ಮತ್ತೆ ಬಲಿಷ್ಠ ಸರ್ಕಾರ ಬರಲಿದೆ!

ಲೋಕಸಭಾ ಚುನಾವಣೆಯ ಕಾವು ಏರಿದೆ. ಪ್ರಚಾರದ ಭರಾಟೆ ಜೋರಾಗಿದೆ. ಬಿಜೆಪಿ ಪ್ರಣಾಳಿಕೆ ಬಿಡುಗಡೆ ಬಳಿಕ ಮತ್ತಷ್ಟು ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಪ್ರಮುಖ ವಿಷಯಗಳು, ಕಾರ್ಯತಂತ್ರಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೊಂದಿಗೆ ದಿಗ್ವಿಜಯ 24×7 ನ್ಯೂಸ್ ಸಂಪಾದಕ ಸುಭಾಷ್ ಹೂಗಾರ ಸಂದರ್ಶನ ನಡೆಸಿದ್ದು, ಎನ್​ಡಿಎಗೆ ಪೂರ್ಣ ಬಹುಮತದ ವಿಶ್ವಾಸವನ್ನು ಷಾ ವ್ಯಕ್ತಪಡಿಸಿದ್ದಾರೆ.

# ಬಾಲಾಕೋಟ್​ನಲ್ಲಿ ಭಯೋತ್ಪಾದಕರ ಸಾವಿನ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳ ಜತೆಗೆ ಪ್ರತಿಪಕ್ಷಗಳ ಮುಖಂಡರೂ ಸಂಶಯ ಪಡುತ್ತಿದ್ದಾರಲ್ಲ?

ಈ ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೊಡಾ, ಅಖಿಲೇಶ್, ಮಾಯಾವತಿ ವಿದೇಶಿ ಮಾಧ್ಯಮಗಳ ವರದಿಗಳನ್ನೇಕೆ ಓದುತ್ತಾರೆ? ನಿಮ್ಮ ವಿಜಯವಾಣಿಯನ್ನೇಕೆ ಓದುವುದಿಲ್ಲ? ವಿಜಯವಾಣಿ ಓದಿದ್ದರೆ ನಿಜ ಏನೆಂದು ಗೊತ್ತಾಗುತ್ತಿತ್ತು. ಬಾಲಾಕೋಟ್ ದಾಳಿಯ ಯಶಸ್ಸಿನ ಬಗ್ಗೆ ಸಂಶಯ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ.

# ಐದು ವರ್ಷಗಳ ಮೋದಿ ಅಧಿಕಾರಾವಧಿಯಲ್ಲಿ ಜನತೆಗೆ ಕೊಟ್ಟ ಭರವಸೆಗಳೆಲ್ಲ ಈಡೇರಿವೆಯೇ?

ನಿಶ್ಚಿತವಾಗಿಯೂ ಮೋದಿ ಅಧಿಕಾರಾವಧಿಯಲ್ಲಿ ಗಣನೀಯ ಕೆಲಸಗಳಾಗಿವೆ. ಜನಧನ ಮೂಲಕ ದೇಶದ ಕೋಟ್ಯಂತರ ಜನರು ಬ್ಯಾಂಕ್ ಖಾತೆ ಹೊಂದುವಂತಾಗಿದೆ. 60 ಕೋಟಿ ಜನರನ್ನು ದೇಶದ ಅರ್ಥವ್ಯವಸ್ಥೆ ಜತೆ ಜೋಡಿಸುವುದು ಸಾಮಾನ್ಯ ಕೆಲಸವಲ್ಲ. 70 ವರ್ಷಗಳಲ್ಲಿ 12 ಕೋಟಿ ಎಲ್​ಪಿಜಿ ವಿತರಣೆಯಾಗಿತ್ತು, ನಾವು ಐದು ವರ್ಷದಲ್ಲಿ 13 ಕೋಟಿ ಎಲ್​ಪಿಜಿ ಸಂಪರ್ಕ ಕೊಟ್ಟಿದ್ದೇವೆ. ಈ ಪೈಕಿ 7 ಕೋಟಿ ಗ್ರಾಮೀಣ ಪ್ರದೇಶದ ಬಡಕುಟುಂಬಗಳು. 2.5 ಕೋಟಿ ಬಡವರಿಗೆ ಮನೆನಿರ್ವಣ ಮಾಡಿದ್ದೇವೆ. 2.35 ಲಕ್ಷ ಮನೆಗಳಿಗೆ ವಿದ್ಯುತ್ ತಲುಪಿಸಿದ್ದೇವೆ, 8 ಕೋಟಿ ಬಡ ಕುಟುಂಬಗಳಿಗೆ ಶೌಚಗೃಹ ನಿರ್ವಣವಾಗಿದೆ. 50 ಕೋಟಿ ಬಡವರ ಪ್ರತಿ ವರ್ಷ  5 ಲಕ್ಷ ರೂ. ವರೆಗಿನ ಆರೋಗ್ಯದ ಖರ್ಚನ್ನು ‘ಆಯುಷ್ಮಾನ್ ಭಾರತ್’ ಯೋಜನೆಯಲ್ಲಿ ಸರ್ಕಾರವೇ ಭರಿಸುತ್ತದೆ. ಈ ಎಲ್ಲ ಕ್ರಮಗಳಿಂದ ಬಡವರ ಬದುಕಿನಲ್ಲಿ ದೊಡ್ಡಮಟ್ಟದ ಸುಧಾರಣೆ ಮಾಡಿದ ಹೆಮ್ಮೆ, ಗೌರವ ಮತ್ತು ಸಮಾಧಾನದಿಂದ ನಾವು ಈ ಬಾರಿಯ ಲೋಕಸಭೆ ಚುನಾವಣೆ ಎದುರಿಸುತ್ತಿದ್ದೇವೆ.

