ದೋಸ್ತಿ ಸರ್ಕಾರಕ್ಕೆ ಆಪರೇಷನ್ ​ಕಮಲದ ಭೂತ ಹಿಡಿದಿದೆ: ಕೆ.ಎಸ್​.ಈಶ್ವರಪ್ಪ

ಬೆಳಗಾವಿ: ಕಾಂಗ್ರೆಸ್​ ಮತ್ತು ಜೆಡಿಎಸ್​ ನೇತೃತ್ವದ ದೋಸ್ತಿ ಸರ್ಕಾರಕ್ಕೆ ಆಪರೇಷನ್ ​ಕಮಲದ ಭೂತ ಹಿಡಿದಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್​.ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅವರು ಒಬ್ಬ ಶಾಸಕನಿಗೆ ದೊಡ್ಡ ಮೊತ್ತದ ಹಣದ ಆಮಿಷ ಒಡ್ಡಿದ್ದಾರೆ ಎಂಬ ಸಿಎಂ ಕುಮಾರಸ್ವಾಮಿ ಅವರ ಆರೋಪಕ್ಕೆ ಹುಕ್ಕೇರಿಯಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಮೊದಲು ಆ ಶಾಸಕರ ಹೆಸರನ್ನು ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು. ಅವರೇ ಬಿಜೆಪಿ ಶಾಸಕ ಸುಭಾಷ್​ ಗುತ್ತೇದಾರ್​ಗೆ ಹಣದ ಮತ್ತು ಮಂತ್ರಿ ಸ್ಥಾನದ ಆಮಿಷ ಒಡ್ಡಿದ್ದಾರೆ ಎಂದು ಪ್ರತ್ಯಾರೋಪಿಸಿದರು.

ಲಫಂಗ ರಾಜಕಾರಣ ಮಾಡ್ತಿರೋದು ಕಾಂಗ್ರೆಸ್
ಯಡಿಯೂರಪ್ಪ ಅವರು ಲಫಂಗ ರಾಜಕಾರಣ ಮಾಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಡಿದು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಕೊಲೆ ಮಾಡುವ ಪ್ರಯತ್ನವೂ ನಡೆದಿದೆ. ಓಡಿ ಹೋಗಿರೋದು ರೌಡಿ ಅಲ್ಲ, ಒಬ್ಬ ಕಾಂಗ್ರೆಸ್​ ಶಾಸಕ. ಈಗೇನು ಹೇಳ್ತಾರೆ? ನಾಚಿಕೆ ಮಾನ-ಮರ್ಯಾದೆ ಇದೆಯಾ? ಲಫಂಗ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್​ನವರು ಎಂದು ವಾಗ್ದಾಳಿ ನಡೆಸಿದರು.

ರಾಜೀನಾಮೆ ಕೊಟ್ಟು ಹೊರಗೆ ಬನ್ನಿ
ಶಾಸಕರನ್ನ ಹಿಡಿದಿಟ್ಟುಕೊಳ್ಳುವ ಶಕ್ತಿ ನಿಮಗೆ ಇಲ್ಲ. ನಿಜಕ್ಕೂ ಸಿದ್ದರಾಯಯ್ಯನವರು ಕಾಂಗ್ರೆಸ್​ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದರೆ, ಮಾನ-ಮಾರ್ಯದೆ ಇದ್ದರೆ, ರಾಜೀನಾಮೆ ಕೊಟ್ಟು ಹೊರಗೆ ಬನ್ನಿ. ಕಾಂಗ್ರೆಸ್​ ಶಾಸಕರಿಗೆ ಈ ಸರ್ಕಾರದ ಬಗ್ಗೆ ವಿಶ್ವಾಸವೇ ಇಲ್ಲ. ಈ ಸಮ್ಮಿಶ್ರ ಸರ್ಕಾರ ಬಹಳ ದಿನ ಇರಲ್ಲ ಎಂದು ಹೇಳಿದರು.

ರಾಜಕೀಯ ಬಗ್ಗೆ ಗೊತ್ತಿಲ್ಲ
ಪ್ರಿಯಾಂಕ ಗಾಂಧಿಗೆ ರಾಜಕೀಯ ಬಗ್ಗೆ ಗೊತ್ತಿಲ್ಲ. ಕಾಂಗ್ರೆಸ್​ನವರು ಅವರನ್ನು ಉತ್ತರ ಪ್ರದೇಶದ ಜನರಲ್ ಸೆಕ್ರೆಟರಿ ಮಾಡಿದ್ದಾರೆ. ಇಂತಹ ದುಸ್ಥಿತಿಗೆ ಇಂದು ಕಾಂಗ್ರೆಸ್​ ಬಂದು ತಲುಪಿದೆ ಎಂದು ವ್ಯಂಗ್ಯವಾಡಿದರು. (ದಿಗ್ವಿಜಯ ನ್ಯೂಸ್​)