ಕದನ ಕುತೂಹಲ: ಮತಕಣದಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ಅಚ್ಚರಿ ಹೆಸರು ಚಲಾವಣೆ

ಬೆಂಗಳೂರು: ಲೋಕಸಮರದ ಅಖಾಡದಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ಕೊನೇ ಹಂತದ ಕಸರತ್ತು ಆರಂಭಿಸಿರುವ ಮೂರೂ ಪಕ್ಷಗಳಲ್ಲಿ ಹೊಸ ಹೊಸ ಹೆಸರುಗಳು ರೇಸ್​ನಲ್ಲಿ ಕಾಣಿಸಿಕೊಂಡಿವೆ.

ಕೇಂದ್ರ ಬಿಜೆಪಿ ಸಭೆ ಮುಗಿದಿದ್ದರೂ ಪಟ್ಟಿ ಬಿಡುಗಡೆಗೆ ಮೋಕ್ಷ ಸಿಕ್ಕಿಲ್ಲ. ಬೆಂಗಳೂರು ಗ್ರಾಮಾಂತರಕ್ಕೆ ಬಿಜೆಪಿಯಿಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪುತ್ರಿ ನಿಶಾ ಹೆಸರು ಕೇಳಿಬರುತ್ತಿದ್ದರೆ, ಕೋಲಾರಕ್ಕೆ ಡಿ.ಎಸ್. ವೀರಯ್ಯ ಬದಲಿಗೆ ಛಲವಾದಿ ನಾರಾಯಣಸ್ವಾಮಿ ಹೆಸರು ಮುನ್ನೆಲೆಗೆ ಬಂದಿದೆ.

ಚಿತ್ರದುರ್ಗಕ್ಕೆ ಎ. ನಾರಾಯಣಸ್ವಾಮಿ, ಚಿಕ್ಕೋಡಿಗೆ ರಮೇಶ್ ಕತ್ತಿ ಬದಲು ಅಣ್ಣಾ ಸಾಹೇಬ್ ಜೊಲ್ಲೆ ಹೆಸರು ಚಾಲ್ತಿಯಲ್ಲಿದೆ. ಬಿಜೆಪಿ ಮೊದಲ ಪಟ್ಟಿ ಪ್ರಕಟವಾದ ಬಳಿಕವೇ ಈ ಕುತೂಹಲಕ್ಕೆ ತೆರೆ ಬೀಳಲಿದೆ. ಮತ್ತೊಂದೆಡೆ ಗುರುವಾರ ದೆಹಲಿಯಲ್ಲಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಶುಕ್ರವಾರ ರಾಹುಲ್ ಜತೆಗಿನ ಸಭೆಯಲ್ಲಿ ಅಂತಿಮ ಪಟ್ಟಿ ಸಿದ್ಧವಾಗುವ ಸಾಧ್ಯತೆ ಇದೆ.

ಮೈತ್ರಿಯಲ್ಲಿ ‘ಪಕ್ಷಾಂತರ’!

ಮೈತ್ರಿ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರಕ್ಕೆ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹೆಸರು ಕೇಳಿಬಂದಿದೆ. ಮೈತ್ರಿ ಪಕ್ಷಗಳಿಗೆ ಒಪ್ಪಿತವಾಗುವ ಕಾರಣ ಶಂಕರ್ ಅವರನ್ನು ‘ತಾಂತ್ರಿಕವಾಗಿ’ ಪಕ್ಷಾಂತರ ಮಾಡಿಸಿ ಕಣಕ್ಕಿಳಿಸಲು ದೇವೇಗೌಡರು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.