More

  ಎಲ್ಲರೂ ನಗುತ್ತ ಬಾಳಬೇಕಣ್ಣ ಎನ್ನುವ ಬಿಜೆಪಿ ನಾಗಣ್ಣ

  ನೆಲಮಂಗಲ, ಮಾದಾವರ, ಮಾದನಾಯಕನಹಳ್ಳಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಕಳೆದ 30 ವರ್ಷಗಳಿಂದಲೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಜಿ.ಎಚ್. ನಾಗರಾಜು ಅವರು ಆ ಭಾಗದಲ್ಲಿ ಪ್ರತಿಯೊಬ್ಬರಿಗೂ ಚಿರಪರಿಚಿತರಾಗಿದ್ದಾರೆ. ತಮ್ಮ ವಿನಯಶೀಲತೆ, ಜನರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣದಿಂದಾಗಿ ಇವರು ಸ್ಥಳೀಯರಿಂದ ನಾಗಣ್ಣ ಎಂದೇ ಗುರುತಿಸಿಕೊಂಡಿದ್ದಾರೆ. ಕೃಷಿಯ ಜತೆ ಜತೆಗೆ ಜನೋಪಕಾರಿ ಕಾರ್ಯಗಳಲ್ಲಿ ಭಾಗಿಯಾಗುವ ಇವರ ಸೇವೆಯನ್ನು ಪರಿಗಣಿಸಿ ‘ವಿಜಯವಾಣಿ’ ಪತ್ರಿಕೆಯ ಪ್ರತಿಷ್ಠಿತ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಲಾಗಿದೆ.

  ವಿಜಯವಾಣಿ ಸುದ್ದಿಜಾಲ ಬೆಂಗಳೂರು

  ಪ್ರಚಾರ ಬಯಸದೆ ಎಲೆಮರೆ ಕಾಯಿಯಂತಿದ್ದುಕೊಂಡೇ ಜನರ ಕಷ್ಟ- ಸುಖಗಳಿಗೆ ಸ್ಪಂದಿಸುತ್ತ ಜನಮನ್ನಣೆ ಗಳಿಸಿರುವ ಜಿ.ಎಚ್. ನಾಗರಾಜು ಅವರು ಸದಾ ಜನರ ಮಧ್ಯೆಯೇ ಇರುವ ಜನನಾಯಕರಾಗಿದ್ದಾರೆ. 1995ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ ಅವಧಿಯಿಂದ ಈವರೆಗೆ ಪಕ್ಷದಲ್ಲಿ ತೊಡಗಿಸಿಕೊಂಡಿರುವ ಇವರ ಪ್ರಾಮಾಣಿಕತೆಯನ್ನು ಪರಿಗಣಿಸಿ ಜನರು ‘ಬಿಜೆಪಿ ನಾಗಣ್ಣ’ ಎಂದೇ ಗುರುತಿಸುತ್ತಾರೆ. ಅಷ್ಟರಮಟ್ಟಿಗೆ ಇವರು ಜನರೊಂದಿಗೆ ಬೆರೆತುಹೋಗಿದ್ದಾರೆ.

  ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜನರ ಮನೆ ಬಾಗಿಲಿಗೆ ಆಹಾರ ಪೊಟ್ಟಣ, ಔಷಧ, ಮೃತಪಟ್ಟವರ ಅಂತ್ಯಸಂಸ್ಕಾರ, ನೋವಿನಲ್ಲಿರುವ ಕುಟುಂಬಗಳಿಗೆ ಸಾಂತ್ವನ ಹೇಳುವ ಜತೆಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತ ಜನಸೇವೆಯಲ್ಲಿ ತೊಡಿಸಿಕೊಂಡಿದ್ದಾರೆ.

