ಸಚಿನ ಸ್ಥಾನ ದೊರೆತ ಖುಷಿಗಿಂತ ನೋವಿದೆ ಎಂದ ವಿ. ಸೋಮಣ್ಣ; ಅನರ್ಹ ಶಾಸಕರ ತ್ಯಾಗದ ಬಗ್ಗೆ ಗೌರವವಿದೆ ಎಂದ ಅಶ್ವಥ್​ ನಾರಾಯಣ

ಬೆಂಗಳೂರೂ: ನನಗೆ ಸಚಿವ ಸ್ಥಾನ ದೊರೆತ ಖುಷಿಗಿಂತ ತುಂಬಾ ನೋವಿದೆ. ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ ಸಾಕಷ್ಟು ನಷ್ಟ ಆಗಿದೆ ಎಂದು ಗೋವಿಂದರಾಜ ನಗರ ಬಿಜೆಪಿ ಶಾಸಕ ವಿ.ಸೋಮಣ್ಣ ಅವರು ತಿಳಿಸಿದರು.

ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಾಕಷ್ಟು ಕೆಲಸ ಮಾಡುತ್ತೇವೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ತೊಡಗಿಸಿಕೊಳ್ಳುತ್ತೇವೆ. ಹೈಕಮಾಂಡ್ ನಮ್ಮ ಮೇಲಿಟ್ಟಿರುವ ನಿರೀಕ್ಷೆಯನ್ನು ಹುಸಿ ಮಾಡಲ್ಲ. ಅಭಿವೃದ್ದಿಯ ಬಗ್ಗೆ ಬಿಜೆಪಿಯಿಂದ ಕಲಿಯುವಂತೆ ಮಾಡುತ್ತೇವೆ ಎಂದು ತಿಳಿಸಿದರು.

ನಾಡಿನ ಸೇವೆ ಮಾಡಲು ನಾನು ಸದಾ ಸಿದ್ದನಿದ್ದೇನೆ
ಇನ್ನೊಂದೆಡೆ ಮಲ್ಲೇಶ್ವರಂನ ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಮಾತನಾಡಿ, ನನಗೆ ಸಚಿವ ಸ್ಥಾನಕ್ಕೆ ಅವಕಾಶ ಕೊಟ್ಟ ನಮ್ಮ‌ ನಾಯಕರಿಗೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದ ಹೇಳುತ್ತೇನೆ. ಈ ನಾಡಿನ ಸೇವೆ ಮಾಡಲು ನಾನು ಸದಾ ಸಿದ್ದನಿದ್ದೇನೆ ಎಂದು ಹೇಳಿದರು.

ತ್ಯಾಗ ಮಾಡಿದ ಅನರ್ಹ ಶಾಸಕರ ಬಗ್ಗೆ ಅಗೌರವ ಇಲ್ಲ
ಕಾಂಗ್ರೆಸ್​-ಜೆಡಿಎಸ್​ ಅವಕಾಶವಾದಿ ರಾಜಕಾರಣದಿಂದ ಬೇಸತ್ತು ಅನರ್ಹ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜ್ಯದ ಜನರು ಕೂಡ ಕಾಂಗ್ರೆಸ್​ ಅನ್ನು ದೂರವಿಟ್ಟರು. ನಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಬಿಡುತ್ತಿಲ್ಲ. ಜನರ ಭಾವನೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ನಿಲುವಿಗೆ ಬಂದು ಸ್ವಯಂಪ್ರೇರಿತರಾಗಿ ರಾಜೀನಾಮೆಯನ್ನು ಕೊಟ್ಟು, ಸಮ್ಮಿಶ್ರ ಸರ್ಕಾರವನ್ನು ತೆಗದುಹಾಕಲಿಕ್ಕೆ ಕಾರಣಕರ್ತರಾಗಿದ್ದಾರೆ. ಇಂತಹ ತ್ಯಾಗ ಮಾಡಿದ ಶಾಸಕರ ಬಗ್ಗೆ ನಮ್ಮ ಪಕ್ಷದಲ್ಲಿ ಅಗೌರವ ಇಲ್ಲ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *