ಸಮಯ ಬದಲಾವಣೆಯಿಂದಾಗಿ ಪ್ರಾಣ ಉಳಿದಿದೆ!

ಮೈಸೂರು: ‘ನಾವುಗಳೆಲ್ಲ ಶ್ರೀಲಂಕಾ ಪ್ರವಾಸದಲ್ಲಿದ್ದೆವು. ಕೊಲಂಬೋಗೆ ಕೊನೇ ದಿನ ಹೋಗಲು ನಿರ್ಧರಿಸಿ ಪ್ರವಾಸದಲ್ಲಿ ಕೊಂಚ ಬದಲಾಯಿಸಿ ಕೊಂಡೆವು. ಇದು ನಮ್ಮೆಲ್ಲರನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ….!
ಶ್ರೀಲಂಕಾದಿಂದ ಸುರಕ್ಷಿತವಾಗಿ ಮೈಸೂರಿಗೆ ಬಂದಿರುವ ಬಿಜೆಪಿ ಮುಖಂಡ ಮೈ.ವಿ.ರವಿಶಂಕರ್ ಮಾತುಗಳು ಇವು.

ಮೈಸೂರಿನ ಐದು ಭೂಗರ್ಭಶಾಸ್ತ್ರಜ್ಞರು ಸೇರಿದಂತೆ ಒಟ್ಟು 14 ಜನರು 6 ದಿನ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ಇವರೆಲ್ಲರೂ ಬುಧವಾರ ರಾತ್ರಿ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಸಂಜೆ 6.30ಕ್ಕೆ ಲಂಕಾದಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ತಡರಾತ್ರಿ ಮೈಸೂರಿಗೆ ಬಂದಿದ್ದಾರೆ.

‘ಏ.19ರಂದು ಪ್ರವಾಸಕ್ಕೆ ತೆರಳಿದ್ದ ನಾವುಗಳು ಆರಂಭದಲ್ಲೇ ಕೊಲಂಬೋಗೆ ತೆರಳಲು ಉದ್ದೇಶಿಸಿದ್ದವು. ಕೊನೆ ಗಳಿಗೆಯಲ್ಲಿ ಮನಸ್ಸು ಬದಲಾಯಿಸಿ ಪ್ರವಾಸದ ಕೊನೆಯ ದಿನ ಅಲ್ಲಿಗೆ ಭೇಟಿ ನೀಡಲು ನಿರ್ಧಾರ ಮಾಡಿದೆವು. ಈ ಹಿನ್ನೆಲೆಯಲ್ಲಿ ಆ ಪ್ರದೇಶದಿಂದ ಸುಮಾರು 40 ಕಿ.ಮೀ. ದೂರದ ಕ್ಯಾಂಡಿಯ ಆಯುರ್ವೇದಿಕ್ ವಿಲೇಜ್‌ನಲ್ಲಿ ನಾವುಗಳೆಲ್ಲ ಉಳಿದುಕೊಂಡಿದ್ದೆವು.

ಏ.21ರಂದು ಆ ಪ್ರದೇಶದ ಹಲವೆಡೆ ಬಾಂಬ್ ಸ್ಫೋಟವಾಗಿದೆ ಎಂಬ ಸುದ್ದಿ ಬಂತು. ಅಲ್ಲದೆ ಭಾರತದಿಂದ ಸ್ನೇಹಿತರು ಕರೆ ಮಾಡಿ ಈ ವಿಚಾರ ತಿಳಿಸಿದರು. ಈ ಘಟನೆ ನಡೆದ 10 ನಿಮಿಷದಲ್ಲಿ ತುರ್ತುಪರಿಸ್ಥಿತಿ ಜಾರಿಯಾಯಿತು’ ಎಂದು ಮೈ.ವಿ.ರವಿಶಂಕರ್ ವಿವರಿಸಿದರು.

‘ಬಾಂಬ್ ಸ್ಫೋಟವಾದ ಶಾಂಡ್ರಿಲಾ ಹೋಟೆಲ್ನಿಂದ ಕೂಗಳತೆ ದೂರದಲ್ಲೇ ನಮಗೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪೂರ್ವ ನಿಗದಿಯಂತೆ ಅಲ್ಲಿಗೆ ಹೋಗಿದ್ದರೆ ನಮಗೂ ತೊಂದರೆಯಾಗುತ್ತಿತ್ತು. ಪ್ರವಾಸದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದರಿಂದ ಈ ಅನಾಹುತದಿಂದ ಪಾರಾಗಿದ್ದೇವೆ. ನಿಜಕ್ಕೂ ದೇವರ ಕೃಪೆಯಿಂದ ನಾವುಗಳು ಸುರಕ್ಷಿತವಾಗಿ ವಾಪಸಾಗಿದ್ದೇವೆ’ ಎಂದು ನಿಟ್ಟುಸಿರು ಬಿಟ್ಟರು.

ಮೈಸೂರಿನಿಂದ ಕರೆ ಮಾಡಿದವರು ಹೇಳಿದ ಬಳಿಕ ಇಷ್ಟೊಂದು ಭೀಕರ ಘಟನೆ ನಡೆದಿದೆ ಎಂಬುದು ಅರಿವಿಗೆ ಬಂತು. ಎಲ್ಲ ಕಡೆ ತುರ್ತು ಪರಿಸ್ಥಿತಿ ಜಾರಿಯಾಗಿದ್ದರಿಂದ ನಮಗೆ ಅಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಾಗಲೇ ಇಲ್ಲ. ಈ ಘಟನೆಯಿಂದ ಇಡೀ ಕೊಲಂಬೋ ಸ್ಮಶಾನದ ರೀತಿ ಕಾಣುತ್ತಿತ್ತು. ನಮಗೆ ಊಟ, ತಿಂಡಿಗೂ ಸಮಸ್ಯೆಯಾಯಿತು. ಜತೆಗೆ, ನಾವು ಯಾವುದೇ ಪ್ರದೇಶಗಳಿಗೂ ಭೇಟಿ ಕೊಡಲು ಸಾಧ್ಯವಾಗಲಿಲ್ಲ. ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ವಾಪಸಾಗಿದ್ದೇವೆ ’ ಎಂದು ಹೇಳಿದರು.

ಇವರೊಂದಿಗೆ ಕೆ.ವಿ.ವೇದಮೂರ್ತಿ, ಚನ್ನಬಸಪ್ಪ, ವಿನಯ್ ರಂಗನಾಥ್, ಎಚ್.ಎನ್.ಉಮೇಶ್, ಶೈಲಾ, ಮೌನಾ ಉಮೇಶ್, ಪೂರ್ಣಿಮಾ ರವಿಶಂಕರ್, ಅನುಪ್ ರವಿಶಂಕರ್, ಬಿ.ಎಸ್.ಶಾಲಿನಿ, ಸ್ವರೂಪ, ಗೌತಮಿ ವೇದಮೂರ್ತಿ ಹಾಗೂ ಸನತ್ ರಂಗನಾಥ್ ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ.

Leave a Reply

Your email address will not be published. Required fields are marked *