ರಾಜೀನಾಮೆ ಆಟ ಶುರು

ಬೆಂಗಳೂರು/ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ರಾಜಕೀಯದ ಚದುರಂಗದಾಟದಲ್ಲಿ ಮೊದಲ ದಾಳ ಉರುಳಿಸಿರುವ ಇಬ್ಬರು ಪಕ್ಷೇತರ ಶಾಸಕರು ಸಂಕ್ರಾಂತಿ ದಿನದಂದೇ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುವ ಮೂಲಕ ಬಿಜೆಪಿಯ ಬೆನ್ನಿಗೆ ನಿಂತಿದ್ದಾರೆ. ಈ ನಡೆಯಿಂದಾಗಿ ಹೆದರಿದಂತಿರುವ ಮೈತ್ರಿ ಸರ್ಕಾರ, ಅತೃಪ್ತ ಶಾಸಕರ ಮನವೊಲಿಕೆ ಸರ್ಕಸ್ ಆರಂಭಿಸಿದೆ. ಇದರಿಂದಾಗಿ ರಾಜ್ಯ ರಾಜಕಾರಣದ ಹೈಡ್ರಾಮಾ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ.

ಬಿಜೆಪಿ ಮೂಲಗಳ ಪ್ರಕಾರ ಎರಡು ಮೂರು ಹಂತಗಳಲ್ಲಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಾರೆ. ಇತ್ತ ಮೈತ್ರಿ ಪಕ್ಷದ ನಾಯಕರಿಗೆ ಆಡಳಿತ ಪಕ್ಷದ ಕೆಲವು ಶಾಸಕರ ರಾಜೀನಾಮೆ ಬಗ್ಗೆ ಖಚಿತ ಮಾಹಿತಿ ಇದ್ದರೂ ಸರ್ಕಾರ ಉರುಳುವಷ್ಟೇನೂ ಸಂಖ್ಯೆ ಇರುವುದಿಲ್ಲ ಎಂಬ ಆಶಾಭಾವನೆಯಲ್ಲೇ ದಿನದೂಡು ತ್ತಿದ್ದಾರೆ. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್​ನ ಒಟ್ಟು 18 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂಬ ಇತ್ತೀಚಿನ ವದಂತಿ ಮೈತ್ರಿಪಡೆಯ ನೆಮ್ಮದಿ ಕೆಡಿಸಿದೆ.

ವಿಜಯವಾಣಿಯೊಂದಿಗೆ ಮಾತ ನಾಡಿದ ಬಿಜೆಪಿ ಹಿರಿಯ ಶಾಸಕರ ಪ್ರಕಾರ, ‘ಮೈತ್ರಿ ಸರ್ಕಾರ ಪತನ ಖಚಿತ. ಸರ್ಕಾರ ಅಸ್ಥಿರಗೊಳ್ಳುವಷ್ಟು ಅತೃಪ್ತ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟಗೊಳ್ಳಲಿದೆ’. ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ರಚಿಸಬೇಕೆಂಬ ಪ್ರಯತ್ನವನ್ನು ಬಿಜೆಪಿ ಮುಂದುವರಿಸಿದೆ. ಹಿರಿಯ ನಾಯಕರ ಆದೇಶದ ಮೇರೆಗೆ ಹರಿಯಾಣದ ಗುರುಗ್ರಾಮದ ಐಟಿಸಿ ಗ್ರಾ್ಯಂಡ್ ಭಾರತ್ ರೆಸಾರ್ಟ್​ನಲ್ಲಿ ವಾಸ್ತವ್ಯ ಮುಂದುವರಿಸಿರುವ ಶಾಸಕರು, ಬುಧವಾರ ಮತ್ತು ಗುರುವಾರ ಕೂಡ ರೆಸಾರ್ಟ್​ನಲ್ಲೇ ಇರಲಿದ್ದಾರೆ. ಕಾಂಗ್ರೆಸ್​ನಿಂದ ಕನಿಷ್ಠ 16 ಶಾಸಕರ ರಾಜೀನಾಮೆ ಕೊಡಿಸಬೇಕೆಂಬ ಬಿಜೆಪಿ ನಾಯಕರ ಪ್ರಯತ್ನಕ್ಕೆ ಇನ್ನೂ ಪೂರ್ಣ ಪ್ರಮಾಣದ ಯಶ ಸಿಕ್ಕಿಲ್ಲ ಎನ್ನಲಾಗಿದೆ.

ಕಾಂಗ್ರೆಸ್​ನ 10-11 ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದು ಹೇಳಲಾಗುತ್ತಿದ್ದರೂ, 18 ಶಾಸಕರ ರಾಜೀನಾಮೆಯ ಖಾತರಿ ಇಲ್ಲದೆ ನಾವು ರಾಜೀನಾಮೆ ನೀಡುವುದಿಲ್ಲ ಎಂದು ಆ ಅತೃಪ್ತ ಶಾಸಕರು ಬಿಜೆಪಿ ಮುಖಂಡರಿಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಇತ್ತ ಬೆಂಗಳೂರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಜಂಟಿ ಸಭೆ ನಡೆಸಿ ಮುಂದೇನು ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸಿದರು. ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡ ಮತ್ತು ಸಿಎಂ ಹಾಗೂ ಕಾಂಗ್ರೆಸ್ ರಾಜ್ಯಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಡುವೆ ಬಹುಹೊತ್ತು ಸಭೆ ನಡೆಯಿತು.

ಏನೇನಾಯ್ತು?

# ಮಧ್ಯರಾತ್ರಿ 11.45ಕ್ಕೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣು ಬೆಂಗಳೂರಿಗೆ ಆಗಮನ

# ತಡ ರಾತ್ರಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಚ್.ಡಿ.ದೇವೇಗೌಡ ಭೇಟಿ, ಚರ್ಚೆ

# ಬೆಳಗ್ಗೆ 8.45 ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಜತೆ ವೇಣು ಸಭೆ

# ಬೆಳಗ್ಗೆ 9.30ಕ್ಕೆ ಡಿಕೆಶಿ ಸದಾಶಿವ ನಗರ ಮನೆಗೆ ಶಾಸಕ ಆನಂದ್ ಸಿಂಗ್ ಆಗಮನ

# 9.45 ದಿನೇಶ್ ಗುಂಡೂರಾವ್​ರಿಂದ ಮಾಹಿತಿ ಪಡೆದ ಕೆ.ಸಿ.ವೇಣು

# 10.30ಕ್ಕೆ ಕೆಕೆ ಅತಿಥಿಗೃಹದಲ್ಲಿ ವೇಣು ಮುಂದೆ ಆನಂದ್ ಸಿಂಗ್ ಹಾಜರುಪಡಿಸಿದ ಡಿಕೆಶಿ

# 11.10ಕ್ಕೆ ಪರಮೇಶ್ವರ್, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಜತೆ ವೇಣು ಸಭೆ

# 12 ಗಂಟೆಗೆ ಕೆಕೆ ಅತಿಥಿ ಗೃಹಕ್ಕೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಆಗಮನ

# ಮಧ್ಯಾಹ್ನ 1.45ಕ್ಕೆ ಸಭೆ ನಾಯಕರ ಮುಕ್ತಾಯ

# 2.45ಕ್ಕೆ ಇಬ್ಬರು ಪಕ್ಷೇತರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್, ಮುಂಬೈನಲ್ಲಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ

# 3.30ಕ್ಕೆ ಕುಮಾರ ಕೃಪಕ್ಕೆ ಸಿಎಂ ಕುಮಾರಸ್ವಾಮಿ ಆಗಮನ, ವೇಣು ಜತೆ 1 ತಾಸು ಸಭೆ

# ಸಂಜೆ 6.10ಕ್ಕೆ ಎಚ್.ಡಿ.ದೇವೇಗೌಡರ ಮನೆಗೆ ಸಿಎಂ, ದಿನದ ಬೆಳವಣಿಗೆ ಬಗ್ಗೆ ವಿವರಣೆ

# 7.15 ಡಿಕೆಶಿ ಮಾಹಿತಿ ಹೊತ್ತು ಆಗಮನ

# 7.30ಕ್ಕೆ ಶಾಸಕ ಶ್ರೀಮಂತ್ ಪಾಟೀಲರನ್ನು ವೇಣು ಮುಂದೆ ಹಾಜರುಪಡಿಸಿದ ಸತೀಶ್ ಜಾರಕಿಹೊಳಿ

#  7.45 ಮತ್ತೆ ನಾಯಕರ ಸಭೆ ಮುಂದುವರಿಕೆ

ಕಾಂಗ್ರೆಸ್ ಪ್ರಯತ್ನ

ಒಂದು ವಾರದ ಬಳಿಕ ಕಡೆಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ದೂರವಾಣಿ ಮೂಲಕ ಸಂರ್ಪಸುವಲ್ಲಿ ಯಶಸ್ವಿಯಾದ ಕೈ ನಾಯಕರು, ಮತ್ತೆ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಹಾಗೆಯೇ ಬೆಂಬಲ ವಾಪಸ್ ಪಡೆದ ಪಕ್ಷೇತರ ಶಾಸಕರನ್ನು ಸಂರ್ಪಸಿದ್ದಾರೆ. ಆದರೆ, ಈ ಪ್ರಯತ್ನಗಳು ಕೈಗೂಡಿಲ್ಲ. ಜತೆಗೆ ಮುಂಬೈನಲ್ಲಿ ಕಾಂಗ್ರೆಸ್ ಶಾಸಕರು ಬೀಡುಬಿಟ್ಟಿರುವ ಹೋಟೆಲ್​ನಲ್ಲಿ ಯಾರಿದ್ದಾರೆಂದು ತಿಳಿದುಕೊಳ್ಳುವ ಪ್ರಯತ್ನವನ್ನು ಕೂಡ ರಾಜ್ಯ ಕಾಂಗ್ರೆಸ್ ನಾಯಕರು ನಡೆಸಿದರು.

ಕಮಲಕ್ಕೂ ಇದೆ ಗೊಂದಲ

ಸರ್ಕಾರ ರಚನೆಯ ಕಸರತ್ತನ್ನು ಯಡಿಯೂರಪ್ಪ ಜತೆಗೆ ಕೆಲವೇ ಕೆಲವು ಮಂದಿ ನಿರ್ವಹಿಸುತ್ತಿರುವುದರಿಂದ ಪಕ್ಷದ ಶಾಸಕರಿಗೆ ಒಳಗೇನು ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ‘ಮೂರ್ನಾಲ್ಕು ದಿನ ನೀವು ನಮಗೆ ಸಹಕಾರ ನೀಡಬೇಕು. ನಿಮಗೆ ಸಿಹಿ ಸುದ್ದಿ ನೀಡಲಿದ್ದೇವೆ’ ಎಂದು ರಾಜ್ಯಾಧ್ಯಕ್ಷರು ಶಾಸಕರಿಗೆ ತಿಳಿಸಿದ್ದಾರೆ. ಅಧ್ಯಕ್ಷರ ಮಾತನ್ನು ನಾವು ಪಾಲಿಸಬೇಕು. ಅವರು ಹೇಳಿದಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಶಾಸಕರೊಬ್ಬರು ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.

ಆಪರೇಷನ್ ಬೇಕಿತ್ತೇ?

ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಗದಿರುವುದೂ ಬಿಜೆಪಿ ಶಾಸಕರಲ್ಲಿ ಆತಂಕ ಮೂಡಿಸಿದೆ. ಈ ಬಾರಿಯೂ ಸರ್ಕಾರ ರಚನೆ ಕಸರತ್ತು ವಿಫಲಗೊಂಡಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳನ್ನು ಎದುರಿಸುವುದು ಹೇಗೆ ಎಂಬ ಪ್ರಶ್ನೆ ಕಾಡಿದೆ. ಈ ವೈಫಲ್ಯ ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರಬಹುದು. ಕಾಂಗ್ರೆಸ್ ನಾಯಕರು ಬೇರೆ ರಾಜ್ಯಗಳಲ್ಲೂ ಇದನ್ನು ಚುನಾವಣಾ ವಿಷಯವನ್ನಾಗಿ ಬಳಸಿಕೊಳ್ಳಬಹುದು ಎಂಬ ಚರ್ಚೆಗಳೂ ಶಾಸಕರ ಮಧ್ಯೆ ನಡೆದಿದೆ.

ಸಚಿವ, ನಿಗಮ ಸ್ಥಾನ

16 ಕಾಂಗ್ರೆಸ್ ಶಾಸಕರ ರಾಜೀನಾಮೆಗೆ ವೇದಿಕೆ ಸೃಷ್ಟಿಸುವ ನಿಟ್ಟಿನಲ್ಲಿ ಅತೃಪ್ತರೊಂದಿಗೆ ಸಮಾಲೋಚನೆ ಮೇಲೆ ಸಮಾಲೋಚನೆ ನಡೆಸಿರುವ ಬಿಜೆಪಿ ಮುಖಂಡರು, ಕನಿಷ್ಠ 14 ಮಂದಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆನ್ನಲಾಗಿದೆ. ಜತೆಗೆ ಮುಂದಿನ ಚುನಾವಣೆಗೆ ಸಂಪನ್ಮೂಲ ಹಂಚುವ ಜತೆಗೆ, ನಿಗಮ ಮಂಡಳಿ ಸ್ಥಾನಮಾನ ನೀಡುವ ಭರವಸೆ ಕೊಟ್ಟಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ ಮುಖಂಡರು ಶಾಸಕರೊಂದಿಗೆ ಸತತ ಮಾತುಕತೆ ಮೂಲಕ ಮನವೊಲಿಸುವ ಯತ್ನ ಮುಂದುವರಿಸಿದ್ದಾರೆ.

ಸಿಗದ ಅಂಕೆ-ಸಂಖ್ಯೆ

# ಬಿಜೆಪಿ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್, ಸುಧಾಕರ್, ಶ್ರೀಮಂತ್ ಪಾಟೀಲ್ ಅವರನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮುಂದೆ ಹಾಜರುಪಡಿಸುವಷ್ಟರಲ್ಲಿ ರಾಜ್ಯ ನಾಯಕರು ಸುಸ್ತುಹೊಡೆದರು.

# ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ 14 ಶಾಸಕರು ಈಗಾಗಲೇ ಬಿಜೆಪಿ ಸಂಪರ್ಕದಲ್ಲಿದ್ದಾರೆ. ಈ ಸಂಖ್ಯೆ ಹೆಚ್ಚಾಗುವ ಅನುಮಾನಗಳು ಇವೆ. ಹೀಗಾಗಿ ಪ್ರತಿ ಶಾಸಕರ ಮೇಲೆಯೂ ಗುಮಾನಿ ಹೊಂದಿ ಅವರ ಚಲನವಲನದ ಮೇಲೆ ಸರ್ಕಾರ ಕಣ್ಣಿಟ್ಟಿದೆ.

ಆ 14 ಬಿಜೆಪಿಗೆ ಲಕ್!

ವಿಧಾನಸಭೆಯಲ್ಲಿ ಬಿಜೆಪಿ 104 ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ ಸ್ಪೀಕರ್ ಸೇರಿ 80, ಜೆಡಿಎಸ್ 37, ಬಿಎಸ್​ಪಿ ಓರ್ವ ಹಾಗೂ ಇತರರು ಇಬ್ಬರಿದ್ದಾರೆ. ಬಿಜೆಪಿಯ ಆಪರೇಷನ್ ಕಮಲ ಯಶಸ್ವಿ ಆಗಬೇಕಾದಲ್ಲಿ ಮಿತ್ರ ಪಕ್ಷಗಳ 14 ಶಾಸಕರ ರಾಜೀನಾಮೆ ಅಂಗೀಕಾರ ಆಗಬೇಕು. 120 ಇದ್ದ ದೋಸ್ತಿ ಸರ್ಕಾರದ ಆಡಳಿತ ಪಕ್ಷಗಳ ಸದಸ್ಯ ಬಲ ಪಕ್ಷೇತರರ ಬೆಂಬಲ ವಾಪಸ್​ನೊಂದಿಗೆ 118ಕ್ಕೆ ಇಳಿದಿದೆ. ಆದರೆ ನಾಮ ನಿರ್ದೇಶಿತ ಸದಸ್ಯರಿಗೆ ಸದನದಲ್ಲಿ ಮತದಾನದ ಹಕ್ಕು ಇರುವುದರಿಂದ ಬಲ 119 ಆಗುತ್ತದೆ. ಇತ್ತ ಪಕ್ಷೇತರರು ಬೆಂಬಲ ನೀಡುವುದರಿಂದ ಬಿಜೆಪಿಯ ಬಲ 106ಕ್ಕೆ ಏರಿಕೆ ಆಗುತ್ತದೆ. ಆಡಳಿತ ಪಕ್ಷದ ಬಲ ವಿರೋಧ ಪಕ್ಷಕ್ಕಿಂತ ಕಡಿಮೆಯಾಗಲು 14 ಜನ ರಾಜೀನಾಮೆ ನೀಡಲೇಬೇಕು. ಆದ್ದರಿಂದಲೇ ಬಿಜೆಪಿ ವರಿಷ್ಠರು 18 ರಿಂದ 20 ಜನರ ಆಪರೇಷನ್​ಗೆ ಕಟ್ಟಪ್ಪಣೆ ವಿಧಿಸಿದ್ದಾರೆಂದು ಹೇಳಲಾಗುತ್ತಿದೆ. ಇಷ್ಟು ಜನ ರಾಜೀನಾಮೆ ನೀಡಿ ಅದನ್ನು ಸ್ಪೀಕರ್ ಅಂಗೀಕಾರ ಮಾಡಿದ ನಂತರವಷ್ಟೇ ಮುಂದಿನ ಆಟ ಶುರುವಾಗುವುದು ನಿಶ್ಚಿತ.

ಸಾಧ್ಯಾಸಾಧ್ಯತೆ

1 ಕಾಂಗ್ರೆಸ್​ನ ಐದಾರು ಶಾಸಕರು ಇಂದು-ನಾಳೆ ರಾಜೀನಾಮೆ

2ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಟ್​ಗೆ ಕೈಪಡೆ

3ಬಿಜೆಪಿಗೆ 12ಕ್ಕಿಂತ ಹೆಚ್ಚು ಅತೃಪ್ತರು ಸಿಕ್ಕರೆ ತಕ್ಷಣ ಕಾರ್ಯಾಚರಣೆ

4ಬುಧವಾರ ಇಬ್ಬರು ಪಕ್ಷೇತರ ಶಾಸಕರಿಂದ ರಾಜ್ಯಪಾಲರ ಭೇಟಿ

ಆಣೆ, ಪ್ರಮಾಣ…

ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದರೂ ಬಿಜೆಪಿಯದೇ ಕೆಲ ಶಾಸಕರು ಕಾಂಗ್ರೆಸ್ ಜತೆ ಸಂಪರ್ಕದಲ್ಲಿರುವುದು ನಾಯಕರ ನಿದ್ದೆಗೆಡಿಸಿದೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು 2-3 ಶಾಸಕರಿಂದ ದೇವರ ಹೆಸರಲ್ಲಿ ಬಿಜೆಪಿ ನಾಯಕರು ಪ್ರಮಾಣ ಮಾಡಿಸಿಕೊಂಡಿದ್ದಾರೆ ಎಂದೂ ಹೇಳಲಾಗಿದೆ.