  rathna 1

  ಗಂಗೊಂಡಹಳ್ಳಿ ಗ್ರಾಮದಲ್ಲಿ ಲೇಟ್ ಹನುಮಂತಯ್ಯ ಮತ್ತು ಲಕ್ಷ್ಮಮ್ಮ ದಂಪತಿಯ ನಾಲ್ವರು ಮಕ್ಕಳಲ್ಲಿ ನಾಗರಾಜು ಕೂಡ ಒಬ್ಬರು. ಬಡ ರೈತ ಕುಟುಂಬದಲ್ಲಿ ಜನಿಸಿದ ಅವರು, ಮನೆತನದ ಮೂಲ ಕಸುಬಾಗಿದ್ದ ವ್ಯವಸಾಯವನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಇಂದಿಗೂ ತಮ್ಮ ನಿತ್ಯದ ದಿನಚರಿ ಆರಂಭಿಸುವುದು ಕೃಷಿ ಚಟುವಟಿಕೆಯಿಂದ ಎಂಬುದು ವಿಶೇಷ. ಬೆಳಗ್ಗೆ ಎದ್ದ ಕೂಡಲೇ ಮನೆಯ ಸುತ್ತಲಿನ ಕೈತೋಟಕ್ಕೆ ಹೋಗಿ ಹಣ್ಣು- ತರಕಾರಿ ಗಿಡಗಳಿಗೆ ನೀರು ಹಾಯಿಸುವುದು, ಕಳೆ ತೆಗೆದಾಗಲೇ ನೆಮ್ಮದಿಯ ದಿನ ಆರಂಭವಾಗುತ್ತದೆ ಎಂಬುದು ನಾಗರಾಜು ಅವರ ಬಲವಾದ ನಂಬಿಕೆ. ವ್ಯವಸಾಯದ ಜತೆಗೆ ಅಡಕೆ ಮತ್ತು ವೀಳ್ಯದೆಲೆಯನ್ನು ವರ್ತನೆಗೆ (ಪ್ರತಿದಿನ ಮನೆ ಮನೆಗೆ ಅಥವಾ ಅಂಗಡಿಗೆ ನೀಡುವುದು) ಹಾಕುವುದು. ಮನೆತನದಿಂದ ನಡೆದುಕೊಂದ ಬಂದ ಕುಲಕಸುಬು. ಇದನ್ನು ಕೂಡ ಸ್ವಲ್ಪ ಮಟ್ಟಿಗೆ ನಡೆಸುತ್ತಿದ್ದಾರೆ. ಕೃಷಿ ಕುಟುಂಬದಿಂದ ಬಂದ ನಾಗರಾಜು, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಛಲ ಹೊತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

  ಓದಿದ್ದು ಎಸ್ಸೆಸ್ಸೆಲ್ಸಿ, ಬೇಸಾಯವೇ ಆಸಕ್ತಿ: ನಾಗರಾಜು ಅವರ ವಿದ್ಯಾಭ್ಯಾಸವು ಹತ್ತನೇ ತರಗತಿಗೆ ಮೊಟಕುಗೊಂಡಿತು. 1983ರಲ್ಲಿ ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಅವರು, ಬಳಿಕ ತಮ್ಮ ಜಮೀನು ಅಕ್ಕಪಕ್ಕದಲ್ಲಿದ್ದ ಇತರ ಜಮೀನುಗಳನ್ನು ಭೋಗ್ಯಕ್ಕೆ ತೆಗೆದುಕೊಂಡು ಬೇಸಾಯ ಮಾಡಲು ಶುರು ಮಾಡಿದರು. ತರಕಾರಿ ಬೆಳೆಗಳಾದ ಟೊಮ್ಯಾಟೋ, ಹುರುಳಿಕಾಯಿ, ಮೂಲಂಗಿ, ಕ್ಯಾರೆಟ್, ಗೆಡ್ಡೆಕೋಸು, ಕೊತ್ತಂಬರಿ, ಕರಿಬೇವು, ಪುದಿನ, ದಂಟು ಹೀಗೆ ಹತ್ತಾರು ರೀತಿಯ ಸೊಪು್ಪಗಳನ್ನು ಬೆಳೆದು ಮಾರುಕಟ್ಟೆಗೆ ಹಾಕುವುದನ್ನೇ ಕಾಯಕವನ್ನಾಗಿಸಿಕೊಂಡರು. ಹುಟ್ಟಿನಿಂದಲೇ ಬಳುವಳಿಯಾಗಿ ಬಂದಂತಹ ವ್ಯವಸಾಯವನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

