ಬೆಳಗಾವಿ: ‘ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದು, ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ನೂತನ ಮುಖ್ಯಮಂತ್ರಿಯನ್ನು ಸ್ವಾಗತಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಡಾ ಹಗರಣದ ಕಾರ್ಮೋಡ ಮುಖ್ಯಮಂತ್ರಿ ಕುರ್ಚಿ ಆವರಿಸಿಕೊಂಡಿದೆ. ಆ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅನೇಕರು, ತಮಗೆ ಬೆಂಬಲ ಕೋರಿ ರಹಸ್ಯ ಸಭೆ ನಡೆಸುತ್ತಿದ್ದಾರೆ. ಆದರೂ, ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸುತ್ತಾರೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ, ಸರ್ಕಾರ ಕೋಮಾ ಹಂತದಲ್ಲಿದೆ. ಹೊಸ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿಲ್ಲ. ಪೂಜೆ ಬಿಡಿ. ಗುದ್ದಲಿಯೂ ಕಾಣಿಸುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.
‘ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಬೆಂಗಳೂರಿಗೆ ಸೀಮಿತವಾಗಿದ್ದಾರೆ. ಉತ್ತರ ಕರ್ನಾಟಕವನ್ನು ಈ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಯಾವೊಬ್ಬ ಸಚಿವರು ಜಿಲ್ಲೆಗಳ ಪ್ರವಾಸ ಮಾಡುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ನಮ್ಮ ವಿರುದ್ಧ ಗಂಟೆಗಟ್ಟಲೇ ಮಾತನಾಡುತ್ತಾರೆ. ಆದರೆ, ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಗ್ರಾಮ ಪಂಚಾಯಿತಿ ನೌಕರರನ್ನು ಭೇಟಿ ಮಾಡಲು ಅವರ ಬಳಿ ಸಮಯವಿಲ್ಲ’ ಎಂದು ಕುಟುಕಿದರು.
‘ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಮುಡಾ ಹಗರಣದ ಬಗ್ಗೆ ಚರ್ಚಿಸಿದರೆ ಮುಜುಗರವಾಗುತ್ತದೆ ಎಂದು ಅವರು ಪಲಾಯನವಾದ ಮಾಡಿದರು. ಈಗ ಮುಡಾ ಹಗರಣದಲ್ಲೂ ತಪ್ಪೊಪ್ಪಿಕೊಂಡು 14 ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ಅಸಹಾಯಕರಾಗಿ ಕಾಣಿಸುತ್ತಿರುವ ಅವರು, ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಯಾವುದೇ ಕ್ಷಣದಲ್ಲಿ ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಬಹುದು’ ಎಂದರು.
‘ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನಾವು ಒಪ್ಪಿಕೊಳ್ಳುವುದಿಲ್ಲ’ ಎಂಬ ಬಿಜೆಪಿ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಪಕ್ಷದ ಹೈಕಮಾಂಡ್‌ನಿಂದ ನನ್ನನ್ನು ರಾಜ್ಯಾಧ್ಯಕ್ಷನಾಗಿ ನೇಮಿಸಲಾಗಿದೆ. ಅವರು ತೆಗೆದುಕೊಂಡ ನಿರ್ಧಾರವನ್ನು ಒಪ್ಪಿಕೊಳ್ಳಲು ಕೆಲವರಿಗೆ ಸಮಯಾವಕಾಶ ಬೇಕು. ನನ್ನ ತಂದೆಯವರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷ ಸಂಘಟಿಸುವಾಗ ಅನೇಕ ಏಳುಬೀಳು ಕಂಡಿದ್ದನ್ನು ನೋಡಿದ್ದೇನೆ. ಮುಂದೆ ಎಲ್ಲವೂ ಸರಿಯಾಗುತ್ತದೆ’ ಎಂದರು.
‘ರಾಜ್ಯದಲ್ಲಿ ಮೂರ್ನಾಲ್ಕು ತಿಂಗಳಿನಿಂದ ಜನರ ಪರವಾಗಿರುವ ಸರ್ಕಾರ ಇಲ್ಲ ಎಂಬಂಥ ವಾತಾವರಣ ನಿರ್ಮಾಣವಾಗಿದೆ. ಲೋಕಸಭೆ ಚುನಾವಣೆ ವೇಳೆ, ಗ್ಯಾರಂಟಿಗಳ ಬಗ್ಗೆ ಉದ್ದುದ್ದ ಭಾಷಣ ಮಾಡಿ, ಗೃಹಲಕ್ಷ್ಮಿ ಯೋಜನೆಯಡಿ ಮೂರು ಕಂತಿನ ಹಣ ಕೊಟ್ಟರು. ಈಗ ಎಲ್ಲವನ್ನೂ ಮರೆತಿದ್ದಾರೆ’ ಎಂದು ಟೀಕಿಸಿದರು.
‘ಹರಿಯಾಣದ ಪ್ರಜ್ಞಾವಂತ ಮತದಾರರು ಮೂರನೇ ಬಾರಿ ಬಿಜೆಪಿ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಬೋಗಸ್ ಗ್ಯಾರಂಟಿಗಿಂತ ಮೋದಿ ಗ್ಯಾರಂಟಿಯೇ ಉತ್ತಮ ಎಂದು ನಮಗೆ ಮತ ಹಾಕಿದ್ದಾರೆ. ಸಾಕಷ್ಟು ಅಪಪ್ರಚಾರದ ಮಧ್ಯೆಯೂ ಐತಿಹಾಸಿಕ ಗೆಲುವು ನಮಗೆ ದಕ್ಕಿದೆ. ಜಮ್ಮು-ಕಾಶ್ಮೀರದಲ್ಲಿ ನಾವು ಅಧಿಕಾರ ಹಿಡಿದಿಲ್ಲ. ಆದರೆ, ಬಲಿಷ್ಠ ವಿರೋಧ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುವ ಕಾಂಗ್ರೆಸ್ ಕೇವಲ ಆರೇ ಸ್ಥಾನದೊಂದಿಗೆ ಧೂಳೀಪಟವಾಗಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮೇಲೂ ಈ ಫಲಿತಾಂಶ ಬೀರುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾವು ಸಚಿವ ಸತೀಶ ಜಾರಕಿಹೊಳಿ ಭೇಟಿಯಾದ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ನಾನು ಭೇಟಿಯಾಗಿದ್ದೆ. ಇದರಲ್ಲಿ ರಾಜಕಾರಣ ಹುಡುಕುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷದೊಂದಿಗೆ ಎಲ್ಲ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಒಳ್ಳೆಯದು’ ಎಂದರು.