ಬಿಜೆಪಿಗೆ ನಗರದ ಮೂರು ಕ್ಷೇತ್ರಗಳದ್ದೇ ಚಿಂತೆ: ಒಕ್ಕಲಿಗರ ಮತಗಳು ಎತ್ತ ಹೋಗಿವೆ ಎಂಬ ಕೌತುಕ

ಬೆಂಗಳೂರು: ರಾಜ್ಯದಲ್ಲಿ 22 ಸ್ಥಾನಗಳನ್ನು ಜಯಿಸುವ ಗುರಿಗೆ ಅನುಗುಣವಾಗಿ ಮೊದಲ ಹಂತದಲ್ಲಿ ಚುನಾವಣೆ ನಡೆದ 14ರಲ್ಲಿ ಕನಿಷ್ಠ 10 ತಮ್ಮದಾಗುತ್ತದೆ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ಪ್ರಮುಖವಾಗಿ ಮೂರು ಕ್ಷೇತ್ರಗಳ ಕುರಿತು ಆತಂಕವಿದೆ.

ಒಕ್ಕಲಿಗ ಮತಗಳೇ ನಿರ್ಣಾಯಕವಾಗಿರುವ ಮೈಸೂರು- ಕೊಡಗು, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಆ ಸಮುದಾಯ ತಮ್ಮ ಪರ ವಾಲಿದೆಯೇ ಅಥವಾ ಮೈತ್ರಿ ಪರ ಹೊರಳಿದೆಯೇ ಎಂಬ ಸ್ಪಷ್ಟ ಲೆಕ್ಕ ಸಿಗುತ್ತಿಲ್ಲ.

ಚುನಾವಣೆ ಸಮಯದಲ್ಲಿ ನಿರಂತರ ನಡೆದ ಐಟಿ ದಾಳಿಗಳನ್ನು ಜೆಡಿಎಸ್ ಪಕ್ಷವನ್ನೇ ಗುರಿಯಾಗಿಸಿ ನಡೆಸಲಾಗಿದೆ ಎಂಬ ಭಾವನೆ ಜತೆಗೆ ಎಚ್.ಡಿ. ದೇವೇಗೌಡ, ಸಿಎಂ ಕುಮಾರಸ್ವಾಮಿ ಜತೆಗೆ ಎಚ್.ಡಿ. ರೇವಣ್ಣ ಅವರನ್ನೂ ಬಿಡದೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವಾಗ್ದಾಳಿ ಪರಿಣಾಮ ಬೀರಿದೆ ಎಂಬ ಅನುಮಾನವಿದೆ. ಸ್ಥಳೀಯ ಬಿಜೆಪಿ ನಾಯಕರು ಪದೇಪದೆ ಫಲಿತಾಂಶದ ನಂತರ ಸಮ್ಮಿಶ್ರ ಸರ್ಕಾರ ಉಳಿಯಲ್ಲ ಎಂಬ ಮಾತು ಹೇಳುತ್ತಿರುವುದು ಅಥವಾ ಮೋದಿ ಅಲೆಯಲ್ಲಿ ಇದೆಲ್ಲ ಅಂಶ ಗೌಣವಾಗಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ಒಕ್ಕಲಿಗ ಮತಗಳೇ ನಿರ್ಣಾಯಕ: ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಗೆಲ್ಲಲು ಜೆಡಿಎಸ್ ಬೆಂಬಲ ಅದರಲ್ಲೂ ಒಕ್ಕಲಿಗ ಸಮುದಾಯಗಳು ಜತೆಗಿದ್ದದ್ದು ಕಾರಣ. ಈ ಬಾರಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಲಭಿಸಿದ್ದರೆ ಸ್ಪರ್ಧೆ ತೀವ್ರವಾಗಿರುತ್ತಿತ್ತು, ಕಾಂಗ್ರೆಸ್​ಗೆ ಲಭಿಸಿರುವ ಕಾರಣ ಜೆಡಿಎಸ್ ಮತಗಳು ಸಂಪೂರ್ಣವಾಗಿ ಬಿಜೆಪಿಗೆ ಲಭಿಸಿ ‘ಕೇಕ್ ವಾಕ್’ ಆಗುತ್ತದೆ ಎಂದು ಪ್ರಾರಂಭದಲ್ಲಿ ನಂಬಲಾಗಿತ್ತು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ಪರಿಗಣಿಸಿ ಒಕ್ಕಲಿಗ ಸಮುದಾಯದ ಮತಗಳನ್ನು ತಮ್ಮ ಕಡೆ ತಿರುಗಿಸಲು ಕೊನೆ ಕ್ಷಣದವರೆಗೆ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಪ್ರಬಲವಾಗಿರುವ ಪಿರಿಯಾಪಟ್ಟಣ, ಹುಣಸೂರು, ನರಸಿಂಹರಾಜದಂತಹ ಕ್ಷೇತ್ರದಲ್ಲಿ ಹೆಚ್ಚಿನ ಮತದಾನವಾಗಿದ್ದು, ಬಿಜೆಪಿ ಪ್ರಾಬಲ್ಯದ ಚಾಮರಾಜ ಹಾಗೂ ಕೃಷ್ಣರಾಜದಲ್ಲಿ ತುಸು ಕಡಿಮೆ ಪ್ರಮಾಣವಾಗಿದೆ.