ಬಿಜೆಪಿ ನಾಯಕರ ಗುರಿ

1. ಕಾಂಗ್ರೆಸ್, ಜೆಡಿಎಸ್ ಆಪರೇಷನ್​ಗೆ ಅವಕಾಶವಾಗದಂತೆ ಪಕ್ಷದ ಶಾಸಕರನ್ನು ಕಾಯ್ದಿಟ್ಟುಕೊಳ್ಳುವುದು

2.ಸರ್ಕಾರ ಉರುಳಿಸಲು 14 ಶಾಸಕರು ಸಾಕು, ಇದಕ್ಕಿಂತ ಹೆಚ್ಚಿನ ಅತೃಪ್ತರ ಬೆಂಬಲದ ಗುರಿ.

3.ಮೊದಲ ಹಂತದಲ್ಲಿ ಐದು ಶಾಸಕರ ರಾಜೀನಾಮೆ, ಬಳಿಕ ಸಂಖ್ಯೆಯನ್ನು 14ಕ್ಕಿಂತ ಹೆಚ್ಚಿಸುವುದು

ಮೈತ್ರಿ ಲೆಕ್ಕಾಚಾರ

1.ಸರ್ಕಾರ ಅಸ್ಥಿರಗೊಳಿಸುವಷ್ಟು ಕೈ ಶಾಸಕರು ಬಿಜೆಪಿಗೆ ಸಿಕ್ಕಿಲ್ಲ.

2.ಅತೃಪ್ತರ ಸಂಖ್ಯೆ ಕನಿಷ್ಠ 14 ದಾಟದಂತೆ ಮುನ್ನೆಚ್ಚರಿಕೆ ವಹಿಸುವುದು

3.ಅತೃಪ್ತರು ರಾಜೀನಾಮೆ ಕೊಟ್ಟರೆ ತಕ್ಷಣಕ್ಕೆ ಒಪ್ಪದಂತೆ ಸ್ಪೀಕರ್ ಮೇಲೆ ಪ್ರಭಾವ ಬೀರುವುದು, ಲೋಕಸಭೆ ಚುನಾವಣೆವರೆಗೂ ವಿಳಂಬ ಮಾಡುವುದು

4.ತಕ್ಷಣವೇ ಜಂಟಿ ಅಧಿವೇಶನ ಕರೆದು ಶಾಸಕರಿಗೆ ವಿಪ್ ಜಾರಿ ಮಾಡುವ ಮೂಲಕ ಎದುರಾಳಿಗೆ ಹೆಚ್ಚು ಕಾಲಾವಕಾಶ ನೀಡದಿರುವುದು.

5.ಎಲ್ಲ ಪ್ರಯತ್ನ ವಿಫಲವಾದಲ್ಲಿ ಕೊನೆಯ ಅಸ್ತ್ರವಾಗಿ ವಿಧಾನ ಸಭೆಯನ್ನೇ ವಿಸರ್ಜಿಸುವ ಅವಕಾಶ ಮುಕ್ತವಾಗಿರಿಸಿಕೊಳ್ಳುವುದು.

ಬಿಎಸ್​ವೈ ಇಂದು ರಾಜ್ಯಕ್ಕೆ?

ಸಿದ್ಧಗಂಗಾ ಶ್ರೀಗಳ ಆನಾರೋಗ್ಯದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹಾಗೂ ಲಿಂಗಾಯತ ಸಮುದಾಯದ ಶಾಸಕರು ಬುಧವಾರ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬರಲಿದ್ದಾರೆ. ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮತ್ತೆ ದೆಹಲಿಗೆ ವಾಪಸಾಗುತ್ತಾರೆ ಎಂದೂ ಹೇಳಲಾಗಿದೆ.

ಮಾಹಿತಿ ಕೇಳಿದ ರಾಹುಲ್ ಗಾಂಧಿ

ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಹಿತಿ ಪಡೆದಿದ್ದಾರೆ. ಹೇಗಾದರೂ ಸರ್ಕಾರ ಉಳಿಯಬೇಕು, ಗರಿಷ್ಠ ಪ್ರಯತ್ನ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.