ಸೆ.11ರಿಂದ ಬಿಜೆಪಿ ಆಂತರಿಕ ಚುನಾವಣೆ ಆರಂಭ

ಬೆಂಗಳೂರು: 11 ಕೋಟಿ ಸದಸ್ಯತ್ವದೊಂದಿಗೆ ಜಗತ್ತಿನಲ್ಲಿಯೇ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಸದಸ್ಯತ್ವ ನೋಂದಣಿ ಆಂದೋಲನದ ನಂತರ ಆಂತರಿಕ ಚುನಾವಣೆಗೆ ಸನ್ನದ್ಧಗೊಂಡಿದೆ.

ಈಗಾಗಲೇ ರಾಜ್ಯಮಟ್ಟದ ಚುನಾವಣಾ ಉಸ್ತುವಾರಿಗಳನ್ನು ನೇಮಿಸಲಾಗಿದ್ದು, ಸೆ.11ರಿಂದ ಚುನಾವಣೆ ಪ್ರಕ್ರಿಯೆ ನಡೆಯಲಿದೆ.

10 ಲಕ್ಷ ಬೂತ್​ಗಳಲ್ಲಿ ಆರಂಭಿಕ ಹಂತದ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಸಾರ್ವತ್ರಿಕ ಚುನಾವಣೆ ಗ್ರಾಮ ಪಂಚಾಯಿತಿಯಿಂದ ಆರಂಭ ಗೊಂಡರೆ, ಬಿಜೆಪಿಯಲ್ಲಿ ಬೂತ್​ವುಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ 3 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಡಿ.15ರೊಳಗೆ ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆ ಪೂರ್ಣಗೊಳ್ಳಬೇಕಿದೆ.

ಮಂಗಳವಾರ ದೆಹಲಿಯಲ್ಲಿ ನಡೆದ ಬಿಜೆಪಿ ಸಂಘಟನಾತ್ಮಕ ಚುನಾವಣಾ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಆ.23ರೊಳಗೆ ರಾಜ್ಯಮಟ್ಟದ ಕಾರ್ಯಾಗಾರ ನಡೆಸುವಂತೆ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಸೂಚಿಸಿದ್ದಾರೆ. ಈಗಾಗಲೇ ಸದಸ್ಯತ್ವ ನೋಂದಣಿ ಮುಗಿದಿದ್ದು, ಈ ಹೊಸ ಸದಸ್ಯರೂ ಚುನಾವಣೆಗೆ ಅರ್ಹ ರಾಗುತ್ತಾರೆ. ಹಳೆಯ ಸದಸ್ಯರು 6 ವರ್ಷಕ್ಕೊಮ್ಮೆ ಸದಸ್ಯತ್ವವನ್ನು ನವೀಕರಿಸಿ ಕೊಳ್ಳಬೇಕಿದ್ದು, ಅಂಥವರು ಮಾತ್ರ ಚುನಾವಣೆಗೆ ಅರ್ಹರು ಎಂದರು.

ಚುನಾವಣೆ ಪ್ರಕ್ರಿಯೆ, ಜವಾಬ್ದಾರಿ ಮತ್ತಿತರ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಂಘಟನಾತ್ಮಕ ಚುನಾವಣಾ ಅಧಿಕಾರಿ ರಾಧಾಮೋಹನ್ ಸಿಂಗ್, ಸಹ ಚುನಾವಣಾಧಿಕಾರಿ ಸಿ.ಟಿ.ರವಿ, ರಾಜ್ಯದ ಸಂಘಟನಾ ಚುನಾವಣಾ ಉಸ್ತುವಾರಿ ಸಿ. ಅಶ್ವತ್ಥನಾರಾಯಣ ಭಾಗವಹಿಸಿದ್ದರು.

ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಡಿಎನ್​ಎ ಆಧಾರಿತ ಅಧ್ಯಕ್ಷ ಆಯ್ಕೆ ನಡೆಯುತ್ತದೆ. ಆದರೆ, ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ ಕೂಡ ಪಕ್ಷದ ಚುಕ್ಕಾಣಿ ಹಿಡಿಯಬಹುದು. 1982ರಲ್ಲಿ ಮತಗಟ್ಟೆ ಮಟ್ಟದ ಅಧ್ಯಕ್ಷರಾಗಿದ್ದ ಅಮಿತ್ ಷಾ ಈಗ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. 1988ರಲ್ಲಿ ಬೂತ್ ಅಧ್ಯಕ್ಷನಾಗಿದ್ದ ನಾನು ಕೂಡ ಇದಕ್ಕೆ ಸ್ಪಷ್ಟ ಉದಾಹರಣೆ.

| ಸಿ.ಟಿ. ರವಿ, ರಾಷ್ಟ್ರೀಯ ಸಹ ಚುನಾವಣಾ ಅಧಿಕಾರಿ

ಚುನಾವಣೆ ವೇಳಾಪಟ್ಟಿ

ಸೆ.11ರಿಂದ 30 – ಬೂತ್ ಮಟ್ಟ

ಅ.11ರಿಂದ 31 – ಮಂಡಲ ಮಟ್ಟ

ನ.11ರಿಂದ 30 – ಜಿಲ್ಲಾ ಮಟ್ಟ

ಡಿ.1ರಿಂದ 15 – ರಾಜ್ಯ ಮಟ್ಟ

Leave a Reply

Your email address will not be published. Required fields are marked *