ಬಿಜೆಪಿ ಪ್ರಮುಖರ ಸಭೆ ಮುಂದೂಡಿಕೆ

ಕೆಲವು ಕ್ಷೇತ್ರಗಳಲ್ಲಿ ಕಾದುನೋಡುವ ತಂತ್ರ | 17ಕ್ಕೆ ಸಮಯ ನಿಗದಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯ ಘಟಕದಿಂದ ಸಂಭಾವ್ಯರ ಶಿಫಾರಸಿಗೆ ಶುಕ್ರವಾರ ನಡೆಯಬೇಕಿದ್ದ ರಾಜ್ಯ ಬಿಜೆಪಿ ಪ್ರಮುಖರ ಸಭೆ ಮಾ. 17ಕ್ಕೆ ಮುಂದೂಡಿಕೆಯಾಗಿದೆ. ಅಂದು ಬೆಳಗ್ಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅಭ್ಯರ್ಥಿಗಳಾಗಬಲ್ಲವರ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗುತ್ತದೆ. ನವದೆಹಲಿಯಲ್ಲಿ ಅಮಿತ್ ಷಾ ನೇತೃತ್ವದಲ್ಲಿ ಮಾ. 18ರಂದು ನಡೆಯುವ ಸಮಿತಿ ಸಭೆಯಲ್ಲಿ 20 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ, ಘೋಷಿಸುವ ಸಾಧ್ಯತೆಯಿದೆ.

ಪ್ರಮುಖವಾಗಿ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ನಡೆಯನ್ನು ಕಾದು ನೊಡಲಾಗುತ್ತಿದೆ. ಬಳ್ಳಾರಿ, ಹಾಸನ ಸೇರಿ ಕೆಲ ಕ್ಷೇತ್ರದಲ್ಲೂ ಇದೇ ಸ್ಥಿತಿಯಿದೆ. ರಾಜ್ಯ ಮಟ್ಟದಲ್ಲೇ ಕೆಲವು ಹೆಸರುಗಳು ಸೇರ್ಪಡೆಯಾಗಿ ಕೇಂದ್ರಕ್ಕೆ ಆಗಮಿಸಿದರೆ ಆಯ್ಕೆ ಸಲೀಸು. ಅನಿವಾರ್ಯ ಸಂದರ್ಭದಲ್ಲಿ ರಾಜ್ಯ ಘಟಕದಿಂದ ಬರದ ಹೆಸರನ್ನು ಸೇರಿಸಲು ಅವಕಾಶವಿದ್ದರೂ ಆಗ ಕಷ್ಟವಾಗಬಾರದು ಎಂಬ ಕಾರಣಕ್ಕೆ ಎರಡು ದಿನ ಸಭೆಯನ್ನು ಮುಂದೂಡುವಂತೆ ಕೇಂದ್ರ ನಾಯಕರೂ ಅನುಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಕಚೇರಿಗೆ ಆಗಮಿಸಿದ ಹೆಗ್ಡೆ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿಸಲು ಜಯಪ್ರಕಾಶ್ ಹೆಗ್ಡೆ ಅವರನ್ನು ಸೆಳೆಯುತ್ತಿದೆ ಎಂಬ ಸುದ್ದಿ ನಡುವೆಯೇ ಹೆಗ್ಡೆ ಗುರುವಾರ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ, ಯಡಿಯೂರಪ್ಪ ಬೆಂಗಳೂರಿನಲ್ಲಿ ಇರಲಿಲ್ಲ. ಇತರ ನಾಯಕರ ಜತೆ ರ್ಚಚಿಸಿ ಹೊರ ನಡೆದರು.

ಜಗದ್ಗುರುಗಳ ಆಶೀರ್ವಾದ

ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಗುರುವಾರ ಶೃಂಗೇರಿ ಶ್ರೀ ಶಾರದೆಗೆ ಪೂಜೆ ಸಲ್ಲಿಸಿದ ನಂತರ ಶ್ರೀ ಭಾರತೀತೀರ್ಥ ಸ್ವಾಮೀಜಿ, ಶ್ರೀವಿಧುಶೇಖರ ಭಾರತೀ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಅಭ್ಯರ್ಥಿಗಳ ಆಯ್ಕೆ ಕುರಿತು ರ್ಚಚಿಸಲು ದಿಲ್ಲಿಗೆ ತೆರಳಲಿದ್ದೇನೆ. ವರಿಷ್ಠರು ಟಿಕೆಟ್ ಹಂಚಿಕೆ ನಿರ್ಧಾರ ಕೈಗೊಳ್ಳಲಿದ್ದು, ಮಾ.18ರಂದು ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೇವಲ ಮುಖಂಡರ ನಡುವೆ ಆಗಿದೆಯೇ ಹೊರತು ಕಾರ್ಯಕರ್ತರಲ್ಲಿ ಹೊಂದಾಣಿಕೆ ಇಲ್ಲ. ಎಚ್.ಡಿ.ದೇವೇಗೌಡರ ಕಣ್ಣೀರು ಜನರನ್ನು ಮರುಳು ಮಾಡುವ ವ್ಯವಸ್ಥಿತ ಷಡ್ಯಂತ್ರ.

| ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