ಸರ್ಕಾರದ ಭವಿಷ್ಯ ಸ್ಪೀಕರ್ ಕೈಯಲ್ಲಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಸರ್ಕಾರದ ಭವಿಷ್ಯ ನಿಂತಿರುವುದು ಮಾತ್ರ ಸ್ಪೀಕರ್ ಕೈಯಲ್ಲಿ. ಸರ್ಕಾರವನ್ನು ಬೀಳಿಸಲು ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸಿದೆ. ಈ ಎಲ್ಲ ಬೆಳವಣಿಗೆಗಳಲ್ಲಿ ಕೇಂದ್ರಬಿಂದು ಆಗುವವರು ಮಾತ್ರ ಸ್ಪೀಕರ್ ರಮೇಶ್​ಕುಮಾರ್. ಸ್ಪೀಕರ್ ಬೆಂಬಲವಿಲ್ಲದೆ ಸರ್ಕಾರ ಅಭದ್ರಗೊಳಿಸುವುದು ಕಷ್ಟದ ಕೆಲಸ.

ಸರ್ಕಾರ ರಚನೆಗೆ ಮೊದಲೇ ಇಂತಹ ಸ್ಥಿತಿಯನ್ನು ಊಹಿಸಿದ್ದ ಕಾಂಗ್ರೆಸ್ ರಮೇಶ್​ಕುಮಾರ್ ಅವರನ್ನು ಸ್ಪೀಕರ್ ಮಾಡಿದ್ದು. ಅವರು ಸಂಪುಟ ಸೇರಬೇಕೆಂಬ ಉದ್ದೇಶ ಹೊಂದಿದ್ದರು. ಸರ್ಕಾರಕ್ಕೆ ಎದುರಾಗಬಹುದಾದ ಅಪಾಯ ತಪ್ಪಿಸಬೇಕೆಂದರೆ ಸ್ಪೀಕರ್ ಸಮರ್ಥರಾಗಿರಬೇಕಾಗುತ್ತದೆ. ಆದ್ದರಿಂದಲೇ ರಮೇಶ್​ಕುಮಾರ್​ಗೆ ಮೊದಲೇ ಹೇಳಿ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸುತ್ತವೆ.

ಸಭಾಧ್ಯಕ್ಷರಿಗಿರುವ ಅವಕಾಶಗಳು

ಸರ್ಕಾರ ಅಭದ್ರಗೊಳಿಸಲು ಏನೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಸರ್ಕಾರವನ್ನು ಕೊನೇ ತನಕ ಉಳಿಸಿಕೊಳ್ಳಲು ಸ್ಪೀಕರ್​ಗೆ ಸಾಧ್ಯವಿದೆ.

# ಯಾವುದೇ ಅತೃಪ್ತ ಶಾಸಕರು ರಾಜೀನಾಮೆ ನೀಡಿದರೂ ಅದನ್ನು ತಕ್ಷಣ ಅಂಗೀಕರಿಸಬೇಕೆಂದಿಲ್ಲ. ಅದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ. ವೈಎಸ್​ಆರ್ ಕಾಂಗ್ರೆಸ್ ಸಂಸದರು ರಾಜೀನಾಮೆ ನೀಡಿದ ಸಂದರ್ಭ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ತಕ್ಷಣ ಅಂಗೀಕರಿಸಿರಲಿಲ್ಲ.

# ಶಾಸಕರ ರಾಜೀನಾಮೆ ಅಂಗೀಕಾರ ಆಗದಿದ್ದಲ್ಲಿ ರಾಜ್ಯಪಾಲರಿಗೆ ಅಥವಾ ನ್ಯಾಯಾಲಯದ ಮೊರೆ ಹೋದರೂ ಸ್ಪೀಕರ್ ಮೇಲೆ ಒತ್ತಡ ತರಲು ಬರುವುದಿಲ್ಲ. ಮಾಧ್ಯಮಗಳಲ್ಲಿ ಆಪರೇಷನ್ ಬಗ್ಗೆ ಇಷ್ಟೆಲ್ಲ ಸುದ್ದಿಗಳು ಪ್ರಸಾರ ಆಗಿರುವುದರಿಂದ ಕುದುರೆ ವ್ಯಾಪಾರ ನಡೆದಿದೆ, ಆದ್ದರಿಂದ ರಾಜೀನಾಮೆ ಅಂಗೀಕಾರ ಮಾಡಲ್ಲವೆಂದು ಸಮಜಾಯಿಷಿ ನೀಡಬಹುದು.

# ರಾಜ್ಯಪಾಲರು ಸದನದಲ್ಲಿ ಬಹುಮತ ಸಾಬೀತಿಗೆ ಸೂಚನೆ ನೀಡಬಹುದು. ಆ ಸಂದರ್ಭದಲ್ಲಿ ರಾಜೀನಾಮೆ ಅಂಗೀಕಾರ ಆಗದೆ ಇರುವ ಶಾಸಕರಿಗೂ ವಿಪ್ ಜಾರಿ ಮಾಡಬಹುದು. ಸದನದಲ್ಲಿ ವಿಪ್ ಉಲ್ಲಂಘನೆ ಮಾಡಿದರೆ ರಾಜಕೀಯ ಭವಿಷ್ಯಕ್ಕೆ ಸಂಚಕಾರ ತರುವ ಅವಕಾಶ ಸ್ಪೀಕರ್​ಗೆ ಇದೆ.

# ಸದನದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭ ಆಡಳಿತ ಪಕ್ಷವೇ ಗದ್ದಲ ಎಬ್ಬಿಸಿ, ವಿರೋಧ ಪಕ್ಷದ ಶಾಸಕರನ್ನು ಸದನದಿಂದ ಕೆಲ ತಿಂಗಳ ಕಾಲ ಅಮಾನತು ಮಾಡಿಸಬಹುದು. ತಮಿಳುನಾಡಿನಲ್ಲಿ ಶಶಿಕಲಾ ಬಣದ ಎಐಎಡಿಎಂಕೆ ಸದಸ್ಯರನ್ನು ಅಮಾನತು ಮಾಡಿರುವ ಉದಾಹರಣೆ ಇದೆ. ಸ್ಪೀಕರ್ ಕೈಯಲ್ಲಿ ಇಷ್ಟೆಲ್ಲ ಅವಕಾಶ ಇರುವುದರಿಂದಲೇ ಆಡಳಿತ ಪಕ್ಷ ಸಹ ಆಪರೇಷನ್ ಕಮಲ ವಿಫಲ ಮಾಡಲು ಸಜ್ಜಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆ ತನಕ ಸಮ್ಮಿಶ್ರ ಸರ್ಕಾರ ಉಳಿಯುವುದು ಬೇಕಾಗಿರುವುದರಿಂದ ಉಳಿಸಿಕೊಳ್ಳಲು ಎಲ್ಲ ರೀತಿಯ ತಂತ್ರಗಳನ್ನು ಹೆಣೆಯುತ್ತಿದೆ.

ಆನಂದ್ ಸಿಂಗ್ ಹೇಳಿದ ಸತ್ಯ

ಹೊಸಪೇಟೆ ಶಾಸಕ ಆನಂದಸಿಂಗ್ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ವೇಣುಗೋಪಾಲ್ ಹಾಗೂ ಇತರ ಕಾಂಗ್ರೆಸ್ ಮುಖಂಡರನ್ನು ಭೇಟಿಯಾದರು. ಈ ವೇಳೆ ಅವರು ಬಿಜೆಪಿ ನಡೆಸಿರುವ ಆಪರೇಷನ್ ಕಮಲದ ಸಂಪೂರ್ಣ ವಿವರ ನೀಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಮುಖಂಡರಿಗೆ ಕಾಂಗ್ರೆಸ್​ನ 9 ಶಾಸಕರನ್ನು ಕರೆ ತರುವುದಾಗಿ ಭರವಸೆ ನೀಡಿದ್ದರು. ಅದರಂತೆ ಅವರು ಸಂಪರ್ಕ ಮಾಡಿರುವುದು ನಿಜ. ಆದರೆ ಅವರ ಹಿಡಿತಕ್ಕೆ ಮೂವರಿಗಿಂತ ಹೆಚ್ಚು ಜನ ಸಿಕ್ಕಿಲ್ಲ. ನಾಗೇಂದ್ರ ಹಾಗೂ ಉಮೇಶ್ ಜಾಧವ್ ಮಾತ್ರ ಅವರ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ. ಶಾಸಕ ಸುಧಾಕರ್ ಅವರನ್ನು ಕಚೇರಿಗೆ ಕರೆಸಿಕೊಂಡ ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಉಳಿಯುವಂತೆ ಕೋರಿದ್ದಾರೆ.

ಶಂಕರ್ ಮನವೊಲಿಕೆ ವಿಫಲ

ರಾಣೆಬೆನ್ನೂರು ಕೆಪಿಜೆಪಿ ಶಾಸಕ ಆರ್.ಶಂಕರ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ರಾಜ್ಯಪಾಲರಿಗೆ ಪತ್ರ ಬರೆದ ನಂತರ ಪರಿಸ್ಥಿತಿ ಗಂಭೀರತೆ ಅರಿತ ಕಾಂಗ್ರೆಸ್ ನಾಯಕರು ಅವರನ್ನು ಮನವೊಲಿಸಲು ಮುಂದಾದರು. ಆದರೆ, ಅವರು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅಂತಿಮವಾಗಿ ಸಿದ್ದರಾಮಯ್ಯರೇ ಕರೆ ಮಾಡಿದಾಗ, ‘ನಿಮ್ಮ ಬಗ್ಗೆ ಗೌರವ ಇದೆ. ಈಗ ನಾನು ನನ್ನ ನಿರ್ಧಾರದಲ್ಲಿ ಅಚಲನಾಗಿದ್ದೇನೆ. ನಿಮ್ಮ ಪಕ್ಷದ ಪರಮೇಶ್ವರ್, ಡಿ.ಕೆ.ಶಿವಕುಮಾರ್ ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ’ ಎಂದು ಶಂಕರ್ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರ ಅಲ್ಲಾಡುತ್ತಿರೋದು ಗೊತ್ತಿಲ್ಲ, ನಾನಂತೂ ಸುಭದ್ರ

ಕೋಲಾರ: ಶಾಸಕರಿಗೆ ಅವರವರ ಕ್ಷೇತ್ರದಲ್ಲಿ ಸಂಕ್ರಾಂತಿ ಆಚರಿಸಲು ಮನಸ್ಸಿಲ್ಲ ಅಂತ ಕಾಣುತ್ತೆ, ಮುಂಬೈಗೆ ಹೋಗಿ ಹಬ್ಬ ಆಚರಿಸಿಕೊಂಡಿರಬಹುದು. ನನಗೆ ಈ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಮುಂಬೈನಲ್ಲೇ ಇದ್ದಾರೋ.. ಶ್ರೀಲಂಕಾದಲ್ಲಿ ಇದ್ದಾರೋ ಅಥವಾ ಲಂಡನ್​ನಲ್ಲಿ ಇದ್ದಾರೋ.. ನನಗೇನು ಗೊತ್ತು? -ಆಪರೇಷನ್ ಕಮಲ ಬಗ್ಗೆ ಸ್ಪೀಕರ್ ರಮೇಶ್​ಕುಮಾರ್ ಹೇಳಿದ ಮಾತಿದು. ಒಂದಿಬ್ಬರು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದಿರುವುದು ತಿಳಿದಿಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೂ, ‘ಅದೇನು ಆಪರೇಷನ್ನೋ, ಅದೇನು ಕಮಲನೋ, ಏನು ಸಂಪಿಗೇನೋ ನನಗಂತೂ ಒಂದೂ ಗೊತ್ತಿಲ್ಲ. ನಾನಂತೂ ಸುಭದ್ರ’ ಎಂದರು. ಕೆಲ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಲು ನಿಮ್ಮನ್ನು ಹುಡುಕುತ್ತಿದ್ದಾರಂತೆ ಎಂದಾಗ, ‘ನನ್ನೂರೇನು ಫಾರಿನ್​ನಲ್ಲಿಲ್ಲ. ಬುಧವಾರ ವಿಧಾನಸೌಧದಲ್ಲಿ ನನ್ನ ಕಚೇರಿಯಲ್ಲೇ ಕುಳಿತು ಕಾರ್ಯನಿರ್ವಹಿಸುತ್ತೇನೆ’ ಎಂದು ಹೇಳಿದರು.

ಕೌಂಟರ್ ಸ್ಟ್ರಾಟಜಿ ಮಾಡುವ ಅಗತ್ಯವೇ ಇಲ್ಲ. ಎಲ್ಲ ಬೆಳವಣಿಗೆಗಳನ್ನು ಎಂಜಾಯ್ ಮಾಡುತ್ತಿದ್ದೇನೆ. ಯಾವ ಟೆನ್ಶನ್ ಕೂಡ ಇಲ್ಲ, ಅವರ ಬಳಿ ಎಷ್ಟು ನಂಬರ್ ಇದೆ ಹೇಳಿ?

| ಎಚ್.ಡಿ.ಕುಮಾರಸ್ವಾಮಿ ಸಿಎಂ

ಶೀಘ್ರ ಬಿಜೆಪಿ ಸರ್ಕಾರ

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಕ್ಷೇತ್ರದ ಮತದಾರರ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿಕೊಡಲೂ ಸಾಧ್ಯವಾಗುತ್ತಿಲ್ಲ. ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ತಾಲೂಕಿನ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ. ರಾಜ್ಯದಲ್ಲಿ ಶೀಘ್ರ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಎಲ್ಲ ರಾಜಕೀಯ ವಿದ್ಯಮಾನಗಳನ್ನು ಗಮ ನಿಸಿಯೇ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದಿದ್ದೇನೆ ಎಂದು ಶಾಸಕ ಎಚ್. ನಾಗೇಶ್ ವಿಜಯವಾಣಿಗೆ ತಿಳಿಸಿದ್ದಾರೆ.

ಮೈತ್ರಿಗೆ ಮೊದಲ ಶಾಕ್

ಸರ್ಕಾರ ಭದ್ರವಾಗಿದೆ, ಬಿಜೆಪಿ ಪ್ರಯತ್ನ ಸಫಲವಾಗಲ್ಲ ಎಂದು ಮಾತಾಡಿಕೊಂಡು ತಿರುಗಾಡುತ್ತಿದ್ದ ಕೈ ನಾಯಕರಿಗೆ ಮಂಗಳವಾರ ಮಧ್ಯಾಹ್ನ ದೊಡ್ಡ ಶಾಕ್ ಕಾದಿತ್ತು. ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಹಾಗೂ ರಾಣೆಬೆನ್ನೂರು ಕ್ಷೇತ್ರದ ಕೆಪಿಜೆಪಿ ಶಾಸಕ ಆರ್.ಶಂಕರ್, ‘ನಾವು ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದುಕೊಳ್ಳುತ್ತಿದ್ದೇವೆ’ ಎಂದು ರಾಜ್ಯಪಾಲರಿಗೆ ಪತ್ರ ಬರೆದು ನಿರ್ಧಾರ ತಿಳಿಸಿದರು. ಇದರಿಂದ ದೋಸ್ತಿ ನಾಯಕರು ಆತಂಕಕ್ಕೆ ಒಳಗಾದರು. ಸರ್ಕಾರದ ವಿರುದ್ಧ ತಂತ್ರ ಆರಂಭವಾಗಿದೆ ಎಂಬ ಸುಳಿವು ಸಿಕ್ಕಿಹೋಯಿತು.

ದೋಸ್ತಿಗಳ ನಿದ್ರೆಗೆಡಿಸಿದ ಕೈ ಶಾಸಕರ ನಡೆ: ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಕಾರ್ಯಾಚರಣೆ ಕಾಂಗ್ರೆಸ್-ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ. ಪರಿಸ್ಥಿತಿ ಗಂಭೀರತೆ ಅರಿತು ಸೋಮವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಡ ರಾತ್ರಿಯೇ ಸಭೆ ನಡೆಸಿದರು. ಬೆಳಗ್ಗೆ ಡಿಸಿಎಂ ಜಿ.ಪರಮೇಶ್ವರ್ ಅವರನ್ನು ಕರೆಸಿ ಒಂದೂವರೆ ತಾಸು ಮಾತುಕತೆ ನಡೆಸಿದರು. ಎಷ್ಟು ಅತೃಪ್ತ ಶಾಸಕರಿದ್ದಾರೆ? ಅವರನ್ನು ಹೇಗೆ ಮನವೊಲಿಸಬಹುದು? ಏನೆಲ್ಲ ಅವಕಾಶಗಳಿವೆ? ಈ ಬೆಳವಣಿಗೆ ಈ ಹಂತಕ್ಕೆ ಹೋಗಲು ಕಾರಣರ್ಯಾರು? ಎಂಬಿತ್ಯಾದಿ ವಿಚಾರದ ಬಗ್ಗೆ ಮಾಹಿತಿ ಪಡೆದುಕೊಂಡರು. ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ಮೊದಲೇ ಎಚ್ಚೆತ್ತುಕೊಳ್ಳದಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ ಎಲ್ಲ ನಾಯಕರ ವಿರುದ್ಧ ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಜಕೀಯ ಕೇಂದ್ರವಾದ ಕೆಕೆ ಗೆಸ್ಟ್​ಹೌಸ್

ಬೆಂಗಳೂರು: ಕುಮಾರ ಕೃಪ ಅತಿಥಿ ಗೃಹ ಸಂಕ್ರಾಂತಿ ಹಬ್ಬದಂದು ರಾಜಕೀಯ ಬೆಳವಣಿಗೆಯ ಕೇಂದ್ರವಾಗಿ ಪರಿಣಮಿಸಿತ್ತು. ಕೆ.ಸಿ.ವೇಣುಗೋಪಾಲ್ ಸೋಮವಾರ ರಾತ್ರಿ ಅಲ್ಲಿ ಬೀಡುಬಿಟ್ಟಿದ್ದು, ಕಾಂಗ್ರೆಸ್ ನಾಯಕರೊಂದಿಗೆ ನಿರಂತರ ಸಭೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಇನ್ನಿತರ ನಾಯಕರು ಆಗಮಿಸಿ ಮಾಹಿತಿ ನೀಡಿದರು. 4 ಗಂಟೆ ಸುಮಾರಿಗೆ ಸಿಎಂ ಕುಮಾರಸ್ವಾಮಿ ಕೂಡ ಕೆಕೆ ಗೆಸ್ಟ್ ಹೌಸ್​ಗೆ ಆಗಮಿಸಿ ವೇಣು ಜತೆ ವಿಚಾರ ವಿನಿಮಯ ಮಾಡಿಕೊಂಡರು. ವೇಣು ವಿರುದ್ಧ ಸಿಟ್ಟು: ರಾಜ್ಯದ ಕಾಂಗ್ರೆಸ್ ಹಿರಿಯ ನಾಯಕರನ್ನು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಅಸಮಾಧಾನ ಇದೇ ಸಂದರ್ಭದಲ್ಲಿ ಹೊರಬಂದಿದೆ. ದೆಹಲಿಗೆ ಬಂದಾಗ ವೇಣು ಸರಿಯಾಗಿ ಮಾತನಾಡುವುದಿಲ್ಲ, ಮಾತುಕತೆಗೆ ಸೂಕ್ತ ಅವಕಾಶ ನೀಡುವುದಿಲ್ಲ, ತಾತ್ಸಾರ ಮಾಡುತ್ತಾರೆ. ಕಾಸು ಕಿಮ್ಮತ್ತು ನೀಡುವುದಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಉತ್ತರ ಹಾಗೂ ಮಧ್ಯ ಕರ್ನಾಟಕ ಭಾಗದ ಪ್ರಭಾವಿ ನಾಯಕರಿಗೆ ಮನ್ನಣೆ ನೀಡುತ್ತಿಲ್ಲ. ಪಕ್ಷಕ್ಕಾಗಿ ಹಲವು ದಶಕಗಳಿಂದ ದುಡಿದ ನಾಯಕರ ಮಾತು ಆಲಿಸದಷ್ಟು ಉದಾಸೀನ ಮಾಡುತ್ತಾರೆ. ಈ ಸಂಗತಿಯನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜೀನಾಮೆ ಸನ್ನಿ ತಡೆಗೆ ಕೈ ರೆಸಾರ್ಟ್ ಪ್ಲಾನ್

ಬೆಂಗಳೂರು: ಶಾಸಕ ಸ್ಥಾನಕ್ಕೆ, ಪಕ್ಷಕ್ಕೆ ರಾಜೀನಾಮೆ ನೀಡುವ ಸಮೂಹ ಸನ್ನಿ ತಡೆಯಲು ಕಾಂಗ್ರೆಸ್ ನಾಯಕರು ಬುಧವಾರ ತನ್ನೆಲ್ಲ ಶಾಸಕರನ್ನು ಒಂದೆಡೆ ಸೇರಿಸಲು ನಿರ್ಧರಿಸಿದೆ. ಮಂಗಳವಾರ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಎಲ್ಲ ಶಾಸಕರನ್ನೂ ಬೆಂಗಳೂರಿಗೆ ಬರ ಹೇಳಿ, ಅವರೆಲ್ಲರನ್ನೂ ಅಲ್ಲಿಂದ ರೆಸಾರ್ಟ್​ಗೆ ಕಳಿಸುವ ಬಗ್ಗೆಯೂ ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಾಂಗ್ರೆಸ್​ನ 16ಕ್ಕಿಂತ ಹೆಚ್ಚು, ಜೆಡಿಎಸ್​ನ 3 ಶಾಸಕರನ್ನು ಬಿಜೆಪಿ ನಾಯಕರು ಮಾತನಾಡಿ ಆಹ್ವಾನ ನೀಡಿದ್ದಾರೆಂಬ ಮಾಹಿತಿ ಆಧರಿಸಿ, ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ಶುರುಮಾಡಿದ್ದಾರೆ. ಮೊದಲಿಗೆ ಪಕ್ಷದ ಶಾಸಕರೆಲ್ಲರನ್ನೂ ಒಂದು ಕಡೆ ಸೇರಿಸಿ, ಅವರ್ಯಾರೂ ಬಿಜೆಪಿ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳುವುದು ಉದ್ದೇಶವಾಗಿದೆ. ಸಿಎಂ ಕುಮಾರಸ್ವಾಮಿ ಹಾಗೂ ಕೆ.ಸಿ.ವೇಣುಗೋಪಾಲ್ ಇದೇ ವಿಚಾರ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ರಾಯಚೂರು ಜಿಲ್ಲೆಯ ಇಬ್ಬರು ಶಾಸಕರಾದ ಬಸನಗೌಡ ದದ್ದಲ್ ಹಾಗೂ ಡಿ.ಎಸ್.ಹೂಲಗೇರಿ ಬೆಂಗಳೂರಿಗೆ ತೆರಳುವ ಸಿದ್ಧತೆಯಲ್ಲಿದ್ದಾರೆ.

ಜೆಡಿಎಸ್​ನಲ್ಲೂ ಅಸಮಾಧಾನ

ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಸ್ತಕ್ಷೇಪ, ನಿಗಮ-ಮಂಡಳಿ ಹಾಗೂ ಸಂಸದೀಯ ಕಾರ್ಯದರ್ಶಿ ಹುದ್ದೆಗಳ ನೇಮಕಾತಿಗೆ ಮುಂದಾಗದ್ದಕ್ಕೆ ಸಿಎಂ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕರೂ ಅಸಮಾಧಾನ ಹೊಂದಿದ್ದು, ಯಾವಾಗ ಬೇಕಾದರೂ ಸ್ಪೋಟಗೊಳ್ಳಬಹುದು ಎನ್ನಲಾಗಿದೆ. ಅಲ್ಲದೆ, ದೇವೇಗೌಡ ಕುಟುಂಬದವರಾದ ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಸಿ.ಎನ್.ಬಾಲಕೃಷ್ಣ, ಡಿ.ಸಿ.ತಮ್ಮಣ್ಣ ಆಯ್ಕೆಯಾಗಿದ್ದಲ್ಲದೆ, ಹಲವರು ಪ್ರಮುಖ ಹುದ್ದೆಯಲ್ಲಿದ್ದಾರೆ. ಇದೂ ಆಕ್ರೋಶಕ್ಕೆ ಕಾರಣವಾಗಿದೆ.

ತಿಪ್ಪೇಸ್ವಾಮಿ ರಾಜಕೀಯ ಕಾರ್ಯದರ್ಶಿ?: ಜೆಡಿಎಸ್ ಪಾಲಿನ ಖಾಲಿ ಉಳಿದಿರುವ ವಿಧಾನ ಪರಿಷತ್​ನ ಸದಸ್ಯತ್ವಕ್ಕೆ ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ದೇವೇಗೌಡರ ಆಪ್ತ ತಿಪ್ಪೇಸ್ವಾಮಿ ಅವರನ್ನು ನೇಮಕ ಮಾಡುತ್ತಿದ್ದು, ಅವರನ್ನೇ ರಾಜಕೀಯ ಕಾರ್ಯದರ್ಶಿ ಮಾಡುವ ಬಗ್ಗೆ ತೀರ್ವನವಾಗಿರುವುದು ಆಕಾಂಕ್ಷಿಗಳ ಅಸಮಾಧಾನ ಹೆಚ್ಚಿಸಿದೆ.

ಬಹಳ ನೋವಿನಿಂದ ಹೇಳುವುದೇನೆಂದರೆ, ಬರವನ್ನು ಎದುರಿಸುವಲ್ಲಿಯೂ ಈ ಸರ್ಕಾರ ಪ್ರಯತ್ನ ಮಾಡಲಿಲ್ಲ. ಅಭಿವೃದ್ಧಿ ಕಡೆ ಗಮನ ಕೊಡಲಿಲ್ಲ. ಹೀಗಾಗಿ ನನ್ನ ಬೆಂಬಲ ಹಿಂಪಡೆದೆ.

| ಆರ್.ಶಂಕರ್ ಮಾಜಿ ಸಚಿವ

ಇಬ್ಬರು ಪಕ್ಷೇತರರ ಬೆಂಬಲ ವಾಪಸ್ ಬಗ್ಗೆ ಈಗ ಮಾಹಿತಿ ಸಿಕ್ಕಿದೆ. ಆದರೂ ಸರ್ಕಾರ ಸುಭದ್ರವಾಗಿದೆ. ಬಿಜೆಪಿ ಕುದುರೆ ವ್ಯಾಪಾರ ನಡೆಸು ತ್ತಿದೆ. ನಮ್ಮ ಶಾಸಕರ ಮೇಲೆ ನಮಗೆ ನಂಬಿಕೆ ಇದೆ

| ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ರಾಜ್ಯ ಉಸ್ತುವಾರಿ

ಪಕ್ಷೇತರ ಶಾಸಕರು ಯಾವ ಕಾರಣಕ್ಕೆ ಬೆಂಬಲ ಹಿಂಪಡೆದಿದ್ದಾರೆ ಗೊತ್ತಿಲ್ಲ. ನಮ್ಮ ಶಾಸಕರಿಗೆ ಅಧಿಕಾರದ ಆಮಿಷ ತೋರಿಸಿದ್ದಾರೆ, ಅವರನ್ನು ಮುಂಬೈನಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಎಷ್ಟು ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ ಗೊತ್ತಿಲ್ಲ.

| ಡಾ.ಜಿ.ಪರಮೇಶ್ವರ್ ಡಿಸಿಎಂ

ಅತೃಪ್ತ ಶಾಸಕರ ಹುಡುಕಾಟಕ್ಕೆ ಪರದಾಟ

ಬೆಂಗಳೂರು: ಅತೃಪ್ತ ಶಾಸಕರನ್ನು ಪಟ್ಟಿ ಮಾಡಿಕೊಂಡು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಜಿ.ಪರಮೇಶ್ವರ್ ಅವರು ಕರೆ ಮಾಡಿ ಮಾತನಾಡುವ ಪ್ರಯತ್ನ ಮಾಡಿದರು. ಒಂದು ಹಂತದಲ್ಲಿ ಅನೇಕರು ದೂರವಾಣಿ ಕರೆ ಸ್ವೀಕರಿಸದೆ ಇದ್ದಾಗ ಕೈ ನಾಯಕರಲ್ಲಿ ತಳಮಳ ಹೆಚ್ಚಾಗಿತ್ತು. ಯಾವುದೇ ಸಂದರ್ಭದಲ್ಲಿ ಏನೂ ಆಗಿಬಿಡಬಹುದೆಂದು ಮಧ್ಯಾಹ್ನದ ವೇಳೆಗೆ ಖಾತ್ರಿಯಾಗಿತ್ತು. ಮೇಲ್ನೋಟಕ್ಕೆ ಸರ್ಕಾರ ಸುಭದ್ರ ಎಂದು ಹೇಳಿಕೊಂಡರೂ ನಂಬರ್ ಗೇಮ್ ಲೆಕ್ಕಾಚಾರದಲ್ಲಿ ಪ್ರತಿ ಶಾಸಕರು ಅನಿವಾರ್ಯವಾದ್ದರಿಂದ ಅವರ ಮನವೊಲಿಕೆ ಪ್ರಯತ್ನವನ್ನು ಮಧ್ಯಾಹ್ನದ ನಂತರ ತೀವ್ರಗೊಳಿಸಿದರು. ಇನ್ನೊಂದೆಡೆ, ಅತೃಪ್ತ ಶಾಸಕರ ಮಾತನ್ನಷ್ಟೇ ನಂಬಿ ಕೂರದೆ ಅವರ ನಡೆಗಳ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸಕ್ಕಿಳಿಸಿದರು.

ಎಲ್ಲರೂ ಸಂಪರ್ಕದಲ್ಲಿ…

ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿರುವುದಾಗಿ ಹೇಳುತ್ತಿರುವ ಪ್ರತಾಪಗೌಡ ಪಾಟೀಲ್ ಕುಟುಂಬ ಸಮೇತ ಕೊಲ್ಹಾಪುರದಲ್ಲಿದ್ದು, ವಾಪಸ್ ಮಸ್ಕಿಗೆ ಹೋಗುವುದಾಗಿ ಹೇಳಿದ್ದಾರೆ. ಕುಟುಂಬದೊಂದಿಗೆ ಇರುವ ಪೋಟೋ ಸಹ ಕಳುಹಿಸಿದ್ದಾರೆ. ಪ್ರವಾಸಕ್ಕೆ ಮುನ್ನ ಆಪ್ತರೊಂದಿಗೆ ಸಭೆ ನಡೆಸಿದ್ದು ಅನುಮಾನಗಳಿಗೆ ಕಾರಣವಾಗಿದೆ. ಒಳ್ಳೆಯದಾಗುವುದಿದ್ದರೆ ಬಿಜೆಪಿಗೆ ಹೋಗಿ ಎನ್ನುವ ಅಭಿಪ್ರಾಯ ಮೂಡಿಬಂದಿದೆ ಎನ್ನಲಾಗಿದೆ. ಕಂಪ್ಲಿಯ ಗಣೇಶ್ ಚಿಕ್ಕಮಗಳೂರು ಜಿಲ್ಲೆಯ ದೇವಾಲಯಗಳಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಯಲ್ಲಾಪುರದ ಶಿವರಾಮ ಹೆಬ್ಬಾರ್ ವಿದೇಶ ಪ್ರವಾಸದಲ್ಲಿರುವುದಾಗಿ ಹೇಳಿದ್ದಾರೆ. ಯಶವಂತರಾವ್ ಪಾಟೀಲ್ ಈಗಾಗಲೇ ಕಾಂಗ್ರೆಸ್ ಬಿಡುವುದಿಲ್ಲವೆಂಬ ಮಾತನಾಡಿದ್ದಾರೆ. ಅಜಯ್ ಸಿಂಗ್ ಸಹ ಕುಟುಂಬದೊಂದಿಗೆ ಪ್ರವಾಸದಲ್ಲಿದ್ದಾರೆ. ಭೀಮಾನಾಯ್್ಕ ಸಚಿವ ಜಮೀರ್ ಅಹಮದ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ.