ಕಾಂಗ್ರೆಸ್ ಕಾಲದಲ್ಲಿ ಉಗ್ರವಾದ ಹೆಚ್ಚಳ: ಪ್ರಧಾನಿ ನರೇಂದ್ರ ಮೋದಿ ಟೀಕೆ

ನವದೆಹಲಿ: ಕಾಂಗ್ರೆಸ್ ಆಡಳಿತಾವಧಿಯ ಭಾರತದಲ್ಲೂ ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟವಾದಂತೆ ಉಗ್ರ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಭಯೋತ್ಪಾದನೆಯು ಜಮ್ಮು-ಕಾಶ್ಮೀರದ ಒಂದೆರಡು ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದಿಂಡೋರಿಯಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ದಾಳಿಯನ್ನು ಉಲ್ಲೇಖಿಸಿದರು. 2014ಕ್ಕೂ ಮೊದಲು ಭಾರತದಲ್ಲೂ ಇದೇ ಸ್ಥಿತಿ ಇತ್ತು. ಮುಂಬೈ, ಪುಣೆ, ಗುಜರಾತ್​ಗಳಲ್ಲಿ ಭಯೋತ್ಪಾದನಾ ಕೃತ್ಯ ನಡೆದಿದ್ದವು. ನಿತ್ಯವೂ ದೇಶದ ಒಂದಿಲ್ಲೊಂದು ಕಡೆ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದರು. ಪಾಕಿಸ್ತಾನ ಪ್ರಚೋದಿತ ದಾಳಿ ತಡೆಯಲು ವಿಫಲವಾಗಿದ್ದ ಕಾಂಗ್ರೆಸ್ ಹಾಗೂ ಎನ್​ಸಿಪಿ, ಮೊಸಳೆ ಕಣ್ಣೀರು ಸುರಿಸುತ್ತಿದ್ದವು ಎಂದರು.

ಭಾರತವೀಗ ಭಯೋತ್ಪಾದನೆಮುಕ್ತ ದೇಶವಾಗುತ್ತಿದೆ. ನಮ್ಮ ಯೋಧರು ನಿತ್ಯವೂ ಉಗ್ರರನ್ನು ಸದೆಬಡಿಯುತ್ತಿದ್ದಾರೆ. ದಾಳಿ ನಡೆದಾಗಲೆಲ್ಲ ಅಸಹಾಯಕವಾಗಿ ನಿಲ್ಲುವ ಸ್ಥಿತಿ ಈಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಾಮಾಣಿಕ ಸರ್ಕಾರ ಸಾಧ್ಯ

ದೇಶದಲ್ಲಿ ಪ್ರಾಮಾಣಿಕ ಸರ್ಕಾರವನ್ನು ನಡೆಸುವುದು ಸಾಧ್ಯ ಎಂದು ಎನ್​ಡಿಎ ತೋರಿಸಿಕೊಟ್ಟಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕುಗಳಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದವರಿಗೆ ಶಿಕ್ಷೆ ಕೊಡಿಸುವ ಕೆಲಸವಾಗುತ್ತಿದೆ. ಯುಪಿಎ ಸರ್ಕಾರ ಕೋಟ್ಯಧಿಪತಿಗಳಿಗೆ ಸಾಲ ನೀಡಿದರೆ, ಎನ್​ಡಿಎ ಸರ್ಕಾರ ಬಡವರಿಗೆ ಯಾವುದೇ ಖಾತ್ರಿ ಪಡೆಯದೆ ಸಾಲ ನೀಡುತ್ತಿದೆ ಎಂದರು.

ಪಶ್ಚಿಮ ಬಂಗಾಳದಿಂದ ಮೋದಿ ಸ್ಪರ್ಧೆ?

