ಬಿಜೆಪಿ ಹಣಿಯಲು ‘ಪಕ್ಷೇತರ’ ಅಸ್ತ್ರ

ಕಾರವಾರ: ಕಾರವಾರ ನಗರಸಭೆಯ ಕಣದಲ್ಲಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ‘ಪಕ್ಷೇತರ’ ಅಸ್ತ್ರ ಪ್ರಯೋಗಿಸುತ್ತಿದೆ.

ಬಿಜೆಪಿ ಮತದಾರರು ಹೆಚ್ಚಿರುವ ವಾರ್ಡ್ ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸದೆ ತನ್ನ ಬೆಂಬಲಿಗರನ್ನು ಪಕ್ಷೇತರವಾಗಿ ಸ್ಪರ್ಧೆಗಿಳಿಸಿದ್ದು, ಆ ಮೂಲಕ ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ತಂತ್ರ ರೂಪಿಸಿದೆ.

ಕಾರವಾರದ 1 ನೇ ವಾರ್ಡ್​ನಲ್ಲಿ ಹಾಗೂ 12 ನೇ ವಾರ್ಡ್​ನಲ್ಲಿ ಅಭ್ಯರ್ಥಿಗಳನ್ನೇ ಹಾಕಿಲ್ಲ. 1 ನೇ ವಾರ್ಡ್​ನಲ್ಲಿ ಪ್ರಶಾಂತ ಹರಿಕಂತ್ರ ಅವರಿಗೆ ಹಾಗೂ 12 ನೇ ವಾರ್ಡ್​ನಲ್ಲಿ ಪ್ರೇಮಾನಂದ ಗುನಗಾ ಅವರಿಗೆ ಬೆಂಬಲ ನೀಡುತ್ತಿದೆ. ಇನ್ನೂ ಹಲವೆಡೆ ತಮ್ಮ ಅಭ್ಯರ್ಥಿಗಳನ್ನು ಹಾಕಿದರೂ ಪಕ್ಷೇತರರನ್ನು ಪರೋಕ್ಷವಾಗಿ ಬೆಂಬಲಿಸುತ್ತಿದೆ. 2013 ರಲ್ಲಿ ನಡೆದ ನಗರ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ತಲಾ 13 ವಾರ್ಡ್​ಗಳನ್ನು ಗೆದ್ದಿದ್ದವು. 31 ವಾರ್ಡ್​ಗಳ ನಗರ ಸಭೆಯಲ್ಲಿ ಬಹುಮತ ಪಡೆದು ಆಡಳಿತ ನಡೆಸಲು 16 ಸದಸ್ಯರ ಅವಶ್ಯಕತೆ ಇತ್ತು. ಕಾಂಗ್ರೆಸ್ ಪ್ರಶಾಂತ ಹರಿಕಂತ್ರ, ಪ್ರೇಮಾನಂದ ಗುನಗಾ, ಪಾಂಡುರಂಗ ರೇವಂಡಿಕರ್ ಸೇರಿ ಮೂವರು ಪಕ್ಷೇತರರ ಬೆಂಬಲ ಪಡೆದು ಅಧಿಕಾರದ ಗದ್ದುಗೆ ಏರಿತ್ತು. ಆಗ ಅಧಿಕಾರ ಹಿಡಿಯಲು ಬೆಂಬಲ ನೀಡಿದ ಪಕ್ಷೇತರರಿಗೆ ಕಾಂಗ್ರೆಸ್ ಈಗ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಜೆಡಿಎಸ್ ಕೂಡ ಎಲ್ಲ ವಾರ್ಡ್​ಗಳಲ್ಲಿ ಸ್ಪರ್ಧೆಯಲ್ಲಿಲ್ಲ. ಆದರೆ, ಹಲವೆಡೆ ಪಕ್ಷೇತರಿಗೆ ಬೆಂಬಲ ನೀಡುತ್ತಿದೆ.

ನಾಮಪತ್ರ ವಾಪಸ್​ಗೆ ಹಿಂದೇಟು ಶಿರಸಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಬಂಡಾಯವಾಗಿ ನಿಂತವರ ಮನವೊಲಿಸುವ ತೀವ್ರ ಕಸರತ್ತು ಆರಂಭಗೊಂಡಿದೆ. ನಾಮಪತ್ರ ವಾಪಸಾತಿಯ ಅಂತಿಮ ದಿನ ಹತ್ತಿರ ಬರುತ್ತಿದ್ದಂತೆಯೇ ಬಂಡಾಯ ನಿಂತವರ ಪಟ್ಟೂ ಬಿಗಿಗೊಳ್ಳಲಾರಂಭಿಸಿದೆ.

ಬಿಜೆಪಿಯಲ್ಲಿ ಹಿಂದಿನ ಅವಧಿಯ ಮೂವರು ಸದಸ್ಯರು ಬಂಡಾಯವೆದ್ದಿದ್ದಾರೆ. ನೀಲೇಕಣಿ ಭಾಗದ ಸದಸ್ಯರಾಗಿದ್ದ ನಾಗರಾಜ ಮಾಗ್ತಿ ಅವರಿಗೆ ಮೀಸಲಾತಿಯಿಂದಾಗಿ ಕ್ಷೇತ್ರ ಕೈ ತಪ್ಪಿದೆ. ಇದರಿಂದಾಗಿ 28ನೇ ವಾರ್ಡ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರನ್ನು ಪಕ್ಷ ಪರಿಗಣಿಸದಿದ್ದರಿಂದ ಅಸಮಾಧಾನಗೊಂಡು ಬಂಡಾಯವಾಗಿ ಸ್ಪರ್ಧಿಸಿದ್ದಾರೆ. 10ನೇ ವಾರ್ಡ್​ನಲ್ಲಿ ಉದಯ ಕಳೂರು ಬಂಡಾಯವಾಗಿ ಸ್ಪರ್ಧಿಸಿದ್ದಾರೆ. ನಗರ ಘಟಕ ಅಧ್ಯಕ್ಷ ಗಣಪತಿ ನಾಯ್ಕ ಸ್ಪರ್ಧಿಸಿರುವ 31ನೇ ವಾರ್ಡ್​ನಲ್ಲಿ ಪಕ್ಷದ ಪ್ರಮುಖರಾದ ಎ.ಪಿ. ನಾಯ್ಕ ಬಂಡಾಯವಾಗಿ ಸ್ಪರ್ಧಿಸಿದ್ದಾರೆ. ಇದರ ಹೊರತಾಗಿ ಕೆಲವೆಡೆ ಬಿಜೆಪಿ ಕಾರ್ಯಕರ್ತರು ಸ್ಪರ್ಧಿಸಿದ್ದರೂ ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆ ಇದೆ. ‘ಬಂಡಾಯ ನಿಂತವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇವೆ. ಅವರು ನಾಮಪತ್ರ ವಾಪಸ್ ಪಡೆಯುವ ವಿಶ್ವಾಸವಿದೆ’ ಎಂದು ನಗರ ಘಟಕ ಅಧ್ಯಕ್ಷ ಗಣಪತಿ ನಾಯ್ಕ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಇನ್ನು ಕಾಂಗ್ರೆಸ್ ಪಾಳಯದಲ್ಲಿ ಬಂಡಾಯ ಅಭ್ಯರ್ಥಿಗಳ ಸಮಸ್ಯೆ ತೀವ್ರವಾಗಿದೆ. ಮೀಸಲಾತಿಯಲ್ಲಿ ದಾಖಲೆಗಳು ಸಮರ್ಪಕವಾಗದೇ ನಾಮಪತ್ರ ತಿರಸ್ಕೃತವಾಗಬಹುದು ಎಂಬ ಮುನ್ನೆಚ್ಚರಿಕೆಯಾಗಿ ಪಕ್ಷದ ಪ್ರಮುಖರೇ ಇನ್ನೊಬ್ಬ ಕಾರ್ಯಕರ್ತರಿಂದ ನಾಮಪತ್ರ ನೀಡಿಸಿದ್ದರು. ಈಗ ಘೊಷಿತ ಅಭ್ಯರ್ಥಿಯ ನಾಮಪತ್ರ ಸ್ವೀಕೃತವಾದರೂ ಬದಲಿ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಲು ಒಪ್ಪದೇ ನಾಮಪತ್ರ ಕೊಡಿಸಿದವರು ಮುಜುಗರ ಎದುರಿಸುತ್ತಿದ್ದಾರೆ. ಕಸ್ತೂರಬಾ ನಗರದ 19ನೇ ವಾರ್ಡ್​ಗೆ ನಜೀರ್ ಸಾಬ್ ಅವರಿಗೆ ಪಕ್ಷ ಬಿ ಫಾರಂ ನೀಡಿದ್ದರೂ ಪ್ರಬಲ ಆಕಾಂಕ್ಷಿ ಮಧು ಬಿಲ್ಲವ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅವರ ಮನವೊಲಿಸುವ ಕಸರತ್ತು ಪಕ್ಷದ ನಾಯಕರಿಂದ ನಡೆದಿದೆ. ನಗರಸಭೆಯ ಪ್ರಭಾರಿ ಅಧ್ಯಕ್ಷೆಯಾಗಿ, ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿರುವ ಅನುಭವಿ ಅರುಣಾ ವೆರ್ಣೆಕರ್ 9ನೇ ವಾರ್ಡ್​ನ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ವನಿತಾ ಶೆಟ್ಟಿ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಅರುಣಾ, ನಾಮಪತ್ರ ವಾಪಸ್ ಪಡೆಯಲು ಒಪ್ಪುತ್ತಿಲ್ಲ. ಇನ್ನು 2ನೇ ವಾರ್ಡ್​ನಲ್ಲಿ ಹಿಂದಿನ ಅಧ್ಯಕ್ಷ ಪ್ರದೀಪ ಶೆಟ್ಟಿ ಅವರ ಬೆಂಬಲಿಗ ನೇತ್ರಾವತಿ ಬೋವಿವಡ್ಡರ್ ಕಾಂಗ್ರೆಸ್​ನ ಅಧಿಕೃತ ಅಭ್ಯರ್ಥಿ ಲಕ್ಷ್ಮವ್ವ ಬೋವಿವಡ್ಡರ್ ವಿರುದ್ಧ ಬಂಡಾಯ ನಾಮಪತ್ರ ಸಲ್ಲಿಸಿದ್ದಾರೆ. 1ನೇ ವಾರ್ಡ್​ನಲ್ಲಿ ವಿನುತಾ ಸಾವಂತ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೂ ಪ್ರದೀಪ ಶೆಟ್ಟಿ ಅವರ ಪತ್ನಿ ರಶ್ಮಿ ಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ. ಈ ಎಲ್ಲರನ್ನೂ ಸಂರ್ಪಸಿ ನಾಮಪತ್ರ ವಾಪಸ್ ಪಡೆಯುವಂತೆ ಕಾಂಗ್ರೆಸ್ ವರಿಷ್ಠರು ಒತ್ತಡ ಹೇರುತ್ತಿದ್ದಾರೆ.

ಕೈ- ಕಮಲದಲ್ಲಿ ಬಂಡಾಯದ ಬಾವುಟ! ಮುಂಡಗೋಡ ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಕೈಗೊಳ್ಳದ ಕೈ- ಕಮಲ ಪಕ್ಷಗಳ ಸದಸ್ಯರ ಬಗೆಗೆ ಅಸಮಾಧಾನಗೊಂಡ ಮತದಾರರು ಹೊಸಬರ ಆಯ್ಕೆಗೆ ಚಿಂತನೆ ನಡೆಸಿದ್ದಾರೆ.

ಈ ನಡುವೆ ಪಕ್ಷದ ಟಿಕೆಟ್ ಸಿಗದೆ ಅಸಮಾಧಾನಗೊಂಡು ಪಕ್ಷೇತರರಾಗಿ ಕಣದಲ್ಲಿರುವ ಅಭ್ಯರ್ಥಿಗಳ ಮನವೊಲಿಸುವುದು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರಿಗೆ ಹರಸಾಹಸವಾಗಿದೆ. ಸಾಮಾನ್ಯ ಮೀಸಲಾತಿ ಇರುವ ವಾರ್ಡ್​ಗಳಲ್ಲಿ ಬಂಡಾಯ ಅಭ್ಯರ್ಥಿಗಳ ಭರಾಟೆ ಜೋರಾಗಿದೆ. ಇದರಿಂದ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸುಲಭವಲ್ಲ ಎಂಬ ಮಾತಗಳು ಕೇಳಿಬರುತ್ತಿವೆ.

ವಾರ್ಡ್ ನಂ. 2, 3, 7 ಮತ್ತು 14ರಲ್ಲಿ ಸಾಮಾನ್ಯ ಮೀಸಲಾತಿ, ವಾರ್ಡ್ ನಂ. 9ರಲ್ಲಿ ಸಾಮಾನ್ಯ ಮಹಿಳೆ ಮೀಸಲಾತಿಯಿದೆ. ಈ ವಾರ್ಡ್​ಗಳಲ್ಲಿ ಬಹುತೇಕ ಕಾಂಗ್ರೆಸ್ ಹಾಗೂ ಬಿಜೆಪಿಯ ಬಂಡಾಯ ಅಭ್ಯರ್ಥಿಗಳ ಸೆಣಸಾಟ ನಡೆದಿದೆ. ಇನ್ನೊಂದೆಡೆ ಕಾಂಗ್ರೆಸ್​ನಿಂದ ಟಿಕೆಟ್ ಸಿಗದ ಅಭ್ಯರ್ಥಿಗಳು ಎರಡು ವಾರ್ಡ್​ಗಳಲ್ಲಿ ಬೇರೆ ಪಕ್ಷದಿಂದ ಟಿಕೆಟ್ ಪಡೆದು ಬಂಡಾಯದ ಬಾವುಟ ಹಾರಿಸಿದ್ದಾರೆ.

ಉಭಯ ಪಕ್ಷಗಳ ಹಿರಿಯ ಮುಖಂಡರು ಈಗಾಗಲೇ ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಪ್ರಯತ್ನ ನಡೆಸಿದ್ದಾರೆ. ಅವರ ಮಾತಿಗೆ ಮಣಿದು ಬಂಡಾಯ ಅಭ್ಯರ್ಥಿಗಳು ತೆಗೆದುಕೊಳ್ಳುವ ನಿರ್ಣಯ ಏನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಒಟ್ಟು 85 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 10 ವಾರ್ಡ್​ಗಳಲ್ಲಿ ಕಾಂಗ್ರೆಸ್​ನಿಂದ ಟಿಕೆಟ್ ಸಿಗದೆ 21 ಅಭ್ಯರ್ಥಿಗಳು ಬಂಡಾಯವೆದ್ದರೆ, ಬಿಜೆಪಿ ಟಿಕೆಟ್ ಸಿಗದೆ 7 ವಾರ್ಡ್​ಗಳಲ್ಲಿ 12 ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.