  rathna 3

  ನಗರಸಭೆ ಟಿಕೆಟ್ ಆಕಾಂಕ್ಷಿ: ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಾದನಾಯಕನಹಳ್ಳಿ ನಗರಸಭೆಗೆ ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ನಾಗರಾಜು ಪ್ರಮುಖರಾಗಿದ್ದಾರೆ. ಪುರಸಭೆಯಾಗಿದ್ದ ಮಾದನಾಯಕನಹಳ್ಳಿಯನ್ನು ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ, ನಗರಸಭೆಯಾಗಿ ಘೋಷಿಸಿದ್ದರು. ಕಳೆದ 30 ವರ್ಷಗಳಿಂದಲೂ ರಾಜಕೀಯ ಕ್ಷೇತ್ರದಲ್ಲಿ ತೊಡಿಗಿಸಿಕೊಂಡಿರುವುದರಿಂದ ಪಕ್ಷವು ಒಪ್ಪಿದರೆ ಹಾಗೂ ಮೀಸಲು ಕ್ಷೇತ್ರವಾಗಿ ಅವಕಾಶ ಸಿಕ್ಕರೆ ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ.

  ಜನಸಂಘರ್ಷ ಯಾತ್ರೆ ಸಂಘಟಿಸಿದ ತೃಪ್ತಿ: ನಾಗರಾಜು ಅವರು ತಾಲೂಕು ಅಧ್ಯಕ್ಷರಾಗಿದ್ದ ವೇಳೆಯೇ ನೆಲಮಂಗಲದಲ್ಲಿ ಮೊದಲ ಬಾರಿಗೆ ಬಿಜೆಪಿ ತಾಲೂಕು ಕಚೇರಿಯನ್ನು ಸ್ಥಾಪಿಸಲಾಯಿತು. ಇದೇ ವೇಳೆ ಪಕ್ಷದ ವತಿಯಿಂದ ನಡೆಯುತ್ತಿದ್ದ ‘ಜನಸಂಘರ್ಷ ಯಾತ್ರೆ’ಯನ್ನು ಯಶಸ್ವಿಯಾಗಿ ಸಂಘಟಿಸಿದ ಖುಷಿ ಅವರದು. ಯಾತ್ರೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್, ಎಲ್.ಕೆ. ಆಡ್ವಾಣಿ ಆದಿಯಾಗಿ ಪಕ್ಷದ ನಾಯಕರು ಪಾಲ್ಗೊಂಡಿದ್ದರು. ಆದರೆ, ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ದಾಸನಪುರ ಹೋಬಳಿಯನ್ನು ನೆಲಮಂಗಲದಿಂದ ತೆಗೆದು ಯಲಹಂಕ ಕ್ಷೇತ್ರಕ್ಕೆ ಸೇರ್ಪಡೆಯಾಯಿತು. ಈಗ ಯಲಹಂಕ ಕ್ಷೇತ್ರದಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ ಎನ್ನುತ್ತಾರೆ ನಾಗರಾಜು.

  ಗ್ರಾಮಗಳ ಅಭಿವೃದ್ಧಿಗೆ ಶಾಸಕರ ಆದ್ಯತೆ: ಎಸ್.ಆರ್. ವಿಶ್ವನಾಥ್ ಅವರು 2008ರಿಂದ ಯಲಹಂಕ ಕ್ಷೇತ್ರದ ಶಾಸಕರಾಗಿದ್ದಾರೆ. ವಿಶ್ವನಾಥ್ ಅವರು ಶಾಸಕರಾಗಿ ಕ್ಷೇತ್ರದಲ್ಲಿನ ರಸ್ತೆಗಳ ಅಭಿವೃದ್ಧಿ ಸೇರಿ ಒಟ್ಟಾರೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಗ್ರಾಮೀಣ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವ ಬೆಂಗಳೂರು ಕ್ಷೇತ್ರದ ಶಾಸಕರಲ್ಲಿ ಮೊದಲಿಗರೆನಿಸಿದ್ದಾರೆ. ಇದರಿಂದ ದಾಸನಪುರ ಸುತ್ತಲಿನ ಗ್ರಾಮಗಳಲ್ಲಿ ಜಮೀನುಗಳ ಬೆಲೆ ಹೆಚ್ಚಳವಾಗಿದೆ. ಕ್ಷೇತ್ರದ ಜನರಿಗೆ ಬಹಳ ಸುಲಭವಾಗಿ ಸಿಗುವ ಶಾಸಕರಾಗಿದ್ದಾರೆ ಎಂದು ನಾಗರಾಜು ಸಂತಸ ವ್ಯಕ್ತಪಡಿಸಿದರು.

