ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಮೂಲಕ ಬಿಜೆಪಿ ಮುಸ್ಲಿಂರನ್ನು ದ್ವೇಷಿಸುತ್ತಿದೆ: ಅರವಿಂದ್​ ಕೇಜ್ರಿವಾಲ್​

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮತದಾರರ ಪಟ್ಟಿಯಲ್ಲಿರುವ ಮುಸ್ಲಿಂರ ಹೆಸರನ್ನು ತೆಗೆದು ಹಾಕುವ ಮೂಲಕ ಬಿಜೆಪಿ ಪಕ್ಷ ಮುಸ್ಲಿಂರನ್ನು ದ್ವೇಷಿಸುತ್ತಿದೆ ಎಂದು ಮುಖ್ಯಮಂತ್ರಿ ಹಾಗೂ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಗಂಭೀರ ಆರೋಪ ಮಾಡಿದ್ದಾರೆ.

ಭಾನುವಾರ ದೆಹಲಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಿದರು.

ದೆಹಲಿಯ ಮತದಾರರ ಪಟ್ಟಿಯಲ್ಲಿ 30 ಲಕ್ಷ ಮತದಾರರ ಹೆಸರನ್ನು ಬಿಜೆಪಿ ತೆಗೆದು ಹಾಕಿದ್ದು, ಇದರಲ್ಲಿ 15 ಲಕ್ಷ ಮತದಾರರು ಬಿಹಾರ ಹಾಗೂ ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. 8 ಲಕ್ಷ ಮತದಾರರು ಮುಸ್ಲಿಂರಾಗಿದ್ದು, 4 ಲಕ್ಷ ಬನಿಯಾ ಜನಾಂಗಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದರು.

ಒಂದು ವೇಳೆ ದೆಹಲಿಯ ಎಲ್ಲ ಲೋಕಸಭಾ ಸ್ಥಾನಗಳನ್ನು ಆಪ್​ ಪಕ್ಷಕ್ಕೆ ಬಿಟ್ಟುಕೊಟ್ಟಲ್ಲಿ ದೆಹಲಿಯನ್ನು ವೇಗವಾಗಿ ಅಭಿವೃದ್ಧಿ ಪಡಿಸಲಾಗುವುದು. ಬಿಜೆಪಿಯಿಂದ ಸೃಷ್ಠಿಯಾದ ಅಡೆತಡೆಗಳ ನಡುವೆಯೂ ನಮ್ಮ ಸರ್ಕಾರ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದೆ. ಲೋಕಸಭೆಯಲ್ಲಿ ನಮಗೆ ಎಲ್ಲ ಸ್ಥಾನಗಳನ್ನು ಬಿಟ್ಟುಕೊಟ್ಟರೆ, ನಾಲ್ಕು ವರ್ಷದಲ್ಲಿ ಮಾಡಿದ ಕೆಲಸವನ್ನು ಒಂದೇ ವರ್ಷದಲ್ಲಿ ಮಾಡುತ್ತೇವೆ ಎಂಬ ಭರವಸೆ ನೀಡಿದರು.

ಮುಸ್ಲಿಂರನ್ನು ದ್ವೇಷಿಸುವ ಕಾರಣದಿಂದ ಬಿಜೆಪಿ ಅವರ ಹೆಸರನ್ನು ತೆಗೆದು ಹಾಕಿದೆ. ಜಿಎಸ್​ಟಿಯ ಕಾರಣದಿಂದಾಗಿ ಬನಿಯಾ(ವ್ಯಾಪಾರಿ ವರ್ಗ) ಜನಾಂಗ ಅವರಿಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ಅವರ ಹೆಸರನ್ನು ತೆಗೆದು ಹಾಕಿದೆ ಎಂದು ಕೇಜ್ರಿವಾಲ್​ ಆರೋಪಿಸಿದರು.

ಈ ವಿಚಾರದಲ್ಲಿ ಚುನಾವಣಾ ಆಯೋಗ ಮಧ್ಯಸ್ಥಿಕೆ ವಹಿಸಬೇಕು. ತೆಗೆದು ಹಾಕಲಾಗಿರುವ ಎಲ್ಲ ಹೆಸರನ್ನು ಮತ್ತೆ ಸಾರ್ವತ್ರಿಕ ಚುನಾವಣೆಗೂ ಮುನ್ನ ಸೇರಿಸಬೇಕೆಂದು ಕೇಜ್ರಿವಾಲ್​ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)