Friday, 16th November 2018  

Vijayavani

Breaking News

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಗೆ 40 ಸ್ಥಾನ ಖಚಿತ: ಅಮಿತ್‌ ಷಾ

Thursday, 12.07.2018, 6:58 PM       No Comments

ಪಾಟ್ನಾ: ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಭಾರಿ ಜವಾಬ್ದಾರಿಯನ್ನು ನಿಭಾಯಿಸಿದ್ದು, ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಯುನೊಂದಿಗಿನ ಮೈತ್ರಿಯಲ್ಲಿ 40 ಸೀಟುಗಳನ್ನು ಗೆದ್ದು ಕೇಸರಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಪುನರುಚ್ಛರಿಸಿದ್ದಾರೆ.

ಪಾಟ್ನಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ಮೊದಲಿಗೆ ಮೋದಿ ಅಲೆ ಇತ್ತು. ಆನಂತರ ಬಿರುಗಾಳಿಯಾಗಿ ಪರಿವರ್ತನೆಯಾಗಿದೆ. ಆದರೆ, ಈಗ ಸುನಾಮಿಯಾಗಿ ಬದಲಾಗಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ವಿಷಯದಲ್ಲಿ ದೇಶದಲ್ಲಿ ಭಾರಿ ಬದಲಾವಣೆಯಾಗಿದೆ. ಇದರಡಿಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ, ಗ್ಯಾಸ್‌ ಸಿಲಿಂಡರ್‌ ವಿತರಣೆ, 4 ಕೋಟಿ ಬಡವರಿಗೆ ಸ್ಟೌ ವಿತರಿಸಿದ್ದು, 7.5 ಕೋಟಿ ತಾಯಂದಿರು ಮತ್ತು ಸೋದರಿಯರಿಗೆ ನಾವು ಶೌಚಗೃಹಗಳನ್ನು ನಿರ್ಮಿಸಿದ್ದೇವೆ ಎಂದು ಹೇಳಿದರು.

ಹಿಂದಿನ ಯುಪಿಎ ಸರ್ಕಾರವನ್ನು ಟೀಕಿಸಿದ ಅವರು, 2013ರಲ್ಲಿ ದೇಶದ ಪರಿಸ್ಥಿತಿ ಏನಾಗಿತ್ತು? ಹಣದುಬ್ಬರ ಮತ್ತು ಭ್ರಷ್ಟಾಚಾರಗಳು ಅಂದಿನ ಕಾಲದಲ್ಲಿ ಉತ್ತುಂಗಕ್ಕೇರಿದ್ದವು. ಗಡಿಗಳಲ್ಲಿ ಸುರಕ್ಷಿತವಾಗಿರಲಿಲ್ಲ. ಅಲ್ಲದೆ, ಭಾರತವು ನೀತಿ ಪಾರ್ಶ್ವವಾಯುವಿನಿಂದ ಬಳಲುತ್ತಿತ್ತು ಎಂದು ಆರೋಪಿಸಿದ್ದಾರೆ.

ಜೆಡಿಯು-ಬಿಜೆಪಿ ನಡುವೆ ಭಿನ್ನಾಭಿಪ್ರಾಯವಿಲ್ಲ

ಇನ್ನು ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯದ ಕುರಿತು ಪ್ರತಿಕ್ರಿಯಿಸಿ, ಜೆಡಿಯು ಮತ್ತು ಬಿಜೆಪಿ ನಡುವೆ ಬಿರುಕು ಉಂಟಾಗುತ್ತದೆ ಎಂದು ಪ್ರತಿಪಕ್ಷಗಳು ಭಾವಿಸುತ್ತಿವೆ. ಆದರೆ, ಈ ನಮ್ಮ ಮೈತ್ರಿಯಿಂದಾಗಿ ಬಿಹಾರದಲ್ಲಿ 40 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಸೀಟು ಹಂಚಿಕೆಯಲ್ಲಿ ಎರಡು ಪಕ್ಷಗಳ ನಡುವೆ ಬಿರುಕು ಉಂಟಾಗಿದೆ ಎನ್ನುವ ವರದಿಗಳ ಬೆನ್ನಲ್ಲೇ ಇಂದು ಬೆಳಗ್ಗೆ ಅಮಿತ್‌ ಷಾ ಅವರು ಜೆಡಿಯು ಅಧ್ಯಕ್ಷ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಭೇಟಿ ಮಾಡಿ ಚರ್ಚಿಸಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top