ರೆಸಾರ್ಟ್ ರಾಜಕೀಯ ಪದ್ಧತಿ ತಂದಿದ್ದು ಬಿಜೆಪಿಯವರು: ಪ್ರಿಯಾಂಕ್‌ ಖರ್ಗೆ

ಕಲಬುರಗಿ: ಕರ್ನಾಟಕದಲ್ಲಿ ರೆಸಾರ್ಟ್‌ ರಾಜಕೀಯ ಪದ್ಧತಿ ಇರಲಿಲ್ಲ. ಆದರೆ ಅದನ್ನು ಜಾರಿಗೆ ತಂದಿದ್ದೇ ಬಿಜೆಪಿಯವರು. ಇದೀಗ ಶಾಸಕರಿಗೆ 20 -50 ಕೋಟಿಯ ಆಮಿಷ ಒಡ್ಡಲು ಮುಂದಾಗಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಅವರು ಶಾಸಕರನ್ನು ರೆಸಾರ್ಟ್‌ನಲ್ಲಿ ಆಪರೇಷನ್ ಮಾಡೋಕೆ ಮುಂದಾಗಿದ್ದಾರೆ. ಅಶ್ವತ್ಥ್‌ ನಾರಾಯಣ್ ಅವರು ನಮ್ಮ ಶಾಸಕರ ಜತೆ ಹೋಟೆಲ್‌ನಲ್ಲಿ ಕಾಣಸಿಕೊಂಡಿದ್ದಾರೆ. ಬಿಜೆಪಿಯವರು ದೊಂಬರಾಟ ಮಾಡೋಕೆ ಮುಂದಾಗಿದ್ದಾರೆ. ಈಶ್ವರಪ್ಪಗೆ ವಯಸ್ಸಾಗಿದೆ. ಏನ್ ಹೇಳಬೇಕು ಎಂದು ಗೊತ್ತಾಗುವುದಿಲ್ಲ ಎಂದು ಗೇಲಿ ಮಾಡಿದರು.

ಬಿಎಸ್‌ವೈ ಸಿಎಂ ಆಗಬೇಕು ಎಂದು ಜ್ಯೂತಿಷಿಗಳ ಬಳಿ ಕೇಳುತ್ತಿದ್ದಾರೆ. ಬಿ.ಎಸ್.ವೈ ಮುಖ್ಯಮಂತ್ರಿ ಆಗಬೇಕಾದರೆ ಕಾನೂನಿನ ತೊಡಕುಗಳಿವೆ. ಜ್ಯೋತಿಷಿಗಳ ಮಾತು ಕೇಳಿದರೆ ಹೀಗೆ ಆಗುವುದು ಎಂದರು.

ಪಕ್ಷದ ಯಾವ ನಿರ್ಧಾರಕ್ಕೂ ಬದ್ಧ

ಪಕ್ಷ ಹೇಳಿದರೆ ಮಂತ್ರಿ ಸ್ಥಾನವನ್ನು ಬಿಡಲು ಕೂಡ ಸಿದ್ಧವಾಗಿದ್ದೇನೆ. ಶಾಸಕ ಸ್ಥಾನಕ್ಕೂ ನಿಲ್ಲಬೇಡ ಎಂದು ಹೇಳಿದ್ದರೆ ಸ್ಪರ್ಧಿಸುವುದಿಲ್ಲ. ಡೆಸ್ಕ್‌ನಲ್ಲಿ ಕುಳಿತುಕೊಂಡು ಪಕ್ಷ ಸಂಘಟನೆಯ ಕೆಲಸ ಮಾಡು ಅಂದರೆ ಮಾಡುತ್ತೇನೆ.

ಜಾಧವ್‌ಗೆ ಸಂದೇಶ ಕೊಡಲು ಅವರೇನು ಅವಿದ್ಯಾವಂತರಲ್ಲ. ಎರಡು ಲಕ್ಷ ಮತದಾರರಿಂದ ಆಯ್ಕೆ ಆಗಿ ಬಂದಿದ್ದಾರೆ. ನಮ್ಮಿಂದ ಬುದ್ದಿ ಮಾತು ಹೇಳಿಸಿಕೊಳ್ಳಬಾರದು. ನಾನು ಯಾವುದೇ ವಿಚಾರದಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ. ಬಿಜೆಪಿಯವರ ಬಳಿ ಅಭ್ಯರ್ಥಿ ಇಲ್ಲ ಹಾಗಾಗಿ ಜಾಧವ್‌ರನ್ನು ಸೆಳೆಯಲು ಮುಂದಾಗಿದ್ದಾರೆ. ಆದರೂ ಲೋಕಸಭಾ ಚುನಾವಣೆಯನ್ನು ಸಲೀಸಾಗಿ ತೆಗೆದುಕೊಳ್ಳುವ ಹಾಗಿಲ್ಲ ಎಂದರು. (ದಿಗ್ವಿಜಯ ನ್ಯೂಸ್)