ಮಾನ-ಮರ್ಯಾದೆ ಇಲ್ಲದ ಮೊದಲ ಸಿಎಂ ಕುಮಾರಸ್ವಾಮಿ: ಕೆ.ಎಸ್​.ಈಶ್ವರಪ್ಪ

ದಾವಣಗೆರೆ: ರಾಜೀನಾಮೆ ನೀಡುತ್ತೇನೆ ಎಂಬುದು ಬೂಟಾಟಿಕೆ ಹೇಳಿಕೆಯಾಗಿದ್ದು, ಮಾನ-ಮರ್ಯಾದೆ ಇಲ್ಲದ ಮೊದಲ ಮುಖ್ಯಮಂತ್ರಿ ಎಂದರೆ ಅದು ಎಚ್​.ಡಿ. ಕುಮಾರಸ್ವಾಮಿ ಎಂದು ಬಿಜೆಪಿ ಮುಖಂಡ ಕೆ.ಎಸ್​.ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್​ ಶಾಸಕರು ಹೀಗೆ ಬೇಕಾಬಿಟ್ಟಿ ಮಾತನಾಡಿದರೆ, ರಾಜೀನಾಮೆ ನೀಡುತ್ತೇನೆ ಎಂಬ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಕುತ್ತಿಗೆ ಹಿಡಿದು ಹೊರ ಹಾಕಿದರೂ ಅವರು ಸಿಎಂ ಸ್ಥಾನ ಬಿಟ್ಟು ಹೊರ ಬರಲ್ಲ ಎಂದು ವ್ಯಂಗ್ಯವಾಡಿದರು.

ಕೊಲೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ನಂತರ ದಿಕ್ಕೆಟ್ಟು ಹೋಗಿದೆ. ಅವರ ಶಾಸಕರನ್ನೇ ಹಿಡಿತದಲ್ಲಿ ಇಟ್ಟುಕೊಳ್ಳಲು ಆಗುತ್ತಿಲ್ಲ. ಒಬ್ಬರನ್ನೊಬ್ಬರನ್ನು ರೆಸಾರ್ಟ್​ನಲ್ಲಿ ಕೊಲೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ ಎಂದು ಟೀಕಿಸಿದರು.

ಆಪರೇಷನ್ ಕಮಲ ಮಾಡಲ್ಲ
ನಾವು ಯಾವುದೇ ಆಪರೇಷನ್ ಕಮಲ ಮಾಡಲ್ಲ, ಅವರೇ ಆಪರೇಷನ್ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಟ್ಟು ಬಿಜೆಪಿಗೆ ಬನ್ನಿ ಎಂದು ಕರೆಯಲ್ಲ. ವಿರೋಧ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತಿದ್ದು, ನಮ್ಮ ಶಾಸಕರು ನಮ್ಮ ಜೊತೆ ಇದ್ದಾರೆ ಎಂದು ಹೇಳಿದರು.

ಮೈ ಮೇಲೆ ಜ್ಞಾನ ಇಲ್ಲದಂಗೆ ಮಾತಾಡುತ್ತಾರೆ
ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಗುಂಪು ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಮೈ ಮೇಲೆ ಜ್ಞಾನ ಇಲ್ಲದಂಗೆ ಮಾತಾಡುತ್ತಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಕಾಂಗ್ರೆಸ್ ವಿಫಲವಾಗಿದೆ. ಗಣೇಶ್ ಬಂಧನ ಮಾಡಲು ಕಾಂಗ್ರೆಸ್​ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಾವೇನು ಸನ್ಯಾಸಿಗಳಲ್ಲ
ಅವಕಾಶ ಸಿಕ್ಕರೆ ನಾವು ಅಧಿಕಾರ ಮಾಡುತ್ತೇವೆ. ತಾಕತ್ತಿದ್ದರೆ ಅವರ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲಿ, ಇಲ್ಲವೇ ರಾಜಿನಾಮೆ ನೀಡಲಿ. ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆಯಲ್ಲಿ ವೈಮಸ್ಸು ಇದೆ. ಅಧಿಕಾರ ಬೇಡ ಎನ್ನುವುದಕ್ಕೆ ನಾವೇನು ಸನ್ಯಾಸಿಗಳಲ್ಲ. ಅವರ ಸರ್ಕಾರ ಬಿದ್ದರೆ ನಾವು ಅಧಿಕಾರಕ್ಕೆ ಬರುತ್ತೇವೆ. ಒಳ್ಳೆಯ ಆಡಳಿತ ಕೊಡಿ ಇಲ್ಲವೇ ಮನೆಗೆ ಹೋಗಿ ಎಂದು ಟೀಕಾ ಪ್ರಹಾರ ನಡೆಸಿದರು.(ದಿಗ್ವಿಜಯ ನ್ಯೂಸ್​)