ಬೆಂಗಳೂರು ದಕ್ಷಿಣದಲ್ಲಿ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಸಿದ್ದ ಬಿಜೆಪಿಗೆ ಅಲ್ಲಿನ ಒಕ್ಕಲಿಗ ಸಮುದಾಯ ಎತ್ತ ಕಡೆ ವಾಲಿದೆ ಎಂಬುದೇ ಕುತೂಹಲ ಮೂಡಿಸಿದೆ. ತಮ್ಮ ವಿರುದ್ಧ ಒಕ್ಕಲಿಗ ಅಭ್ಯರ್ಥಿ ಸ್ಪರ್ಧಿಸಿದಾಗಲೂ ಒಕ್ಕಲಿಗ ಮತಗಳನ್ನು ಪಡೆಯುತ್ತಿದ್ದ ಅನಂತಕುಮಾರ್ ಇದೀಗ ಇಲ್ಲ. ಆ ಮತಗಳು ಕಾಂಗ್ರೆಸ್​ಗೆ ವಿಭಜನೆಯಾಗಿವೆ ಎಂಬುದು ಕಾಣುತ್ತಿದ್ದರೂ ಅದರ ಪ್ರಮಾಣವೆಷ್ಟು ಎಂಬ ಅಂದಾಜು ಬಿಜೆಪಿಗೆ ಸಿಗುತ್ತಿಲ್ಲ.

ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರ ವಿರುದ್ಧ ಕೃಷ್ಣಭೈರೇಗೌಡ ಸ್ಪರ್ಧಿಸಿದ್ದು, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಬ್ಯಾಟರಾಯನಪುರ, ಹೆಬ್ಬಾಳ, ದಾಸರಹಳ್ಳಿಯಂತಹ ಒಕ್ಕಲಿಗ ಪ್ರಾಬಲ್ಯ ಕ್ಷೇತ್ರಗಳಲ್ಲಿ ಯಾವ ‘ಗೌಡ’ರ ಪರ ಒಲವು ತೋರಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ತಮ್ಮನ್ನು ಟಾರ್ಗೆಟ್ ಮಾಡಿಯೇ ಐಟಿ ದಾಳಿಗಳನ್ನು ನಡೆಸಲಾಗಿದೆ ಎಂಬ ಸಂದೇಶವನ್ನು ಜೆಡಿಎಸ್ ಬಹಿರಂಗ ವಾಗಿಯೇ ರವಾನಿಸಿದೆ. ತಮ್ಮ ಸಮುದಾಯವನ್ನೇ ಟಾರ್ಗೆಟ್ ಮಾಡಲಾಗಿದೆ ಎಂದು ಅಂತರಂಗದಲ್ಲಿ ಸಂದೇಶ ರವಾನಿಸಲಾಗಿದೆ. ನಗರ ಪ್ರದೇಶ ಹೆಚ್ಚಿರುವ ಬೆಂಗಳೂರು ದಕ್ಷಿಣದಲ್ಲಿ ಇದರ ಪ್ರಭಾವ ಕಡಿಮೆಯಿರಬಹುದು. ಆದರೆ ಉತ್ತರ ಹಾಗೂ ಮೈಸೂರಿನಂಥ ಅರೆ ನಗರ, ಗ್ರಾಮೀಣ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಅಭಿಪ್ರಾಯ ರೂಪುಗೊಂಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ವಾಗ್ದಾಳಿ ನಡೆಸಿದ್ದ ಮೋದಿ

ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರ ಕುರಿತು ಮೃದು ಧೋರಣೆ ತಳೆದಿದ್ದ ಪ್ರಧಾನಿ ಮೋದಿ ಈ ಬಾರಿ ಯದ್ವಾತದ್ವಾ ವಾಗ್ದಾಳಿ ನಡೆಸಿದ್ದಾರೆ. ದೇವೇಗೌಡರ ಕುಟುಂಬ ರಾಜಕಾರಣ, ಸಿಎಂ ಕುಮಾರಸ್ವಾಮಿ ಕಣ್ಣೀರನ್ನು ಹೀಗಳೆದಿದ್ದಾರೆ. ಸಿಎಂ ವಿರುದ್ಧ ಪದೇಪದೆ ವಾಗ್ದಾಳಿ ನಡೆಸುವುದರ ಜತೆಗೆ ರೇವಣ್ಣ ಅವರ ‘ರಾಜಕೀಯ ಸನ್ಯಾಸ’ ಹೇಳಿಕೆಯನ್ನೂ ಟೀಕಿಸಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ಈ ವಿಚಾರವೂ ಚರ್ಚೆಯಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಆಯ್ಕೆ ವೇಳೆ ಈ ವಿಚಾರವೂ ಪ್ರಭಾವ ಬೀರಿರುವ ಸಾಧ್ಯತೆಯಿದೆ ಎಂದು ರಾಜ್ಯ ಪದಾಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಟರಾಯನಪುರಕ್ಕೆ ಅಭ್ಯರ್ಥಿ ಚರ್ಚೆ?

ಚುನಾವಣೆ ಮುಗಿದ ಕ್ಷಣದಿಂದಲೇ ಬ್ಯಾಟರಾಯನಪುರ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ. ಸದ್ಯ ಬ್ಯಾಟರಾಯನಪುರ ಕ್ಷೇತ್ರವನ್ನು ಕೃಷ್ಣಭೈರೇಗೌಡ ಪ್ರತಿನಿಧಿಸುತ್ತಿದ್ದಾರೆ. ಉತ್ತರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರಷ್ಟೇ ಈ ಕ್ಷೇತ್ರ ತೆರವಾಗುತ್ತದೆ. ಕ್ಷೇತ್ರದಿಂದ ಮಾಜಿ ಡಿಸಿಎಂ ಅಶೋಕ್ ಪುತ್ರ ಶರತ್ ಕಣಕ್ಕಿಳಿಯುತ್ತಾರಂತೆ ಎಂಬ ಚರ್ಚೆ ಈಗಾಗಲೆ ಶುರುವಾಗಿದೆ.

| ರಮೇಶ್​ ದೊಡ್ಡಾಪುರ