ರಮೇಶ್ ಜಾರಕಿಹೊಳಿಗೆ ಮತ್ತೆ ಮಂತ್ರಿ ಆಫರ್

ಬೆಂಗಳೂರು: ನಿಮ್ಮನ್ನು ಮಂತ್ರಿ ಸ್ಥಾನದಿಂದ ಕೈಬಿಟ್ಟಿದ್ದು ಸರಿಯಲ್ಲ, ಮತ್ತೆ ಮಂತ್ರಿ ಸ್ಥಾನ ನೀಡುತ್ತೇವೆ. ಕೂಡಲೇ ನಮ್ಮನ್ನು ಸೇರಿಕೊಳ್ಳಿ ಎಂದು ಕಾಂಗ್ರೆಸ್, ರಮೇಶ್ ಜಾರಕಿಹೊಳಿಗೆ ಮಂಗಳವಾರ ನೇರ ಆಫರ್ ನೀಡಿದೆ.

ಸಿದ್ದರಾಮಯ್ಯ ಆದಿಯಾಗಿ ಯಾವುದೇ ಕೈ ನಾಯಕರ ಸಂಪರ್ಕಕ್ಕೆ ಸಿಗದೆ ಅಂತರ ಕಾಯ್ದುಕೊಂಡಿದ್ದ ರಮೇಶ್ ಮಂಗಳವಾರ ಕೊನೆಗೂ ಕೆ.ಸಿ.ವೇಣುಗೋಪಾಲ್ ಜತೆ ಮಾತನಾಡಿದ್ದಾರೆ. ‘ನಿಮ್ಮೆಲ್ಲ ಬೇಡಿಕೆಗೆ ನಾವು ಸ್ಪಂದಿಸುತ್ತೇವೆ, ಮತ್ತೆ ಮಂತ್ರಿ ಸ್ಥಾನ ನೀಡುತ್ತೇವೆ, ನೀವು ಕೇಳಿದ ಖಾತೆಯನ್ನೇ ನೀಡೋಣ ಬನ್ನಿ’ ಎಂದು ಗೋಗರೆದಿದ್ದಾರೆಂದು ಮೂಲಗಳು ತಿಳಿಸಿವೆ. ‘ತಕ್ಷಣ ಅಲ್ಲಿಂದ ಹೊರಟು ಬನ್ನಿ, ಕುಳಿತು ಮಾತಾಡೋಣ, ಪಕ್ಷ ಬಿಡುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಬಿಜೆಪಿಯವರು ಸರಿಯಾಗಿ ನಡೆಸಿಕೊಳ್ಳುವುದಿಲ್ಲ’ ಎಂದೂ ಸಲಹೆ ನೀಡಿದರೆನ್ನಲಾಗಿದೆ.

ಕುಮಠಳ್ಳಿ ‘ಕೈ’ ಕೊಟ್ಟೇ ಬಿಟ್ಟರೆ?

ಅಥಣಿ (ಬೆಳಗಾವಿ): ಶಾಸಕ ಮಹೇಶ ಕುಮಠಳ್ಳಿ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಸುಪರ್ದಿಯಲ್ಲಿದ್ದಾರೆಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಅವರ ಮೊಬೈಲ್ ಕಳೆದ 3 ದಿನಗಳಿಂದ ಸ್ವಿಚ್ಡ್ ಆಫ್ ಆಗಿದೆ. ಅವರ ಆಪ್ತ ಕಾರ್ಯದರ್ಶಿ ಅವರದ್ದೂ ಇದೇ ಸ್ಥಿತಿ. ಯಾವಾಗಲೋ ಒಮ್ಮೆ ಸಂಪರ್ಕಕ್ಕೆ ಸಿಗುತ್ತಾರೆ. ಶಾಸಕರ ಸಹೋದರರನ್ನು ವಿಚಾರಿಸಿದರೆ, ಮೀಟಿಂಗ್​ಗಾಗಿ ಬೆಂಗಳೂರಿಗೆ ಹೋಗಿದ್ದಾರೆ ಎನ್ನುತ್ತಾರೆ. ಅಲ್ಲದೆ, ಜನರಿಗೂ ಸಿಗುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಗಜಾನನ ಅವರನ್ನು ಸಂರ್ಪಸಿದರೆ, 2 ತಿಂಗಳ ಹಿಂದೆ ಬಿಜೆಪಿಯಿಂದ ಆಹ್ವಾನ ಬಂದಿದ್ದಾಗಿ ಶಾಸಕ ಮಹೇಶ ತಿಳಿಸಿದ್ದರು. ಆದರೆ, ಇದಕ್ಕೆ ನಾನು ಮತ್ತು ಇನ್ನಿಬ್ಬರು ಮುಖಂಡರು ಒಪ್ಪಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ಎಲ್ಲೇ ಕೂಡಿ ಹಾಕಿರಲಿ. ಅವರನ್ನು ಕರೆದುಕೊಂಡು ಬರುವ ಶಕ್ತಿ ನಮಗಿದೆ. ರಾಜಕಾರಣದಲ್ಲಿ 2 ರೀತಿಯ ಗೇಮ್ ನಡೆಯುತ್ತೆ. ನಾನೀಗ ಅದನ್ನೆಲ್ಲ ಬಿಡಿಸಿ ಹೇಳಲು ಸಾಧ್ಯವಿಲ್ಲ.

| ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವ

ಮಾಧ್ಯಮಗಳಲ್ಲಿ ಬಂದಂತೆ 15-16 ಶಾಸಕರಂತೂ ಬಿಜೆಪಿಗೆ ಹೋಗೋದಿಲ್ಲ. 3-4 ಮಂದಿ ಮಾತ್ರ ಹೋಗಿರಬಹುದು.

| ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವ

ಬಿಜೆಪಿ ಶಾಸಕರು ರೆಸಾರ್ಟ್ ಬಿಟ್ಟು ಹೊರಬರಲಿ. ಆಮೇಲೆ ನಮ್ಮ ಆಟ ಶುರುವಾಗುತ್ತದೆ. ಆ ಪಕ್ಷದವರೂ ರಾಜೀನಾಮೆ ಕೊಡಲು ಸಿದ್ಧರಿದ್ದಾರೆ. ಒಂದೆರಡು ದಿನಗಳಲ್ಲೇ ಎಲ್ಲವೂ ಬಹಿರಂಗ ಆಗಲಿದೆ.

| ಸಾ.ರಾ. ಮಹೇಶ್ ಸಚಿವ