ಸೋಮವಾರದೊಳಗೆ ಶಾಸಕ ಉಮೇಶ್​ ಜಾಧವ್​ ರಾಜೀನಾಮೆ: ಬಾಬುರಾವ್​ ಚಿಂಚನಸೂರ್​

ಯಾದಗಿರಿ: ಕಾಂಗ್ರೆಸ್​ ಶಾಸಕ ಉಮೇಶ್​ ಜಾಧವ್​ ಅವರು ಸೋಮವಾರದೊಳಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಾಬುರಾವ್​ ಚಿಂಚನಸೂರ್​ ದಿಗ್ವಿಜಯ ನ್ಯೂಸ್​ಗೆ ತಿಳಿಸಿದ್ದಾರೆ.

ರಾಜೀನಾಮೆ ನೀಡಿದ 2-3 ದಿನದೊಳಗೆ ಅವರು ಬಿಜೆಪಿಗೆ ಸೇರುತ್ತಾರೆ. ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಉಮೇಶ್​ ಜಾಧವ್​ ಅವರು ಕಾಂಗ್ರೆಸ್​ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್​ ಖರ್ಗೆ ವಿರುದ್ಧ ಸ್ಪರ್ಧಿಸಲಿದ್ದಾರೆ. ಉಮೇಶ್​ ಜಾಧವ್​ 1 ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಜಾಧವ್​ ಅವರನ್ನು ಗೆಲ್ಲಿಸಿ ವಿಜಯ ಪತಾಕೆ ಹಾರಿಸುವುದೇ ನನ್ನ ಗುರಿ ಎಂದು ಚಿಂಚನಸೂರ್​ ತಿಳಿಸಿದ್ದಾರೆ.

ಉಮೇಶ್​ ಜಾಧವ್​ ಅವರು ಜನಪ್ರಿಯ ನಾಯಕರಾಗಿದ್ದು, ಸರಳ ಸಜ್ಜನಿಕೆಯ ವ್ಯಕ್ತಿ. ಶೀಘ್ರದಲ್ಲೇ ಉಮೇಶ್​ ಜಾಧವ್​ ಅವರ ನೇತೃತ್ವದಲ್ಲಿ ಕಲಬುರಗಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಗುರುಮಠಕಲ್​ನಲ್ಲಿ ಬೃಹತ್​ ಸಮಾವೇಶ ಮಾಡಲಾಗುವುದು. ಸಮಾವೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರನ್ನು ಕರೆಸಲಾಗುವುದು ಎಂದು ಚಿಂಚನಸೂರ್​ ತಿಳಿಸಿದ್ದಾರೆ.