  rathna

  ಜನೋಪಕಾರಿ ಕೆಲಸಗಳಿಂದ ರಾಜಕೀಯ ಪ್ರವೇಶ: ಗ್ರಾಮದಲ್ಲಿ ವ್ಯವಸಾಯದ ಜತೆಗೆ ಊರಿನ ಕೆರೆಗಳು, ಸ್ಮಶಾನ, ಗೋಮಾಳ ಸಂರಕ್ಷಿಸುವುದು ನನ್ನ ಹವ್ಯಾಸವಾಗಿತ್ತು. ಸ್ಥಳೀಯವಾಗಿ ಗ್ರಾಮದ ಜನರ ಕಷ್ಟ- ಸುಖಗಳಿಗೆ ಕಿವಿಯಾಗುವುದು, ಕೈಲಾದ ಸಹಾಯ ಮಾಡುವುದು, ಯುವಕರನ್ನು ಒಗ್ಗೂಡಿಸಿ ಊರಿನ ಜನರ ಸೇವೆ ಮಾಡುವುದನ್ನು ಆರಂಭದಿಂದಲೂ ಅಳವಡಿಸಿಕೊಂಡಿದ್ದೇನೆ. ಪ್ರಾಯಶಃ ಇಂತಹ ಜನೋಪಕಾರಿ ಕೆಲಸಗಳು ರಾಜಕೀಯ ಕ್ಷೇತ್ರ ಪ್ರವೇಶಿಸಲು ಪ್ರೇರಣೆಯಾಯಿತು ಎನ್ನುತ್ತಾರೆ ನಾಗರಾಜು. ಈ ಎಲ್ಲ ಕೆಲಸಗಳನ್ನು ನೋಡಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡರಾದ ಮಾಚೋಹಳ್ಳಿ ರಾಜಣ್ಣ, ಡಿಪೋ ಚಂದ್ರಣ್ಣ, ಬೈಯಂಡಹಳ್ಳಿ ಮಂಜಣ್ಣ (ವಕೀಲರು) ಅವರು ರಾಜಕೀಯ ಪ್ರವೇಶಿಸುವಂತೆ ಸಲಹೆ ನೀಡಿದರು. ಅವರ ಇಚ್ಛೆಯಂತೆ 1995ರಲ್ಲಿ ಮಾದಾವರ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು 1994ರಲ್ಲಿ ತಾಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದೆ. ಆದರೆ, ಎರಡನೇ ಬಾರಿಗೆ ನಿಂತು ಗೆಲುವು ಸಾಧಿಸುವ ಮೂಲಕ ನಮ್ಮ ಜನಸೇವೆ ಅಧಿಕೃತವಾಯಿತು.

  ತಿಗಳ ಸಮುದಾಯಕ್ಕೆ ಸ್ಥಾನಮಾನ ಕಲ್ಪಿಸಿ: ಹೆಸರುಘಟ್ಟ ಮತ್ತು ದಾಸನಪುರ ಹೋಬಳಿಯಲ್ಲಿದ್ದ ತಿಗಳ ಸಮುದಾಯವನ್ನು ಒಗ್ಗೂಡಿಸಿ ಸಮುದಾಯಕ್ಕೆ ಕಾಯಕಲ್ಪ ನೀಡಲು ಹೋರಾಟ ನಡೆಸುತ್ತಿದ್ದೇನೆ. ಈ ಹಿಂದೆ ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಸಮಾವೇಶ ನಡೆಸಿದ್ದೆವು. ಈ ವೇಳೆ ಶಾಸಕರು ಕೊಟ್ಟ ಭರವಸೆಯಂತೆ ಹೆಸರುಘಟ್ಟದಲ್ಲಿ ತಿಗಳರ ಸಮುದಾಯಕ್ಕೆ 2 ಎಕರೆ ಜಾಗ ನೀಡಿದ್ದಾರೆ. ಇದರಿಂದ ಸಮುದಾಯ ಭವನ ನಿರ್ವಿುಸಿಕೊಳ್ಳಲು ಸಹಾಯವಾಗಿದೆ. ಸಮುದಾಯವು ಆರ್ಥಿಕವಾಗಿ ಸದೃಢರಾಗಿಲ್ಲ. ಆದ್ದರಿಂದ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಇದಕ್ಕಾಗಿ ಸಾಕಷ್ಟು ಹೋರಾಟ ಮಾಡುತ್ತಿದ್ದೇವೆ.