# ಈ ಅವಧಿಯಲ್ಲಿ ಅಪೂರ್ಣಗೊಂಡಿರುವ ಕೆಲಸಗಳು ಯಾವವು?

ಬಹಳಷ್ಟು ಕೆಲಸಗಳು ಅಪೂರ್ಣವಾಗಿವೆ. 55 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ಅನುಭವಿಸುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಲಿಲ್ಲ. ಕೇವಲ ಐದು ವರ್ಷಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗದು. ಆದರೆ, ಸ್ವತಂತ್ರ ಭಾರತಕ್ಕೆ 75 ವರ್ಷಗಳು ತುಂಬುವ 2022ರ ವೇಳೆಗೆ ಈ ಎಲ್ಲ ಸಮಸ್ಯೆಗಳಿಂದ ದೇಶವನ್ನು ಮುಕ್ತ ಮಾಡಬೇಕು ಎಂಬ ಸಂಕಲ್ಪವನ್ನು ಬಿಜೆಪಿ ಮಾಡಿದೆ. ಇದನ್ನೇ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ.

# ನರೇಂದ್ರ ಮೋದಿ ಮತ್ತೊಂದು ಅವಧಿಗೆ ದೇಶದ ಪ್ರಧಾನಿ ಆಗಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದೀರಿ. ಈ ವಿಶ್ವಾಸ ಪುಲ್ವಾಮಾ ದಾಳಿ ಮತ್ತು ಬಾಲಾಕೋಟ್​ನ ಏರ್​ಸ್ಟ್ರೈಕ್ ನಂತರ ಬಂದಿದ್ದಾ? ಅಥವಾ ಮೊದಲೇ ಇತ್ತಾ?

ಈ ಎರಡೂ ಘಟನೆಗಳ ನಂತರ ನಿಶ್ಚಿತವಾಗಿಯೂ ದೇಶದಲ್ಲಿ ವಾತಾವರಣ ಬದಲಾಗಿದೆ. ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್​ನಿಂದಾಗಿ ದೇಶದ ಸೇನಾಪಡೆಗಳ ಮನೋಬಲ ಹೆಚ್ಚಾಗಿದೆ. ಸೈನಿಕರಿಗೆ ಏನು ಬೇಕಾದರೂ ಮಾಡಲು ಸಿದ್ಧವಿರುವ ಸರ್ಕಾರವೊಂದು ಕೇಂದ್ರದಲ್ಲಿ ಆಡಳಿತದಲ್ಲಿದೆ ಎಂಬ ವಿಶ್ವಾಸ ಭದ್ರತಾಪಡೆಗಳಲ್ಲಿದೆ. ಅಲ್ಲದೆ, ನಮ್ಮ ದೇಶದ ಗಡಿ ಉಲ್ಲಂಘನೆ ಮಾಡುವವರು ಮತ್ತು ನಮ್ಮ ರಾಷ್ಟ್ರೀಯ ಲಾಂಛನಗಳಿಗೆ ಅವಮಾನ ಮಾಡುವವರಿಗೆ ತಕ್ಕ ಪಾಠ ಕಲಿಸುವ ಬಲಿಷ್ಠ ಸರ್ಕಾರವಿದೆ ಎಂದು ದೇಶದ ಜನ ಹೆಮ್ಮೆ ಪಡುತ್ತಿದ್ದಾರೆ. ಮೊದಲಿಗಿಂತ ಹೆಚ್ಚು ಸುರಕ್ಷತೆಯ ಅನುಭವ ಹೊಂದಿದ್ದಾರೆ.

# ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್​ಗಳ ಶ್ರೇಯಸ್ಸು ಪಡೆಯುತ್ತೀರಿ. ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಯೋತ್ಪಾದನಾ ದಾಳಿಗೆ ಯಾರು ಹೊಣೆ? ಅದು ನಮ್ಮ ಗುಪ್ತಚರ ವಿಭಾಗದ ವೈಫಲ್ಯವಲ್ಲವೇ?

ಏರ್​ಸ್ಟ್ರೈಕ್​ನಿಂದ ಭಯೋತ್ಪಾದನೆ ಅಂತ್ಯವಾಗುತ್ತದೆ ಎಂದು ನಾವು ಎಲ್ಲೂ ಹೇಳಿಲ್ಲ. ಭಯೋತ್ಪಾದಕರು ರಹಸ್ಯವಾಗಿ ಯೋಜನೆ ರೂಪಿಸಿ, ದಿಢೀರ್​ನೇ ದಾಳಿ ಮಾಡುವುದರಿಂದ ಕೆಲವೊಮ್ಮೆ ಸಾವುನೋವು ಸಹಜ. ಆದರೆ, ನಾವು ಇಂಥ ಎಲ್ಲ ದಾಳಿಗಳಿಗೆ ಪ್ರತ್ಯುತ್ತರ ನೀಡಿದ್ದೇವೆ. ದಾಳಿಯ ಸಂಚು ರೂಪಿಸಿದ ಉಗ್ರರನ್ನು ಹುಡುಕಿ ಎನ್​ಕೌಂಟರ್ ಮಾಡಲಾಗಿದೆ. ಇದರಿಂದಾಗಿ ಪಾಕಿಸ್ತಾನ ಮತ್ತು ಭಯೋತ್ಪಾದಕರಿಗೆ ಕಠಿಣ ಸಂದೇಶ ರವಾನೆಯಾಗಿದೆ.

# ಸಂವಿಧಾನದ 370 ಕಲಂ ಮತ್ತು 35ಎ ರದ್ದು ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೀರಿ. ನಿಮ್ಮದೇ ಪೂರ್ಣ ಬಹುಮತದ ಸರ್ಕಾರವಿದ್ದರೂ ಐದು ವರ್ಷ ಏನೂ ಮಾಡದೆ ಚುನಾವಣೆ ಸಂದರ್ಭದಲ್ಲಿ ಮತ್ತದನ್ನೇ ಪ್ರಸ್ತಾಪ ಮಾಡುತ್ತಿದ್ದೀರಲ್ಲ?

ನಮ್ಮದು ಪೂರ್ಣ ಬಹುಮತದ ಸರ್ಕಾರವಾಗಿತ್ತು ಎಂಬುದು ಸರಿಯಲ್ಲ. ರಾಜ್ಯಸಭೆಯಲ್ಲಿ ನಮಗೆ ಬಹುಮತ ಇರಲಿಲ್ಲ. ಆದರೆ, ಈ ಎರಡೂ ವಿಷಯಗಳ ಬಗ್ಗೆ ನಮ್ಮ ಬದ್ಧತೆಯನ್ನು ಪ್ರಶ್ನಿಸಲಾಗದು. ಬಿಜೆಪಿ ಸ್ಥಾಪನೆಯಾದಾಗಿನಿಂದ ಈ ವಿಷಯಗಳನ್ನು ನಾವು ಹೇಳುತ್ತಿದ್ದೇವೆ. 35ಎ ಮತ್ತು 370ನೇ ಕಲಂಗಳಿಂದ ದೇಶದ ಏಕತೆ, ಅಖಂಡತೆಗೆ ಧಕ್ಕೆಯಾಗುತ್ತದೆ ಎಂಬುದು ನಮ್ಮ ಸ್ಪಷ್ಟ ನಿಲುವು. ಈಗಲೂ ಅದನ್ನೇ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ.

# ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರವಿದೆಯೇ? ಮಾತುಕತೆಯೊಂದೇ ಈ ಸಮಸ್ಯೆಗೆ ಪರಿಹಾರ ಎಂಬ ವಾದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಸುಲಭವಲ್ಲ. ಈ ಸಮಸ್ಯೆಯ ಪರಿಹಾರಕ್ಕೆ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ನಮ್ಮ ಗಡಿ ಉಲ್ಲಂಘನೆ ಮಾಡಿದರೆ ಪಾಕಿಸ್ತಾನದೊಳಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ತೋರಿಸಿದ್ದೇವೆ. ಅಮೆರಿಕ ಮತ್ತು ಇಸ್ರೇಲ್ ನಂತರ ಇಂಥ ಶಕ್ತಿ ಹೊಂದಿರುವ ಮೂರನೇ ರಾಷ್ಟ್ರ ಭಾರತ.

# ಉದ್ಯೋಗ ಸೃಷ್ಟಿ ಮತ್ತು ಕೃಷಿಕ್ಷೇತ್ರದ ಸಮಸ್ಯೆ ಬಗೆಹರಿಸಲು ಮೋದಿ ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳಿವೆ, ರೈತರ ಕುಟುಂಬಗಳಿಗೆ ವಾರ್ಷಿಕ 6 ಸಾವಿರ ರೂಪಾಯಿ ಕೊಡುವ ಘೊಷಣೆ ಇದನ್ನೇ ಬಿಂಬಿಸುತ್ತದೆ ಅಲ್ಲವೇ?

ಅನ್ನದಾತನ ಜೀವನಮಟ್ಟದಲ್ಲಿ ಸುಧಾರಣೆ ತರುವ ಉದ್ದೇಶಕ್ಕಾಗಿ ನಾವು ಹಲವಾರು ದೃಢಹೆಜ್ಜೆಗಳನ್ನು ಇರಿಸಿದ್ದೇವೆ. ರೈತರಿಗೆ ಬಡ್ಡಿರಹಿತ ಸಾಲ, 60 ವರ್ಷದ ಮೇಲ್ಪಟ್ಟ ರೈತರಿಗೆ ಪಿಂಚಣಿ, ಎಲ್ಲ ರೈತ ಕುಟುಂಬಗಳಿಗೆ ವಾರ್ಷಿಕ -ಠಿ; 6 ಸಾವಿರ ನೆರವು ಈ ದಿಕ್ಕಿನಲ್ಲಿ ನಮ್ಮ ಪ್ರಯತ್ನಗಳು. ಅಲ್ಲದೆ, ಮಣ್ಣಿನ ಆರೋಗ್ಯ ತಪಾಸಣೆಯ ವ್ಯವಸ್ಥೆ, ಬೇವುಲೇಪಿತ ಯೂರಿಯಾ ಉತ್ಪಾದನೆ, ಪ್ರಧಾನಮಂತ್ರಿ ಸಿಂಚಾಯಿ ಯೋಜನೆಯಡಿ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಮತ್ತು ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಅಧಿಕ ಬೆಂಬಲ ಬೆಲೆ ನೀಡುವಂಥ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಉದ್ಯೋಗ ಸೃಷ್ಟಿ ವಿಚಾರದಲ್ಲಿ ಹೇಳುವುದಾದರೆ, ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ ಎಂದು ಪರಿಗಣಿಸಲ್ಪಡುತ್ತದೆ. ಮೋದಿ ಸರ್ಕಾರದ ಅವಧಿಯಲ್ಲಿ ರಸ್ತೆಗಳ ನಿರ್ವಣದ ವೇಗ ಹಿಂದಿಗಿಂತ ಎರಡು ಪಟ್ಟು, ರೈಲುಹಳಿಗಳ ನಿರ್ವಣದ ವೇಗ ಎರಡೂಕಾಲು ಪಟ್ಟು ಹೆಚ್ಚಿದೆ. 14 ಕೋಟಿ ನಿರುದ್ಯೋಗಿಗಳಿಗೆ ಮುದ್ರಾಬ್ಯಾಂಕ್ ಯೋಜನೆಯಡಿ ಸಾಲ ನೀಡಲಾಗಿದೆ. ಒಂದು ಲಕ್ಷ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲಾಗಿದೆ, 8 ಕೋಟಿ ಶೌಚಗೃಹ, 2.5 ಕೋಟಿ ಮನೆಗಳ ನಿರ್ವಣ… ಇವೆಲ್ಲದರಿಂದ ಉದ್ಯೋಗ ಸೃಷ್ಟಿಯಾಗದೇ ಇರುತ್ತದೆಯೇ? ವಿರೋಧ ಪಕ್ಷಗಳ ಬಳಿ ಅಜೆಂಡಾ ಇಲ್ಲದೆ ಇರುವುದರಿಂದ ಇಂಥ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

# ಹಿಂದಿಭಾಷಿಕ ರಾಜ್ಯಗಳಲ್ಲಿ ಬಿಜೆಪಿ ರಾಜಕೀಯವಾಗಿ ಗರಿಷ್ಠ ಸ್ಥಾನಕ್ಕೆ ತಲುಪಿದೆ. ಇನ್ನು ಮುಂದೆ ಬೆಳೆಯಲು ಅವಕಾಶವೇ ಇಲ್ಲ. ಆದರೆ, ಕೆಳಗೆ ಇಳಿಯುವ ಸಾಧ್ಯತೆ ಇದೆ. ಇಂಥ ಸ್ಥಿತಿಯಲ್ಲಿ ಈ ಬಾರಿ ಮ್ಯಾಜಿಕ್ ಫಿಗರ್ ಹೇಗೆ ತಲುಪುತ್ತೀರಿ?

ಬಿಜೆಪಿ ಉನ್ನತ ಸ್ಥಿತಿಗೆ ತಲುಪುವುದು ಇನ್ನೂ ಬಾಕಿ ಇದೆ. ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾಗಳಲ್ಲಿ ಅಧಿಕಾರಕ್ಕೇರಿದಾಗಲೇ ನಾವು ಉನ್ನತ ಸ್ಥಿತಿಗೆ ತಲುಪಿದಂತೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಳೆದ ಬಾರಿ ಹೆಚ್ಚು ಸೀಟು ಗೆದ್ದಿದ್ದೇವೆ ನಿಜ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ನಮ್ಮ ಜನಪ್ರಿಯತೆ ಕಡಿಮೆ ಆಗಿಲ್ಲ. ಈಶಾನ್ಯ ಭಾರತ, ಪಶ್ಚಿಮ ಬಂಗಾಳ, ಒಡಿಶಾ, ಕೇರಳ, ಕರ್ನಾಟಕ ಸೇರಿ ಇನ್ನೂ ಕೆಲ ರಾಜ್ಯಗಳಲ್ಲಿ ಹಿಂದೆಂದೂ ಗೆಲ್ಲದ ಕನಿಷ್ಠ 70 ಸ್ಥಾನಗಳಲ್ಲಿ ಈ ಬಾರಿ ನಾವು ಗೆಲ್ಲಲಿದ್ದೇವೆ.

# ರಾಷ್ಟ್ರೀಯ ಭದ್ರತೆ ವಿಚಾರವನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪವಿದೆ. ಬಿಜೆಪಿ ಹೊರತುಪಡಿಸಿ ಬೇರೆಯವರಲ್ಲಿ ರಾಷ್ಟ್ರಪ್ರೇಮ ಇಲ್ಲವೇ?

ವಿರೋಧ ಪಕ್ಷಗಳ ಈ ಆರೋಪ ಸತ್ಯವೆಂದೇ ಭಾವಿಸೋಣ. ಅವರೂ ರಾಷ್ಟ್ರೀಯತೆ ಇಟ್ಟುಕೊಂಡು ರಾಜಕಾರಣ ಮಾಡಲಿ. ವಿರೋಧ ಪಕ್ಷಗಳನ್ನು ತಡೆದವರ್ಯಾರು? ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ಕಲಂ ರದ್ದು ಮಾಡುವುದಾಗಿ ಹೇಳಿ ಜನರ ವೋಟು ಕೇಳಲಿ, ನಾವು ಸ್ವಾಗತಿಸುತ್ತೇವೆ. ಆದರೆ, ಅವರು ಹಾಗೆ ಮಾಡುವುದಿಲ್ಲ. ಅದಕ್ಕೆ ತದ್ವಿರುದ್ಧವಾಗಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ರದ್ದುಗೊಳಿಸುವುದಾಗಿ, ದೇಶದ್ರೋಹದ ವಿರುದ್ಧದ ಕಾನೂನು ರದ್ದು ಮಾಡುವುದಾಗಿ ಹೇಳಿದ್ದಾರೆ. ವಾಸ್ತವವಾಗಿ ಇದು ವೋಟ್​ಬ್ಯಾಂಕ್ ರಾಜಕಾರಣವಲ್ಲದೆ ಬೇರೇನೂ ಅಲ್ಲ. ಅಂಥ ವೋಟ್​ಬ್ಯಾಂಕ್ ರಾಜಕಾರಣ ನಾವು ಮಾಡುವುದಿಲ್ಲ. ನಮಗೆ ಅದು ಬೇಕಾಗಿಯೂ ಇಲ್ಲ.

# ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತ ಮತ್ತು ವಿಶೇಷವಾಗಿ ಕರ್ನಾಟಕದಿಂದ ಏನು ನಿರೀಕ್ಷೆ ಇಟ್ಟುಕೊಂಡಿದ್ದೀರಿ?

ಬಹಳಷ್ಟು ನಿರೀಕ್ಷೆಗಳಿವೆ. ಕುಮಾರಸ್ವಾಮಿ ಸರ್ಕಾರ ಜನಾದೇಶದ ವಿರುದ್ಧವಾಗಿ ರಚನೆಯಾದ ಅಪವಿತ್ರ ಮೈತ್ರಿ. ಜನಾದೇಶ ಕಾಂಗ್ರೆಸ್ ವಿರುದ್ಧವಿದ್ದರೂ ಜೆಡಿಎಸ್ ತನ್ನ ಸ್ವಾರ್ಥಕ್ಕಾಗಿ ಆ ಪಕ್ಷದ ಜತೆ ಸೇರಿ ಸರ್ಕಾರ ರಚನೆ ಮಾಡಿದೆ. ಕುಟುಂಬ ರಾಜಕಾರಣದಲ್ಲೇ ಮುಳುಗಿರುವ ಕುಮಾರಸ್ವಾಮಿ ಅವರದು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ. ಕರ್ನಾಟಕದ ಜನತೆ ಇದನ್ನು ಸಹಿಸುವುದಿಲ್ಲ. ಇದರಿಂದಾಗಿ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ.

# ಇತ್ತೀಚೆಗೆ ನಡೆದ ಚುನಾವಣಾ ಪೂರ್ವ ಸಮೀಕ್ಷೆ ಗಳು ಬಿಜೆಪಿಗೆ ಪೂರ್ಣ ಬಹುಮತ ನೀಡಿಲ್ಲವಲ್ಲ?

ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ನಾವು ಎಂದೂ ಗೆಲ್ಲುವುದಿಲ್ಲ. ಆದರೆ, ಮತಗಟ್ಟೆ ಸಮೀಕ್ಷೆಗಳಲ್ಲಿ ಮತ್ತು ಮತಎಣಿಕಾ ಕೇಂದ್ರಗಳಲ್ಲಿ ಖಂಡಿತ ಗೆಲ್ಲುತ್ತೇವೆ. ಈ ಬಾರಿಯೂ ಮೇ 23ಕ್ಕೆ ಅದೇ ಆಗಲಿದೆ.

# ಸುಲಭವಾಗಿ ಗೆಲ್ಲಬಹುದಾಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್​ಗೆ ಟಿಕೆಟ್ ನೀಡದೇ ಕಬ್ಬಿಣದ ಕಡಲೆ ಮಾಡಿಕೊಂಡಿದ್ದೀರಿ ಅನಿಸುವುದಿಲ್ಲವೇ?

ಬೆಂಗಳೂರು ದಕ್ಷಿಣದಲ್ಲಿ ನಾವು ಒಬ್ಬ ಯುವಕ ನಿಗೆ ಅವಕಾಶ ನೀಡಿದ್ದೇವೆ. ತೇಜಸ್ವಿ ಸೂರ್ಯ ಅತಿ ಹೆಚ್ಚು ಅಂತರದಿಂದ ಗೆದ್ದು ಬರಲಿದ್ದಾನೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ.