Friday, 16th November 2018  

Vijayavani

Breaking News

ಯಶಸ್ವಿ ಆಪರೇಷನ್​ಗೆ ಹೈಕಮಾಂಡ್ ಸಮ್ಮತಿ, ಷರತ್ತು ಅನ್ವಯ!

Thursday, 13.09.2018, 2:03 AM       No Comments

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದಿದ್ದರೆ ಅಭ್ಯಂತರವೇನೂ ಇಲ್ಲ. ಆದರೆ ಮೈತ್ರಿ ಸರ್ಕಾರ ಬೀಳುವ, ಹೊಸ ಸರ್ಕಾರ ರಚಿಸುವ ಎಲ್ಲ ಪ್ರಕ್ರಿಯೆ ನವೆಂಬರ್ ಅಂತ್ಯದೊಳಗೆ ಮುಗಿಯಬೇಕು, ವಿಫಲ ಯತ್ನ ಆಗಬಾರದು. ಇವಿಷ್ಟೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ವರಿಷ್ಠರು ನೀಡಿರುವ ಸ್ವಾತಂತ್ರ್ಯ ಹಾಗೂ ವಿಧಿಸಿರುವ ಷರತ್ತು.

ನವೆಂಬರ್ ನಂತರ ‘ಲೋಕ’ಜಪ: ಸರ್ಕಾರ ಬೀಳಿಸುವುದಿರಲಿ, ಪರಿಸ್ಥಿತಿಯ ಲಾಭವನ್ನೂ ಪಡೆಯಬಾರದು ಎಂದರೆ ಹೇಗೆ? ಎಂಬ ಬಿಎಸ್​ವೈ ವಾದಕ್ಕೆ ರಾಷ್ಟ್ರೀಯ ನಾಯಕರು ಅನಿವಾರ್ಯವಾಗಿ ಒಪ್ಪಿದ್ದಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಭೂಪಿಂದರ್ ಸಿಂಗ್​ರಿಂದ ವರದಿ ಪಡೆದಿರುವ ಅಮಿತ್ ಷಾ, ನವೆಂಬರ್ ಅಂತ್ಯದ ಗಡುವು ವಿಧಿಸಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಮಧ್ಯಪ್ರದೇಶ, ಛತ್ತೀಸ್​ಗಢ ಹಾಗೂ ರಾಜಸ್ಥಾನ ವಿಧಾನಸಭೆ ಚುನಾವಣೆ ನಡೆದು ಫಲಿತಾಂಶ ಹೊರಬೀಳುತ್ತದೆ. ಅಷ್ಟರೊಳಗೆ ಸರ್ಕಾರ ರಚಿಸುವುದಾದರೆ ಸರಿ. ಮೂರೂ ರಾಜ್ಯದ ಫಲಿತಾಂಶದ ವೇಳೆಗೆ ಕರ್ನಾಟಕದಲ್ಲಿ ಪರಿಸ್ಥಿತಿ ತಿಳಿಯಾಗಿದ್ದರೆ ಲೋಕಸಭೆ ಪ್ರಚಾರ ಆರಂಭಿಸಬಹುದು. ಡಿಸೆಂಬರ್ ನಂತರವೂ ಸರ್ಕಾರ ರಚನೆ ಮೂಡಿನಲ್ಲೇ ಇದ್ದರೆ ದಕ್ಷಿಣದಲ್ಲಿ ಪ್ರಮುಖ ರಾಜ್ಯವಾಗಿರುವ ಕರ್ನಾಟಕದಲ್ಲಿ ಚುನಾವಣೆ ಸಿದ್ಧತೆ ಕಷ್ಟವಾಗುತ್ತದೆ. ಆದ್ದರಿಂದ ಅಗತ್ಯ ಶಾಸಕರು ಬರುತ್ತಾರಾ ಖಾತ್ರಿಪಡಿಸಿಕೊಳ್ಳಿ. ಆತುರ ಬೇಡ. ಯತ್ನ ವಿಫಲವಾದರೆ ಚುನಾವಣೆ ಸಮಯದಲ್ಲಿ ಮೈತ್ರಿ ಸರ್ಕಾರದ ಹಾಗೂ ಮಹಾಘಟಬಂಧನದ ಆತ್ಮವಿಶ್ವಾಸವನ್ನು ನಾವೇ ಹೆಚ್ಚಿಸಿದಂತಾಗುತ್ತದೆ. ಇಲ್ಲಿನ ವಿಫಲತೆಯ ಪರಿಣಾಮ ರಾಷ್ಟ್ರ ಮಟ್ಟದಲ್ಲೂ ಆಗುತ್ತದೆಂಬ ಗಮನವಿರಲಿ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

ಚುನಾವಣೆ ಬಳಿಕದ ಸಂಕಷ್ಟಗಳು

ಲೋಕಸಭಾ ಚುನಾವಣೆ ಬಳಿಕ ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಕರ್ನಾಟಕದಲ್ಲಿ ಸರ್ಕಾರ ರಚಿಸುವ ಇಚ್ಛೆ ತೀವ್ರವಾಗಿರುವುದಿಲ್ಲ ಎಂಬ ಅರಿವು ಬಿಎಸ್​ವೈಗಿದೆ. ಈಗಾಗಲೆ ರಾಷ್ಟ್ರೀಯ ಅಧ್ಯಕ್ಷರ ಅವಧಿ ಮುಕ್ತಾಯವಾಗಿ ವಿಸ್ತರಣೆಯಲ್ಲಿರುವ ಅಮಿತ್ ಷಾ ಸಹ ಚುನಾವಣೆ ನಂತರ ಬದಲಾಗುತ್ತಾರೆ. ಮುಂದಿನ ಅಧ್ಯಕ್ಷರು ಯಾರಾಗುತ್ತಾರೊ? ಹೇಗೆ ವರ್ತಿಸುತ್ತಾರೊ? ಹೇಳುವುದು ಕಷ್ಟ. 2019ರ ಚುನಾವಣೆಯೊಳಗೆ ಸರ್ಕಾರ ರಚಿಸಿ ಸಿಎಂ ಸ್ಥಾನಕ್ಕೇರುವುದೆ ಉತ್ತಮ ದಾರಿ ಎಂಬುದು ಯಡಿಯೂರಪ್ಪಗೆ ಮನದಟ್ಟಾಗಿದೆ. ಇದೇ ಕಾರಣಕ್ಕೆ ಸರ್ಕಾರ ರಚನೆ ಪ್ರಕ್ರಿಯೆಯನ್ನು ಆದಷ್ಟೂ ತೀವ್ರಗೊಳಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆತುರದ ಲಾಭ ಪಡೆಯುತ್ತಿರುವ ಕೈಗಳು?

ಸರ್ಕಾರ ರಚಿಸಲೇಬೇಕು ಎಂಬ ರಾಜ್ಯ ಬಿಜೆಪಿ ನಾಯಕರ ಆತುರದ ಲಾಭವನ್ನು ಜಾರಕಿಹೊಳಿ ಸಹೋದರರು ಸೇರಿ ಅನೇಕ ಕಾಂಗ್ರೆಸಿಗರು ಭರಪೂರವಾಗಿ ಪಡೆಯುತ್ತಿದ್ದಾರೆಯೇ ಎಂಬ ಅನುಮಾನವೂ ಬಿಜೆಪಿಯ ಒಂದು ವಲಯದಲ್ಲಿದೆ. ಸರ್ಕಾರ ಪತನ ಮಾಡುವಷ್ಟು ಸಂಕಷ್ಟ ಕಾಂಗ್ರೆಸ್​ನಲ್ಲಿ ಎದುರಾಗಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮೇಲುಗೈ ಸಾಧಿಸುವುದು, ಕೆಲವರಿಗೆ ಸಚಿವ ಸ್ಥಾನ, ಕೆಲವು ವರ್ಗಾವಣೆ ವಿಚಾರಗಳಿವೆ. ಬಿಜೆಪಿಗೆ ತೆರಳುವ ಹುಯಿಲೆಬ್ಬಿಸಿ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಇದೇ ದಾರಿಯಲ್ಲಿ ಬಳ್ಳಾರಿ ಕಾಂಗ್ರೆಸಿಗರೂ ನಡೆಯುತ್ತಿದ್ದಾರೆ. ನಮ್ಮ ಹೆಸರಿನಲ್ಲಿ ಯಾರ್ಯಾರೋ ಲಾಭ ಮಾಡಿಕೊಳ್ಳುತ್ತಿದ್ದಾರೆ. ನಮಗೇನು ಸಿಗುತ್ತದೋ ಕಾದುನೋಡಬೇಕು ಎಂದು ಕಮಲ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸ್ವಂತ ಶಕ್ತಿ ಕ್ಷೀಣಿಸದಂತೆ ಎಚ್ಚರ

ಬೇರೆ ಪಕ್ಷದ ಶಾಸಕರನ್ನು ಲೆಕ್ಕ ಹಾಕುವ ಭರದಲ್ಲಿ ನಮ್ಮದೇ 104ರಲ್ಲಿ ಕಡಿಮೆಯಾಗಬಾರದು ಎಂಬ ಎಚ್ಚರಿಕೆಯನ್ನೂ ಯಡಿಯೂರಪ್ಪ ತೆಗೆದುಕೊಂಡಿದ್ದಾರೆ. ಒಮ್ಮೆ ಬಂದು ನನ್ನನ್ನು ಕಾಣಬೇಕು ಎಂದು ಮಂಗಳವಾರ ರಾತ್ರಿಯೇ ಅನೇಕ ಶಾಸಕರಿಗೆ ಬಿಎಸ್​ವೈ ವಿಷಯ ರವಾನಿಸಿದ್ದರು. ಡಾಲರ್ಸ್ ಕಾಲನಿ ನಿವಾಸಕ್ಕೆ ಕೆಲ ಶಾಸಕರು ಆಗಮಿಸುವ ಸುದ್ದಿ ಬರುತ್ತಿದ್ದಂತೆಯೆ, ಸಂದೇಶ ಬಾರದ ಶಾಸಕರೂ ಧಾಂಗುಡಿ ಇಟ್ಟು ವಿಧೇಯತೆ ಪ್ರದರ್ಶಿಸುತ್ತಿದ್ದಾರೆ. ರೇಣುಕಾಚಾರ್ಯ, ಸುರೇಶ್, ಲಿಂಗಣ್ಣ, ಬೆಳ್ಳಿ ಪ್ರಕಾಶ್, ಅರವಿಂದ ಬೆಲ್ಲದ್, ವೀರಣ್ಣ ಚರಂತಿಮಠ, ಸಿದ್ದು ಸವದಿ, ಕುಮಾರ್ ಬಂಗಾರಪ್ಪ, ಪ್ರೀತಮ್ ಗೌಡ ಸೇರಿ 35ಕ್ಕೂ ಹೆಚ್ಚು ಶಾಸಕರು ಆಗಮಿಸಿದರು. ನಿರಂತರ ಸಂಪರ್ಕದಲ್ಲಿರಿ ಎಂದಿದ್ದನ್ನು ಬಿಟ್ಟರೆ, ಈ ಶಾಸಕರ ಜತೆ ಬಿಎಸ್​ವೈ ಯಾವುದೇ ಮಾತುಕತೆ ನಡೆಸಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Back To Top