ಬೆಂಗಳೂರು:
ಬಿಜೆಪಿಯ ಕೆಲ ಹಿರಿಯ ನಾಯಕರಲ್ಲಿರುವ ಅಸಮಾಧಾನ ನೀಗಿಸಲು ಖುದ್ದು ಅವರ ಮನೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಒಂದು ಸುತ್ತು ಕೆಲ ಹಿರಿಯ ನಾಯಕರ ಜೊತೆಗೆ ಮಾತುಕತೆ ನಡೆಸಿರುವ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದರು. ತಾವೇ ಖುದ್ದು ಅಲ್ಲಿದ್ದು, ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಯಡಿಯೂರಪ್ಪ ಅವರ ಸಹನೆ ಮಾತಿಗೆ ತಲೆದೂಗಿದ ನಾಯಕರು ಪಕ್ಷದ ವೇದಿಕೆಯಲ್ಲಿ ಒಂದುಗೂಡಿ ಹೋಗುವ ಒಲವು ತೋರಿಸಿದ್ದಾರೆ.
ವಿಜಯೇಂದ್ರ ಆಯ್ಕೆ ಬಗ್ಗೆ ಅಸಮಾಧಾನಗೊಂಡಿರುವ ಮಾಜಿ ಸಚಿವರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಎಲ್ಲರೊಂದಿಗೂ ಯಡಿಯೂರಪ್ಪ ಅವರು ಮಾತನಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಅವರುಗಳ ಮನೆಗೆ ವಿಜಯೇಂದ್ರ ಅವರು ತೆರಳಿ ಹಿರಿಯ ನಾಯಕರಲ್ಲಿರುವ ಅಸಮಾಧಾನವನ್ನು ಸರಿಪಡಿಸಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಯಾವ ನಾಯಕರು ಏನೇ ಟೀಕೆ ಟಿಪ್ಪಣಿ ಮಾಡಿದರೂ, ಸಹನೆಯಿಂದಲೇ ಎಲ್ಲವನ್ನೂ ಸ್ವೀಕರಿಸಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಯಡಿಯೂರಪ್ಪ ಅವರು ನೀಡಿರುವ ಮಾರ್ಗದರ್ಶನದ ಹಾದಿಯಲ್ಲಿಯೇ ಸಾಗುತ್ತಿರುವ ವಿಜಯೇಂದ್ರ ಅವರು ಜಿಲ್ಲಾ ಮಟ್ಟದಲ್ಲಿ ಪ್ರವಾಸ ಮಾಡುವ ಸಂದರ್ಭದಲ್ಲಿಯೂ ಅಲ್ಲಿನ ಅಸಮಾಧಾನಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ.
ಈಗ ಉಂಟಾಗಿರುವ ಅಸಮಾಧಾನಗಳು ಕ್ರಮೇಣ ಸರಿಯಾಗಲಿವೆ. ಇದೆಲ್ಲವೂ ಎಲ್ಲಾ ಪಕ್ಷದಲ್ಲೂ ಇದ್ದದ್ದೆ. ಪಕ್ಷದ ಹೈಕಮಾಂಡ್ ತೀರ್ಮಾನದ ವಿರುದ್ದ ಹೋಗುವ ಪ್ರಶ್ನೆಯೇ ಇಲ್ಲ. ವರಿಷ್ಠರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಪಕ್ಷದ ಹಿರಿಯ ಮುಖಂಡರು ತಿಳಿಸಿದ್ದಾರೆ.
ಬಿಎಸ್‌ವೈ ಭೇಟಿ ಮಾಡಿದ ಎಸ್‌ಟಿಎಸ್
ವಿಜಯೇಂದ್ರ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದ ಎಸ್.ಟಿ.ಸೋಮಶೇಖರ್ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.
ಬಿಜೆಪಿಯೊಳಗಿನ ಘಟನಾವಳಿಗಳ ಬಗ್ಗೆ ಬೇಸರಗೊಂಡಿದ್ದ ಸೋಮಶೇಖರ್ ಅವರು ಈಗ ಯಡಿಯೂರಪ್ಪ ಅವರ ಕಿವಿ ಮಾತಿಗೆ ತಲೆದೂಗಿದ್ದಾರೆ. ಮುಂದಿನ ದಿನಗಳಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಸೂಕ್ತ ಕ್ರಮ ವಹಿಸುವ ಭರವಸೆಯನ್ನು ಬಿಎಸ್‌ವೈ ನೀಡಿದ್ದಾರೆ ಎಂದು ತಿಳಿದುಬಂದಿದೆ.