ಜೆಡಿಎಸ್ ವರಿಷ್ಠರ ನಿರ್ಧಾರಕ್ಕೆ ಬದ್ಧ

ಚಿಕ್ಕಮಗಳೂರು: ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ವರಿಷ್ಠರು ಕೈಗೊಳ್ಳುವ ತೀರ್ವನಕ್ಕೆ ನಾವು ಬದ್ಧ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ತಿಳಿಸಿದರು.

ನಮಗೆ ಚುನಾವಣೆ ಪ್ರತಿಷ್ಠೆಯೇ ಹೊರತು ಅಭ್ಯರ್ಥಿಯಲ್ಲ. ಬಿಜೆಪಿಯನ್ನು ಸೋಲಿಸುವುದಷ್ಟೇ ನಮ್ಮ ಗುರಿ. ಕ್ಷೇತ್ರದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ. ಸ್ಥಳೀಯ ಶಾಸಕರು ಸೇರಿ ಆ ಪಕ್ಷದ ಕಾರ್ಯಕರ್ತರೇ ಸಂಸದೆ ಶೋಭಾ ವಿರುದ್ಧ ಗೋ ಬ್ಯಾಕ್ ಚಳವಳಿ ನಡೆಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

ಲೋಕಸಭಾ ಚುನಾವಣೆಗೆ ಜಿಲ್ಲೆಯಿಂದ ಸ್ಪರ್ಧಿಸಲು ನಾನೂ ಸೇರಿ ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಮಾಜಿ ಶಾಸಕರಾದ ವೈಎಸ್​ವಿ ದತ್ತ, ಬಿ.ಬಿ.ನಿಂಗಯ್ಯ, ಮುಖಂಡ ಟಿ.ಡಿ.ರಾಜೇಂದ್ರ ಪ್ರಮುಖ ಆಕಾಂಕ್ಷಿಗಳಾಗಿದ್ದೇವೆ ಎಂದು ಹೇಳಿದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಮತ್ತೆ ಜೆಡಿಎಸ್​ಗೆ ಕರೆತರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಯಪ್ರಕಾಶ್ ಹೆಗ್ಡೆ ಬಿಜೆಪಿಯಲ್ಲಿದ್ದಾರೆ. ಮುಂದೆ ರಾಜಕೀಯ ಬದಲಾವಣೆಗಳು ಏನು ಬೇಕಾದರೂ ಆಗಬಹುದು ಎಂದರು.

ವಿಧಾನಪರಿಷತ್ ಉಪ ಸಭಾಪತಿ ಎಸ್.ಎಲ್.ಧಮೇಗೌಡ, ಎಂಎಲ್​ಸಿ ಎಸ್.ಎಲ್.ಬೋಜೇಗೌಡರ ಪ್ರಯತ್ನದಿಂದ ಈ ಅನುದಾನದ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮೈತ್ರಿ ಸರ್ಕಾರದಿಂದ 200 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ. ಚಿಕ್ಕಮಗಳೂರಿನ ಪ್ರವಾಸಿ ಮಂದಿರದ ಹೊಸ ಕಟ್ಟಡ ನಿರ್ವಣಕ್ಕೆ ಒದಗಿಸಿದ 9 ಕೋಟಿ ರೂ. ಸಹ ಇದರಲ್ಲಿ ಸೇರಿದೆ ಎಂದರು.

ಒತ್ತುವರಿ ಭೂಮಿಗೆ 100 ಪಟ್ಟು ಶುಲ್ಕ ಕಟ್ಟಿಕೊಳ್ಳಲು ಮನವಿ: ಒತ್ತುವರಿ ಮಾಡಿ ಕಾಫಿ ತೋಟ ಮಾಡಿಕೊಂಡವರಿಗೆ ಭೂ ಕಂದಾಯದ 100 ಪಟ್ಟು ಶುಲ್ಕ ಕಟ್ಟಿಸಿಕೊಂಡು ಬೆಳೆಗಾರರಿಗೆ ಗುತ್ತಿಗೆ ನೀಡಬೇಕು ಎಂದು ಎಂಎಲ್ಸಿ ಬೋಜೇಗೌಡ ನೇತೃತ್ವದ ನಿಯೋಗ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ ಎಂದು ಎಚ್.ಎಚ್.ದೇವರಾಜ್ ಹೇಳಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಳೆಗಾರರು ಪ್ರತೀ ಎಕರೆಗೆ ತಗಲುವ ನೋಂದಣಿ ಶುಲ್ಕದ ಶೇ.10ರಷ್ಟು ಹಣ ಭರಿಸಬೇಕು ಎಂಬ ಸೂಚನೆ ಇತ್ತು. ಇದರಿಂದ 10 ಎಕರೆಗೆ ಸುಮಾರು 7ರಿಂದ 8 ಲಕ್ಷ ರೂ. ಶುಲ್ಕ ಪಾವತಿಸಬೇಕಿತ್ತು. ಬೆಳೆಗಾರರು ಇಷ್ಟೊಂದು ಶುಲ್ಕ ಭರಿಸಲು ಸಾಧ್ಯವಾಗದಿದ್ದರಿಂದ ನೂರು ಪಟ್ಟು ಶುಲ್ಕ ಕಟ್ಟಿಸಿಕೊಂಡು ಭೂಮಿ ಗುತ್ತಿಗೆ ನೀಡಲು ಕೋರಲಾಗಿದೆ ಎಂದರು. ಈ ವ್ಯವಸ್ಥೆಯಡಿ ಎಕರೆಗೆ ವಾರ್ಷಿಕ 100 ರೂ. ಕಂದಾಯ ಇದ್ದರೆ, 10 ಸಾವಿರ ರೂ. ಮಾತ್ರ ಶುಲ್ಕ ಪಾವತಿಸಿದರೆ ಸಾಕು. ಇದರಿಂದ ಬೆಳೆಗಾರರಿಗೆ ಅನುಕೂಲವಾಗಲಿದೆ. ಈ ವಿಚಾರದ ಬಗ್ಗೆ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್ ಖತ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿ ಅವರಿಗೆ ಕೋರಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.