ಮೈಸೂರು : ಬಿಜೆಪಿ ದೇಶವನ್ನು ಕಾವಲು ಕಾಯುವ ಪಕ್ಷವಾಗಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಎಸ್.ಬಾಲರಾಜು ಹೇಳಿದರು.
ಲೋಕಸಭಾ ಚುನಾವಣೆ ಅಂಗವಾಗಿ ಎಚ್.ಡಿ.ಕೋಟೆ ಪಟ್ಟಣದ ಕನಕ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಅಗ್ರಗಣ್ಯ ನಾಯಕ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ದೇಶದ ಜನರು ಕನಸು ಕಟ್ಟಿಕೊಂಡಿದ್ದಾರೆ. ಕಟ್ಟಕಡೆಯ ವ್ಯಕ್ತಿಗೂ ಕೂಡ ನರೇಂದ್ರ ಮೋದಿ ಅವರು ಗೊತ್ತು. ಅವರ ಕೆಲಸ ಮನಮುಟ್ಟುವಂತೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜನಪರವಾದ ಯೋಜನೆಗಳನ್ನು ನೀಡಿದ್ದಾರೆ. ಅವುಗಳನ್ನು ಮುಂದಿಟ್ಟುಕೊಂಡು ನಾವು ಲೋಕಸಭಾ ಚುನಾವಣೆಯಲ್ಲಿ ಜನರಿಂದ ಮತ ಕೇಳಬೇಕು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಬೂತ್ ಮಟ್ಟದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಕೆಲಸ ಮಾಡಿದರೆ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಯಾವುದೇ ಸಮಸ್ಯೆ ಇಲ್ಲ. ಬೂತ್ ಸಮಿತಿಗೆ ಮಾರ್ಗದರ್ಶನ ಹಾಗೂ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.
ವ್ಯಕ್ತಿಗಿಂತ ದೇಶ ಮುಖ್ಯ, ನಾವು ಪಕ್ಷಕ್ಕಾಗಿ ಕೆಲಸ ಮಾಡಬೇಕು. ಪಕ್ಷ ದೇಶಕ್ಕಾಗಿ ಕೆಲಸ ಮಾಡುತ್ತದೆ. ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಿಂದ ಕೈಗೊಂಡಿರುವ ಅಭಿವೃದ್ಧಿಗಳನ್ನು ನೋಡಿದಾಗ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿ ಇದೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿದ ಸಂದರ್ಭದಲ್ಲಿ ಲೆಕ್ಕಕ್ಕೆ ಸಿಗದಷ್ಟು ಹಗರಣ ಮಾಡಿದೆ. ಪ್ರಜೆಗಳ ಪರವಾಗಿ ಆಡಳಿತ ನಡೆಸುವುದೇ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವದ ತಾಂತ್ರಿಕ ಭಾಗ ಮತದಾನ. ಆಡಳಿತ ವ್ಯವಸ್ಥೆಯನ್ನು ತಯಾರಿ ಮಾಡಿಕೊಳ್ಳುವುದು. ಜನರಿಗಾಗಿ ಆಡಳಿತ ನಡೆಸಬೇಕು ಎಂಬುದು ಮತದಾನದ ಉದ್ದೇಶವಾಗಿದೆ ಎಂದರು.
ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹಾದೇವಸ್ವಾಮಿ, ಚಾಮರಾಜನಗರ ಜಿಲ್ಲಾ ಅಧ್ಯಕ್ಷ ನಿರಂಜನ ಕುಮಾರ್, ಪ್ರೊ.ಮಲ್ಲಿಕಾರ್ಜುನಪ್ಪ, ಫಣೀಶ್, ತಾಲೂಕು ಅಧ್ಯಕ್ಷರಾದ ಶಂಭುಗೌಡ, ಗುರುಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಎಚ್.ಸಿ.ಲಕ್ಷ್ಮಣ್, ರಮೇಶ್ ಕುಮಾರ್, ಶಿವರಾಜಪ್ಪ, ಸಿ.ಕೆ.ಗಿರೀಶ್, ವೆಂಕಟಸ್ವಾಮಿ, ಮೊತ್ತ ಬಸವರಾಜಪ್ಪ, ವಿನಯ್, ಯೋಗೇಶ್, ನಟರಾಜು, ಮನುಗನಹಳ್ಳಿ ಮಂಜು, ಟೌನ್ ಅಧ್ಯಕ್ಷ ನಂದೀಶ್, ವಕೀಲ ನಾಗೇಶ್, ಮಲ್ಲಿಕಾರ್ಜುನ, ವೆಂಕಟೇಶ್, ಸೋಮಚಾರ್, ಹರೀಶ್, ಬಿಡಗಲು ರಾಜು ಇದ್ದರು.