ಬಿಜೆಪಿ, ಮೋದಿಗೆ ತಿವಿದ ದೋಸ್ತಿಗಳು

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಇದಕ್ಕೆ ತಕ್ಕಪಾಠವನ್ನು ಜನತೆ ಕಲಿಸಲಿದ್ದಾರೆಂದು ಎಚ್.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಬಿಜೆಪಿಯ ಸಿ.ಟಿ. ರವಿ ಖಾರವಾಗಿಯೇ ಪ್ರತಿಕ್ರಿಸಿದ್ದಾರೆ.

ಗೌಡ ಗುಟುರು

‘ಸಂಕ್ರಾಂತಿ ಸಂದರ್ಭ ರೈತ ಪರ ಸರ್ಕಾರವನ್ನು ಕದಡಿಸಲು ಯತ್ನಿಸುತ್ತಿರುವ ದುಷ್ಟಶಕ್ತಿಗಳ ಊರುಭಂಗವಾಗಲಿದ್ದು, ಈ ಪರ್ವ ಅನ್ನದಾತ ರೈತರು ಹಾಗೂ ಸಮಸ್ತ ಜನತೆಯ ಮನ-ಮನೆಗಳಲ್ಲಿ ಸುಖ, ಶಾಂತಿ, ಸಮೃದ್ಧಿ ತರಲಿ’ ಎಂದು ದೇವೇಗೌಡ ಮೊದಲಿಗೆ ಟ್ವೀಟ್ ಮಾಡಿದರು. ಬಳಿಕ ‘ರಾಜ್ಯದ 156 ತಾಲೂಕುಗಳು ಬರಪೀಡಿತವಾಗಿದ್ದು, ಬಿಜೆಪಿ ತನ್ನ ಶಾಸಕರನ್ನು ಒಂದು ವಾರದಿಂದ ಉತ್ತರ ಭಾರತಕ್ಕೆ ಕಳುಹಿಸಿ ಮೋಜು-ಮಸ್ತಿಯಲ್ಲಿ ತೊಡಗಿಸಿಕೊಂಡಿದೆ. ಸರ್ಕಾರ ಬೀಳಿಸುತ್ತೇನೆ ಎನ್ನುವ ಭ್ರಮೆಯಲ್ಲಿರುವ ಬಿಜೆಪಿಯಿಂದ ಬರಪೀಡಿತ ಕ್ಷೇತ್ರದ ಜನತೆಗೆ ಅನ್ಯಾಯವಾಗುತ್ತಿದೆ. ಇದಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಮತ್ತೊಂದು ಟ್ವೀಟ್​ನಲ್ಲಿ ತಿವಿದರು.

ಸಿದ್ದು ಗುದ್ದು

‘ಚೌಕಿದಾರ್ ಪ್ರಧಾನಿ ಅವರೇ, ನಿಮ್ಮನ್ನು ದೇಶದ ಚೌಕಿದಾರ್ ಎಂದು ಹೇಳಿಕೊಳ್ಳುತ್ತೀರಿ. ಈಗ ನಮ್ಮ ರಾಜ್ಯದ ಶಾಸಕರನ್ನು ಹೋಟೆಲ್ ಕೋಣೆಗಳಲ್ಲಿ ಕೂಡಿ ಹಾಕಿ ಕಾಯುತ್ತಿರುವ ಚೌಕಿದಾರ್ ಆಗಿ ಬಿಟ್ಟಿರಲ್ಲ? ಛೇ!’ ಎಂದು ಸಿದ್ದರಾಮಯ್ಯ ಟ್ವಿಟರ್​ನಲ್ಲಿ ಪ್ರಧಾನಿ ಮೋದಿ ವಿರುದ್ಧ ಗುಡುಗಿದರು. ಬಳಿಕ ‘ಸ್ಥಿರ ಸರ್ಕಾರ ಅಸ್ಥಿರಗೊಳಿಸುವ ಗಂಧಾ ನಿಯತ್ ಬಿಜೆಪಿಯ ಮುಖವಾಡ ಕಳಚಿದ್ದು, ನಿಮ್ಮ ನಿಜವಾದ ನಿಯತ್ತು ಏನೆಂಬುದು ಬಹಿರಂಗಗೊಂಡಿದೆ. ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ತನ್ನದೇ ಶಾಸಕರನ್ನು ದಿಗ್ಬಂಧನದಲ್ಲಿಟ್ಟು ಅಭದ್ರತೆಯಿಂದ ನರಳುತ್ತಿದೆ’ ಎಂದು ಮತ್ತೊಂದು ಟ್ವೀಟ್​ನಲ್ಲಿ ಟೀಕಿಸಿದರು.

ಬಿಜೆಪಿ ಶಾಸಕರನ್ನು ಕರೆತರುವ ಜವಾಬ್ದಾರಿಯನ್ನು ಸಿಎಂ ನನಗೆ ನೀಡಿದ್ದಾರೆ. ಬಹಳಷ್ಟು ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ. ಡಿ.ಕೆ.ಶಿವಕುಮಾರ್, ನಾನು ಅಧಿಕೃತವಾಗಿ ಅಖಾಡಕ್ಕೆ ಇಳಿಯುತ್ತಿದ್ದೇವೆ.

| ಸಿ.ಎಸ್.ಪುಟ್ಟರಾಜು ಸಚಿವ

ಬಿಜೆಪಿ ಶಾಸಕರು ಎಲ್ಲಿಗೆ ಹೋಗಬೇಕು ಎಂಬುದನ್ನು ಕೇಳಲು ಸಿದ್ದರಾಮಯ್ಯ ಅವರಿಗೆ ಅಧಿಕಾರವಿಲ್ಲ. ಅವರಿಗೆ ಅಷ್ಟು ಕಾಳಜಿ ಇದ್ದರೆ ನಮ್ಮ ಪಕ್ಷಕ್ಕೆ ಬರಲಿ. ಬಂದ ನಂತರ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಅವರನ್ನು ನಡೆಸಿಕೊಳ್ಳುವ ಭರವಸೆ ನೀಡುತ್ತೇನೆ. ಪ್ರಹಸನಕ್ಕೆ ಕ್ಲೈಮ್ಯಾಕ್ಸ್ ನೀಡುವವರು ಕಾಂಗ್ರೆಸ್​ನಲ್ಲಿರುವ ಬಂಡಾಯ ನಾಯಕರು, ನಾವಲ್ಲ.

| ಸಿ.ಟಿ.ರವಿ ಬಿಜೆಪಿ ಮುಖಂಡ