ವಿಜಯಪುರ: ಬಸನಗೌಡ ಪಾಟೀಲ ಯತ್ನಾಳರಿಂದ ಬಿಜೆಪಿಗೆ ಹಾನಿಯಾಗಿದೆ ವಿನಃ ಕಿಂಚಿತ್ ಲಾಭವಾಗಿಲ್ಲ. ಹೀಗಾಗಿ ಇದೀಗ ಅವರ ಉಚ್ಚಾಟನೆಯಿಂದಲೂ ಯಾವುದೇ ಹಾನಿಯಾಗಲ್ಲ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪ್ರತಿಕ್ರಿಯಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳರ ನಡವಳಿಕೆಯೇ ಅವರಿಗೆ ಮುಳುವಾಗಿದೆ. ಈ ಹಿಂದೆ ನನಗೆ ಟಿಕೆಟ್ ಸಿಕ್ಕಾಗಲೂ ಚುನಾವಣೆ ಮಾಡಲಿಲ್ಲ. ಅವರ ತಾತ್ಸಾರ, ಅಸೂಯೆ, ಹೊಟ್ಟೆಕಿಚ್ಚಿನ ಗುಣವೇ ಅವರನ್ನಿಂದು ಕಾಡುತ್ತಿದೆ. ಅವರು ಮಾಡಿರುವ ತಪ್ಪುಗಳೇ ಅವರಿಗೆ ಮುಳುವಾಗಿವೆ ಎಂದರು.
ಯತ್ನಾಳರ ಉಚ್ಚಾಟನೆಯಿಂದ ಬಿಜೆಪಿಗೆ ಖಂಡಿತ ಹಾನಿಯಾಗಲ್ಲ. ಇವರೇ 5-6 ಸಾವರಿ ಅಂತರಗಳಿಂದ ಗೆಲುವು ಸಾಧಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಪ್ರಚಾರ ಮಾಡಿಲ್ಲ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಲ್ಲ. ಹೀಗಾಗಿ ಇವರಿಂದ ಕಿಂಚತ್ ಲಾಭವಾಗಿಲ್ಲ ಎಂದರಲ್ಲದೇ ನಾನಂತೂ ಪಕ್ಷಕ್ಕೆ ಪ್ರಾಮಾಣಿಕವಾಗಿದ್ದೇನೆ. ಟಿಕೆಟ್ ಸಿಗದೇ ಇದ್ದಾಗಲೂ ಪಕ್ಷದಲ್ಲಿದ್ದೇನೆ. ಪಕ್ಷದಲ್ಲಿಯೇ ಇರುತ್ತೇನೆ. ಪಕ್ಷವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟುತ್ತೇವೆ ಎಂದು ತಿಳಿಸಿದರು.