ಅಖಿಲೇಶ್​ಗೆ ಮತ ಹಾಕುತ್ತೇನೆ ಎಂದ ವಿಕಲಾಂಗ ವ್ಯಕ್ತಿಯನ್ನು ಥಳಿಸಿದ ಬಿಜೆಪಿ ನಾಯಕ

ಲಖನೌ: ಸಮಾಜವಾದಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ಗೆ ಮತ ಚಲಾಯಿಸುತ್ತೇನೆ ಎಂದ ವಿಕಲಾಂಗ ವ್ಯಕ್ತಿಗೆ ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರು ಥಳಿಸಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಸಂಭಾಲ್​ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಮೊಹಮ್ಮದ್​ ಮಿಯಾ ಎಂವವರು ಮಂಗಳವಾರ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ ಮತ್ತು ಅಖಿಲೇಶ್​ ಯಾದವ್​ಗೆ ಮತ ಚಲಾಯಿಸುತ್ತೇನೆ ಎಂದು ಹೇಳಿದ ವ್ಯಕ್ತಿಗೆ ದೊಣ್ಣೆಯಿಂದ ಹೊಡೆಯುತ್ತಿರುವ ವಿಡಿಯೋ ವೈರಲ್​ ಆಗಿದೆ.

ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಿಯಾ, ಆ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಕುರಿತು ಅವಹೇಳಕಾರಿ ಹೇಳಿಕೆ ನೀಡಿದ. ನಾನು ಮೊದಲಿಗೆ ಆತನಿಗೆ ತಿಳಿಹೇಳಲು ಪ್ರಯತ್ನಿಸಿದೆ. ಆದರೆ ಆತ ಕುಡಿದಿದ್ದರಿಂದ ನನ್ನ ಮಾತು ಕೇಳಲಿಲ್ಲ. ಆ ಸಂದರ್ಭದಲ್ಲಿ ನಾನು ಆತನನ್ನು ಸ್ಥಳದಿಂದ ತೆರಳುವಂತೆ ತಿಳಿಸುತ್ತಿದ್ದೆ. ಆತನಿಗೆ ಥಳಿಸಿಲ್ಲ ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ಮಂಗಳವಾರ ರಾತ್ರಿ ದೂರು ದಾಖಲಾಗಿದೆ. ಆರೋಪಿಯನ್ನು ಬಂಧಿಸಲು ನಮ್ಮ ತಂಡವನ್ನು ಕಳುಹಿಸಲಾಗಿದೆ ಎಂದು ಸಂಭಾಲ್​ನ ಸರ್ಕಲ್​ ಆಫೀಸರ್​ ಸುದೇಶ್​ ಕುಮಾರ್​ ತಿಳಿಸಿದ್ದಾರೆ. (ಏಜೆನ್ಸೀಸ್​)