗೂ ಮತ್ತೊಂದೆಡೆ ಸಿ.ಟಿ.ರವಿ ಅವರಿಗೆ ಉಸ್ತುವಾರಿ ನೀಡಿ ಟಾರ್ಗೆಟ್ ಗೊತ್ತುಪಡಿಸಿದ್ದರೆ ಇಡೀ ಚುನಾವಣೆ ಚಿತ್ರಣವೇ ಬದಲಾಗುತ್ತಿತ್ತು. ಸೋಲಲೆಂದೇ ಕಣಕ್ಕಿಳಿದಂತಿದೆ ಇಂದಿನ ಸ್ಥಿತಿ ಎಂದು ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಟ್ವಿಟ್ಟರ್​ನಲ್ಲಿ ಕಂಡಿದ್ದೇ ಬಂತು..

ಉದ್ದೇಶಪೂರ್ವಕವಾಗಿಯೋ ಅಥವಾ ಸಹಜವಾಗಿಯೋ ಒಕ್ಕಲಿಗ ಸಮುದಾಯದವರು ಎಂದು ಗುರುತಿಸಿಕೊಂಡ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಉಸ್ತುವಾರಿಗಳಲ್ಲಿ ಒಬ್ಬರಾಗಿ ನೇಮಕ ಮಾಡಲಾಗಿದೆ. ಆದರೆ ಮಂಡ್ಯದತ್ತ ತೆರಳಿ ಸಂಘಟನೆ ಮಾಡಿದ್ದು ಮಾತ್ರ ಇಲ್ಲ. ಮೈಸೂರಿನಲ್ಲಿ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕೇಂದ್ರ ಸಚಿವರ ಭೇಟಿ, ವಾಣಿಜ್ಯ ಮಳಿಗೆಗಳು, ಉದ್ಯಮ ಸಂಸ್ಥೆಗಳ ಉದ್ಘಾಟನೆ ಕಾರ್ಯಕ್ರಮಗಳ ಮಾಹಿತಿ ನಿರಂತರವಾಗಿ ಫೇಸ್​ಬುಕ್-ಟ್ವಿಟ್ಟರ್ ಖಾತೆಗಳ ಮೂಲಕ ಜನರನ್ನು ತಲುಪುತ್ತಿವೆ. ಇನ್ನು ಜಮಖಂಡಿ ಉಸ್ತುವಾರಿ ಮಾಜಿ ಸಚಿವ ಜಗದೀಶ ಶೆಟ್ಟರ್ ವಿದೇಶ ಪ್ರವಾಸದಲ್ಲಿದ್ದಾರೆ. ಅ.12ಕ್ಕೇ ವಿದೇಶಕ್ಕೆ ತೆರಳಿದ್ದರೂ ಅಬ್ದುಲ್ ಕಲಾಂ ಹುಟ್ಟುಹಬ್ಬ, ನವರಾತ್ರಿ, ವಿಶ್ವ ಆಹಾರ ದಿನ, ಮಧ್ವ ಜಯಂತಿ, ಅಮಿತ್ ಷಾ ಹುಟ್ಟುಹಬ್ಬಗಳಿಗೆ ಶುಭಾಶಯ, ಕೇಂದ್ರ ಸರ್ಕಾರದ ಸಾಧನೆಗಳ ರೀಟ್ವೀಟ್ ಮಾತ್ರ ಅವರ ಖಾತೆಯಿಂದ ಆಗುತ್ತಲೇ ಇದೆ. ಸಂಸದ ಪ್ರಲ್ಹಾದ ಜೋಶಿ, ನಳೀನ್​ಕುಮಾರ್ ಕಟೀಲು, ಶಾಸಕರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಸೋಮಣ್ಣ, ಸುರೇಶ್​ಕುಮಾರ್ ಮೊದಲಾದವರು ಪ್ರಚಾರದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ.

ವಿವಿಧೆಡೆ ಪ್ರಚಾರ

ಶಿವಮೊಗ್ಗ: ಮಂಡ್ಯದಲ್ಲಿ ಪಕ್ಷದ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಪರವಾಗಿ ಪ್ರಚಾರಕ್ಕೆ ಅ.23ರಂದು ಪ್ರಚಾರಕ್ಕೆ ತೆರಳುತ್ತೇನೆ. 24ರಂದು ಜಮಖಂಡಿಯಲ್ಲಿ ವಿವಿಧ ಸಭೆಗಳನ್ನು ನಡೆಸುತ್ತೇನೆ. 25ರಂದು ಮತ್ತೆ ಶಿವಮೊಗ್ಗದಲ್ಲಿ ಪ್ರಚಾರ ಸಭೆ ನಡೆಸಿ ನಂತ ಬಳ್ಳಾರಿ ಹಾಗೂ ರಾಮನಗರದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಸೋಮವಾರ ದಿನವಿಡೀ ಶಿವಮೊಗ್ಗದ ಸ್ವಗೃಹದಲ್ಲಿ ಪಕ್ಷದ ವಿವಿಧ ಸ್ತರಗಳ ಮುಖಂಡರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.