  ಎಲ್ಲರೂ ನಗುತ್ತ ಬಾಳಬೇಕಣ್ಣ ಎನ್ನುವ ಬಿಜೆಪಿ ನಾಗಣ್ಣ

  ಸೈಕಲ್​ನಲ್ಲಿಯೇ ಊರೂರು ಸುತ್ತಿ ಪ್ರಚಾರ: 1995ರಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಹೆಸರು ಇರಲಿಲ್ಲ. ಆಗಷ್ಟೇ ಪಕ್ಷ ಪ್ರವರ್ಧಮಾನಕ್ಕೆ ಬರುತ್ತಿತ್ತು. ಅಂತಹ ಸಂದರ್ಭದಲ್ಲಿ ನನ್ನನ್ನು ದಾಸನಪುರ ಹೋಬಳಿ ಯುವ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಹೋಬಳಿ ಮಟ್ಟದಲ್ಲಿ ಸಂಘಟನೆ ಮಾಡಲು ಪಕ್ಷದಲ್ಲಿ ಯಾವುದೇ ವಾಹನ ಸೌಲಭ್ಯಗಳು ಇರಲಿಲ್ಲ. ಹಳ್ಳಿ ಹಳ್ಳಿಗೆ ಸೈಕಲ್​ನಲ್ಲಿಯೇ ಸಾಗಿ ಪಕ್ಷವನ್ನು ಸಂಘಟನೆ ಮಾಡಿದೆವು. ಸಮಾವೇಶ, ಹೋರಾಟದ ಕಾರ್ಯಕ್ರಮಗಳಿಗೆ ಬ್ಯಾನರ್​ಗಳನ್ನು ಕಟ್ಟಿ ಪಕ್ಷದ ಪರ ಪ್ರಚಾರ ಮಾಡಿದೆವು. ಜನತಾದಳ ಮತ್ತು ಕಾಂಗ್ರೆಸ್ ಪ್ರಾಬಲ್ಯವಿದ್ದ ಈ ಭಾಗದಲ್ಲಿ 1995ರಲ್ಲಿ ಮಾದಾವರ ಗ್ರಾಪಂನ 38 ಸದಸ್ಯರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದು ನಾನೊಬ್ಬನೇ. ಜನರಿಗೆ ಪಕ್ಷ ಹೊಸತಾಗಿದ್ದರೂ ನಾನು ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದ ಕಾರಣ ನಮ್ಮನ್ನು ಗೆಲವಿನ ದಡ ಮುಟ್ಟಿಸಿ ದ್ದರು. ಇದಾದ ಬಳಿಕ 2000ರಲ್ಲಿ 2ನೇ ಬಾರಿಗೆ ಗ್ರಾಪಂ ಸದಸ್ಯರಾಗಿ ನಮ್ಮನ್ನು ಆಯ್ಕೆ ಮಾಡಿ ಜನಸೇವೆ ಮಾಡಲು ಮತದಾರರು ಅವಕಾಶ ಮಾಡಿಕೊಟ್ಟರು.

  ಬಡವರಿಗೆ ಸೂರು ಕರುಣಿಸಿದರು…: ಬಿ.ಎಸ್.ಯಡಿಯೂರಪ್ಪ ಅವರು 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಪಕ್ಷ ಸಂಘಟನೆಗೆ ಸಿಕ್ಕ ಪ್ರತಿಫಲವಾಗಿ ಆಶ್ರಯ ಸಮಿತಿ ಸದಸ್ಯನನ್ನಾಗಿ ನೇಮಿಸಲಾಗಿತ್ತು. ರಾಜ್ಯದಲ್ಲಿ ಪಕ್ಷವು ಮೊದಲ ಬಾರಿಗೆ ಅಧಿಕಾರಿಕ್ಕೆ ಬಂದಿದ್ದ ಕಾರಣ ಹಗಲಿರುಳು ಶ್ರಮಿಸಿ ಪಕ್ಷಕ್ಕಾಗಿ ಕಾರ್ಯನಿರ್ವಹಿಸಿದೆವು. ಗ್ರಾಪಂ, ತಾಪಂನಿಂದ ಹಿಡಿದು ಕಂದಾಯ ಇಲಾಖೆವರೆಗೆ ಗ್ರಾಮ ಲೆಕ್ಕಿಗ, ಸರ್ವೆಯರ್​ಗಳನ್ನು ಹಿಡಿದು ಕೆಲಸ ಮಾಡಿಸಲಾಯಿತು. ನಮ್ಮ ತಾಲೂಕಿನಲ್ಲಿದ್ದ ಗೋಮಾಳ, ಪಾಳು ಬಿದ್ದ ಭೂಮಿ ಸೇರಿ ಹಲವೆಡೆ ಜನರಿಗೆ ನಿವೇಶನ ಕೊಡಿಸುವ ಕೆಲಸ ಮಾಡಿದೆವು. ಆಶ್ರಯ ಯೋಜನೆಯಲ್ಲಿ ಗ್ರಾಪಂನಿಂದ ಅನುಮೋದನೆ ಪಡೆದು 10-12 ಸಾವಿರ ಜನರಿಗೆ ನಿವೇಶನ ಕೊಡಿಸಲಾಯಿತು. ರಾಜೀವ್ ಗಾಂಧಿ ವಸತಿ ನಿಗಮದಿಂದ 7-8 ಸಾವಿರ ಜನರಿಗೆ ಮನೆಗಳ ವಿತರಣೆ ಮಾಡಿಸಿದೆ. ಬಡವರು, ನಿರ್ಗತಿಕರಿಗೆ ಮನೆ, ನಿವೇಶನ ಕೊಡಿಸಿದ ಕಾರ್ಯವನ್ನು ಜನರು ಇಂದಿಗೂ ನೆನಸಿಕೊಳ್ಳುತ್ತಾರೆ. ಎದುರು ಸಿಕ್ಕಾಗ ಗೌರವ ಕೊಡುತ್ತಾರೆ. ಇದಕ್ಕಿಂತ ಖುಷಿಯ ವಿಚಾರ ಇನ್ನೇನಿದೆ ಎಂದು ಹಸನ್ಮುಖಿಯಾಗುತ್ತಾರೆ ನಾಗರಾಜು.

  ಕರೊನಾ ವೇಳೆ ಜನರಿಗೆ ಸಹಾಯಹಸ್ತ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕರೊನಾ ಸಮಯದಲ್ಲಿ ಗ್ರಾಮದ ಜನರಿಗೆ ಕೈಲಾದ ಸಹಾಯ ಮಾಡಿದ್ದೇವೆ. ಶಾಸಕರ ಸಹಕಾರದಿಂದ ಸಹಾಯದ ನಿರೀಕ್ಷೆಯಲ್ಲಿದ್ದವರಿಗೆ ಆಹಾರದ ಕಿಟ್, ಔಷಧ, ಅಂತ್ಯಸಂಸ್ಕಾರ, ಮನೆಯವರನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.

  ಎಲ್ಲರೂ ನಗುತ್ತ ಬಾಳಬೇಕಣ್ಣ ಎನ್ನುವ ಬಿಜೆಪಿ ನಾಗಣ್ಣ

  ಟಿ.ಜಿ. ಡ್ಯಾಂ ಸಂರಕ್ಷಣೆಗೆ ಪಣ: ಬೆಂಗಳೂರು ನಗರಕ್ಕೆ ನೀರು ಒದಗಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯವು ದಿನದಿಂದ ದಿನಕ್ಕೆ ಮಲಿನಗೊಳ್ಳುತ್ತಿದೆ. ಜಲಾಶಯದಲ್ಲಿರುವ ನೀರು ಶುದ್ಧಿಗೊಳಿಸಬೇಕು ಮತ್ತು ಅದನ್ನು ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಕಾಚೋಹಳ್ಳಿ, ಮಾಚೋಹಳ್ಳಿ, ಗಂಗೊಂಡಹಳ್ಳಿ ಕೆರೆಗಳ ನೀರನ್ನು ಶುದ್ಧೀಕರಿಸಲು ಗ್ರಾಪಂಗಳು ನಿರ್ಣಯಿಸಿದ್ದೇವೆ. ಇಲ್ಲಿನ ಕೆರೆಗಳ ನೀರೇ ಜಲಾಶಯ ಸೇರುತ್ತಿದೆ. ಈ ಕೆರೆಗಳು ಸ್ವಚ್ಛವಾದರೆ, ಜಲಾಶಯ ಕೂಡ ಸ್ವಚ್ಛವಾಗಲಿದೆ. ಇಲ್ಲಿನ ಮೋರಿ ನೀರನ್ನು ತಿಪ್ಪಗೊಂಡನಹಳ್ಳಿ ದಾಟಿಸಿ ಹರಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​ಪಿಸಿಬಿ) ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಕೆರೆ ಸಂರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಕೊಳಚೆ ನೀರು ಸಂಸ್ಕರಣಾ ಘಟಕವನ್ನು (ಎಸ್​ಟಿಪಿ) ನಿರ್ವಿುಸಲಾಗುತ್ತಿದ್ದು, ಅದು ಕಾರ್ಯಾರಂಭಿಸಿದರೆ ಕೆರೆ ನೀರು ಒಂದು ಹಂತಕ್ಕೆ ಸ್ವಚ್ಛವಾಗಲಿದೆ. ಜಲಾಶಯದ ನೀರು ಕೂಡ ಬಳಕೆಗೆ ಮುಕ್ತವಾಗಲಿದೆ ಎಂಬುದು ನಾಗರಾಜು ಅವರ ದೂರದೃಷ್ಟಿಯಾಗಿದೆ.

  ವಾಜಪೇಯಿ ಆದರ್ಶವೇ ಪ್ರೇರಣೆ: 1994ರಿಂದ ಈವರೆಗೆ ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ಅಟಲ್ ಬಿಹಾರಿ ವಾಜಪೇಯಿ ಅವರೇ ಆದರ್ಶ. ಅವರ ಆದರ್ಶದ ಗುಣಗಳನ್ನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅಳವಡಿಸಿಕೊಂಡು ಜನಸೇವೆ ಮಾಡುತ್ತ ಬರುತ್ತಿದ್ದೇನೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕೈಗೊಂಡ ಹೆದ್ದಾರಿ ನಿರ್ಮಾಣ ಸೇರಿ ಹಲವು ಯೋಜನೆಗಳು ನಮಗೆ ಸ್ಪೂರ್ತಿದಾಯಕವಾಗಿವೆ ಎನ್ನುತ್ತಾರೆ ನಾಗರಾಜು.

  ಎಲ್ಲರೂ ನಗುತ್ತ ಬಾಳಬೇಕಣ್ಣ ಎನ್ನುವ ಬಿಜೆಪಿ ನಾಗಣ್ಣ

  ನಮ್ಮ ಆಹಾರ ನಾವೇ ಬೆಳೀತೀವಿ: ಮನೆಯ ಸುತ್ತ ಕೈತೋಟ ಮಾಡಿಕೊಂಡು ತರಕಾರಿಯನ್ನು ಈಗಲೂ ಬೆಳೆಯುತ್ತಿದ್ದೇವೆ. ತಿನ್ನೋಕೆ ಊಟ ಮಾಡಲು ಮನೆ ಮಂದಿ ಎಲ್ಲರೂ ಶ್ರಮಪಟ್ಟು ದುಡಿಯುತ್ತೇವೆ. ಹಣ್ಣು, ತರಕಾರಿ, ಆಹಾರ ಧಾನ್ಯಗಳನ್ನು ಬೆಳೆದು ತಿನ್ನುವುದರಲ್ಲಿ ಸಾಕಷ್ಟು ಖುಷಿ ಇದೆ. ಅದಕ್ಕಾಗಿ ಬೇಸಾಯವನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂಬುದು ನಾಗರಾಜು ಅವರ ವಿನಮ್ರ ಹೇಳಿಕೆ.

  ವಿಜಯೇಂದ್ರ ಬಿಜೆಪಿಗೆ ಶಕ್ತಿ: ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವುದು ಪಕ್ಷಕ್ಕೆ ಬಲ ತಂದುಕೊಟ್ಟಿದೆ ಎಂಬುದು ನಾಗರಾಜು ಅವರ ಅನಿಸಿಕೆ. ಯುವಕರನ್ನು ಸಂಘಟನಾತ್ಮಕವಾಗಿ ಮುನ್ನಡೆಸುವ ಮತ್ತು ಅವರಲ್ಲಿ ಶಕ್ತಿ ತುಂಬಿ ಹುರುಪು ಮೂಡಿಸಲು, ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಾಯವಾಗಲಿದೆ ಎನ್ನುತ್ತಾರೆ.

  Virat Kohli: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶೇಷ ದಾಖಲೆ ಬರೆದ ಕಿಂಗ್ ಕೊಹ್ಲಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts