ಇಂದು ಬಿಜೆಪಿ ಮೊದಲ ಪಟ್ಟಿ

ಬೆಂಗಳೂರು/ನವದೆಹಲಿ: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಮೊದಲಪಟ್ಟಿ ಬಿಡುಗಡೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನ ಹಿನ್ನೆಲೆಯಲ್ಲಿ ವಿಳಂಬವಾಗಿದೆ.

ಭಾನುವಾರ ತಡರಾತ್ರಿ ನಡೆದ ಸಭೆಯಲ್ಲಿ ಮೊದಲ ಹಂತದ 91 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ರಾಜ್ಯದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಹೆಸರೂ ಮಂಗಳವಾರ ಘೋಷಣೆ ಆಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಭಾನುವಾರ ನಡೆದ ರಾಜ್ಯ ಪ್ರಮುಖರ ಸಭೆಯಲ್ಲಿ ಎಲ್ಲ ಕ್ಷೇತ್ರಗಳ ಕುರಿತೂ ರ್ಚಚಿಸಿ ಶಿಫಾರಸನ್ನು ನವದೆಹಲಿಗೆ ಕೊಂಡೊಯ್ಯಲಾಗಿದೆ. ಬಿ.ಎಸ್. ಯಡಿಯೂರಪ್ಪ ಜತೆ ಡಿ.ವಿ.ಸದಾನಂದಗೌಡ, ಪ್ರಲ್ಹಾದ್ ಜೋಷಿ, ಜಗದೀಶ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ತೆರಳಿದ್ದಾರೆ. ಮನೋಹರ್ ಪರಿಕ್ಕರ್ ನಿಧನ ನಂತರ ಗೋವಾ ಸರ್ಕಾರ ರಚನೆ ಕಸರತ್ತಿನ ಹಿನ್ನೆಲೆಯಲ್ಲಿ ಅಮಿತ್ ಷಾ ಸೇರಿ ಅನೇಕ ಬಿಜೆಪಿ ನಾಯಕರು ಪಣಜಿಯಲ್ಲಿದ್ದ ಕಾರಣಕ್ಕೆ ಎಲ್ಲ ಸಭೆಗಳೂ ಮಂಗಳವಾರಕ್ಕೆ ಮುಂದೂಡಿಕೆ ಆಗಿವೆ. ಅಮಿತ್ ಷಾ ಜತೆಗೆ ಮಂಗಳವಾರ ಬೆಳಗ್ಗೆ, ಕೇಂದ್ರ ಚುನಾವಣಾ ಸಮಿತಿ ಸಭೆ ಮಧ್ಯಾಹ್ನದ ವೇಳೆಗೆ ನಡೆಯುವ ಸಾಧ್ಯತೆಯಿದ್ದು, ಇಂದೇ ಪಟ್ಟಿ ಹೊರಬೀಳಬಹುದು.

ಹಾಸನದಲ್ಲಿ ಮಾಜಿ ಸಚಿವ ಎ.ಮಂಜು ಈಗಾಗಲೇ ಪಕ್ಷ ಸೇರ್ಪಡೆಯಾಗಿದ್ದು, ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ತಿಳಿಸಿರುವುದು ಸ್ಪಷ್ಟತೆ ಮೂಡಿದೆ. ಹಾಸನಕ್ಕೆ ಎ.ಮಂಜು ಹೆಸರು ಘೋಷಿಸಲಾಗುತ್ತದೆ. ಮಂಡ್ಯದಲ್ಲಿ ಅಭ್ಯರ್ಥಿ ನಿಲ್ಲಿಸಲು ತೀರ್ವನಿಸಿದ್ದು, ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ರಾಯಚೂರು, ತುಮಕೂರು ಸೇರಿ ನಾಲ್ಕೈದು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.