ಕಡೂರು: ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು.
ಬಸವೇಶ್ವರ ವೃತ್ತದಿಂದ ಮೆರವಣಿಗೆ ಆರಂಭಿಸಿ ಕೆಎಲ್‌ವಿ ವೃತ್ತದ ಮೂಲಕ ಬಿಜೆಪಿ ಕಚೇರಿ ತನಕ ಸಾವಿರಾರು ಬೈಕ್‌ಗಳಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಜೈ ಶ್ರೀರಾಂ ಘೋಷಣೆ ಕೂಗುತ್ತಾ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ತೆರೆದ ವಾಹನದಲ್ಲಿದ್ದ ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್, ವೈಎಸ್‌ವಿ ದತ್ತ ಜನರತ್ತ ಕೈ ಬೀಸಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ಳಿ ಪ್ರಕಾಶ್ ಮಾತನಾಡಿ, ಕೇಂದ್ರದಲ್ಲಿ ಮೂರನೇ ಬಾರಿ ಸರ್ಕಾರ ರಚನೆಯಾಗಿದೆ. ರಾಜ್ಯದ ಐದು ಸಂಸದರಿಗೆ ಮಂತ್ರಿ ಸ್ಥಾನ ದೊರೆತಿರುವುದು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ವಿಕಸಿತ ಭಾರತ ವಿಶ್ವಗುರುವಾಗಿ ಮುನ್ನಡೆಯುತ್ತದೆ ಎಂದರು.
ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ಮೈತ್ರಿಯಲ್ಲಿ ಸಮನ್ವಯತೆ ಇದ್ದರೆ ಎಂಥ ಯಶಸ್ಸು ದೊರೆಯುತ್ತದೆ ಎಂಬುದಕ್ಕೆ ಈ ವಿಜಯವೇ ಸಾಕ್ಷಿ. ಬಿಜೆಪಿ- ಜೆಡಿಎಸ್ ಹೊಂದಾಣಿಕೆಯಿಂದ ಹೊಸ ಯುಗ ಆರಂಭವಾಗಿದೆ. ಕಡೂರು ಇದಕ್ಕೆ ಹೊರತಲ್ಲ. ಟೀಕಾಕಾರರು ಮೋದಿ ಅವರ ಜನಪ್ರಿಯತೆ ಮತ್ತು ವರ್ಚಸ್ಸು ಕಡಿಮೆಯಾಗಿದೆ ಎನ್ನುತ್ತಾರೆ. ನೆಹರು ಅವರು ಮೂರನೇ ಬಾರಿ ಪ್ರಧಾನಿಯಾಗುವ ಹೊತ್ತಿಗೆ ಅವರ ಜನಪ್ರಿಯತೆ ಕಡಿಮೆಯಾಗಿ ರಾಜ್ಯಗಳಲ್ಲಿ ಬೇರೆ ಪಕ್ಷಗಳ ಸರ್ಕಾರ ರಚನೆಯಾಗಿತ್ತು. ಮೋದಿ ಅವರ ಜನಪ್ರಿಯತೆ ಅಷ್ಟು ಕಡಿಮೆಯಾಗಿಲ್ಲ ಎಂಬುದನ್ನು ಗಮನಿಸಲಿ ಎಂದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಮುಖಂಡರಾದ ಜಿಗಣೇಹಳ್ಳಿ ನೀಲಕಂಠಪ್ಪ, ಶೂದ್ರ ಶ್ರೀನಿವಾಸ್, ಭರತ್ ಕೆಂಪರಾಜು, ಸುನೀತಾ ಜಗದೀಶ್, ಚಿಕ್ಕನಲ್ಲೂರು ನವೀನ್, ಕಾವೇರಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಬಿದರೆ ಜಗದೀಶ್, ಚೇತನ್ ಕೆಂಪರಾಜು, ಶಾಮಿಯಾನ ಚಂದ್ರು, ಅಡಕೆ ಚಂದ್ರು, ಸಿಗೇಹಡ್ಲು ಹರೀಶ್, ಉಮೇಶ್, ನವೀನ್, ಬಳ್ಳೇಕೆರೆ ಶಶಿ, ವೆಂಕಟೇಶ್, ರಂಗನಾಥ್ ಇತರರಿದ್ದರು.