ಕೋಲ್ಕತ: ಪಶ್ಚಿಮ ಬಂಗಾಳದ ಒಂದು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯ ಬಿಜೆಪಿ ಘಟಕ ಒತ್ತಾಯಿಸುತ್ತಿದೆ. ಈ ಪ್ರಸ್ತಾಪದ ಕುರಿತು ಬಿಜೆಪಿ ವರಿಷ್ಠರು ಸ್ಪಷ್ಟ ಹೇಳಿಕೆಯನ್ನೂ ನೀಡುತ್ತಿಲ್ಲ. ರಾಜ್ಯದಲ್ಲಿ ಮೋದಿ ಸ್ಪರ್ಧೆಯಿಂದ ಬಿಜೆಪಿಗೆ ಬಲಬರಲಿದೆ. ಹೀಗಾಗಿ ರಾಜ್ಯದಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದೇವೆ ಎಂದು ಬಿಜೆಪಿ ಮುಖಂಡ ಮುಕುಲ್ ರಾಯ್ ತಿಳಿಸಿದ್ದಾರೆ. ಪಶ್ಚಿಮಬಂಗಾಳ ಬಿಜೆಪಿ ಪ್ರಭಾರಿ ಕೈಲಾಶ್ ವಿಜಯವರ್ಗೀಯ ಪ್ರತಿಕ್ರಿಯಿಸಿ, ರಾಜ್ಯ ಘಟಕದ ಮನವಿಯನ್ನು ಕೇಂದ್ರ ನಾಯಕರಿಗೆ ತಿಳಿಸಲಾಗಿದೆ ಎಂದಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ಅಮಿತ್ ಷಾ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ಇಂತಹ ಆಲೋಚನೆಗಳಿಲ್ಲ ಎಂದು ತಿಳಿಸಿದ್ದಾರೆ.

ಬಾಲಿವುಡ್ ಕಿಲಾಡಿಯ ಮೋದಿ ಸಂದರ್ಶನ?

ನವದೆಹಲಿ: ಬಾಲಿವುಡ್ ನಟ ಅಕ್ಷಯ್ಕುಮಾರ್​ಪ್ರಧಾನಿ ನರೇಂದ್ರ ಮೋದಿ ಸಂದರ್ಶನವನ್ನು ಮಾಡಿದ್ದು, ಶೀಘ್ರವೇ ಪ್ರಸಾರವಾಗಲಿದೆ ಎಂಬ ಸುದ್ದಿಯಾಗಿದೆ. ಸೋಮವಾರ ಬೆಳಗ್ಗೆ ಪ್ರಧಾನಿಯನ್ನು ಭೇಟಿಯಾಗಿದ್ದ ಅಕ್ಷಯ್ಕುಮಾರ್, ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ಬಳಿಕ ಹೊರಬಂದು, ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಇದೆಲ್ಲ ಊಹಾಪೋಹ ಎಂದು ಎಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ‘ಅಪರಿಚಿತ ಹಾಗೂ ಗುರುತಿಲ್ಲದ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ರೋಮಾಂಚನ ಹಾಗೂ ಭೀತಿ ಮೂಡಿಸಿದೆ. ಇಂಥದ್ದೊಂದು ಅನುಭವ ಇದೇ ಮೊದಲ ಬಾರಿಗೆ ಉಂಟಾಗಿದೆ. ಅಪ್​ಡೇಟ್​ಗಾಗಿ ನಿರೀಕ್ಷಿಸಿ ಎಂದು ಅಕ್ಷಯ್ಕುಮಾರ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಂದರ್ಶನಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ.

ಮೀಸಲಾತಿ ಹಿಂಪಡೆಯಲ್ಲ

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮೀಸಲಾತಿ ವ್ಯವಸ್ಥೆ ಯನ್ನು ತೆಗೆದುಹಾಕಲಿದೆ ಎಂದು ವಿರೋಧ ಪಕ್ಷಗಳು ಸುಳ್ಳುಸುದ್ದಿ ಹರಡುತ್ತಿವೆ. ಆದರೆ, ತಾನು ಪ್ರಧಾನಿಯಾಗಿರುವವರೆಗೆ ಮೀಸಲಾತಿಗೆ ಯಾವುದೇ ಧಕ್ಕೆಯಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಈಗಿರುವ ಮೀಸಲಾತಿ ಪ್ರಮಾಣದಲ್ಲೂ ಯಾವುದೇ ಬದಲಾವಣೆ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಬಡತನ ಆಧರಿಸಿ ಸಾಮಾನ್ಯ ವರ್ಗಕ್ಕೂ ಮೀಸಲು ನೀಡುವ ಐತಿಹಾಸಿಕ ಹೆಜ್ಜೆ ಇಡಲಾಗಿದೆ ಎಂದು ಸ್ಪಷ್ಟಪಡಿಸಿದರು.