ಬಿಹಾರದ 40 ಲೋಕಸಭಾ ಸ್ಥಾನಗಳನ್ನು ಹಂಚಿಕೊಂಡ ಬಿಜೆಪಿ, ಜೆಡಿಯು, ಎಲ್​ಜೆಪಿ

ಬಿಹಾರ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ, ನಿತೀಶ್​ ಕುಮಾರ್​ ನೇತೃತ್ವದ ಜೆಡಿಯು ಹಾಗೂ ರಾಮ್​ ವಿಲಾಸ್​ ಪಾಸ್ವಾನ್​​ ಅವರ ಲೋಕ ಜನಶಕ್ತಿ ಪಕ್ಷಗಳು ಬಿಹಾರದಲ್ಲಿ ಮೈತ್ರಿ ಮಾಡಿಕೊಂಡಿದ್ದು ಕ್ಷೇತ್ರಗಳನ್ನು ಹಂಚಿಕೊಂಡಿವೆ.

ಬಿಹಾರದಲ್ಲಿ ಒಟ್ಟು 40 ಲೋಕಸಭಾ ಸ್ಥಾನಗಳಿದ್ದು ಬಿಜೆಪಿ ಹಾಗೂ ಜೆಡಿಯು ತಲಾ 17 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಇನ್ನು ಉಳಿದ 6 ಕ್ಷೇತ್ರಗಳಲ್ಲಿ ಲೋಕ ಜನಶಕ್ತಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಅಮಿತ್​ ಷಾ, ರಾಮ್​ ವಿಲಾಸ್​ ಪಾಸ್ವಾನ್​ ಹಾಗೂ ಚಿರಾಗ್​ ಪಾಸ್ವಾನ್​ ಸಭೆ ನಡೆಸಿ ಸೀಟು ಹಂಚಿಕೆ ವಿಚಾರದಲ್ಲಿ ಸ್ವೀಕಾರಾರ್ಹ ಒಪ್ಪಂದಕ್ಕೆ ಬಂದಿದ್ದರು.

ರಾಮ್​ ವಿಲಾಸ್​ ಪಾಸ್ವಾನ್​ ಅವರು ಮುಂದಿನ ವರ್ಷದ ರಾಜ್ಯಸಭಾ ಚುನಾವಣೆಗೆ ಎನ್​ಡಿಎಯಿಂದ ಕಣಕ್ಕಿಳಿಯಲಿದ್ದಾರೆ ಎಂದು ಅಮಿತ್​ ಷಾ ಇಂದು ತಿಳಿಸಿದರು.

ರಾಜ್ಯದ ಪ್ರತಿ ಕ್ಷೇತ್ರದ ರಾಜಕೀಯ ವಸ್ತುಸ್ಥಿತಿ, ಪರಿಸ್ಥಿತಿಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗಿದೆ. 2014ರಲ್ಲಿ ಬಿಹಾರದಲ್ಲಿ ಜಯಗಳಿಸಿದ್ದಕ್ಕಿಂತ ಜಾಸ್ತಿ ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದರು.

ನಿತೀಶ್​ ಕುಮಾರ್​ ಮಾತನಾಡಿ, ನಾವು ಬಿಜೆಪಿ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಿದ್ದೇವೆ. 2019ರ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಗೆಲುವಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.