ಆಸ್ಪತ್ರೆ ಸೇರಿದ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟ ಗೋವಾ ಸರ್ಕಾರ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್​ ಅವರ ಸಚಿವ ಸಂಪುಟದಿಂದ ಇಬ್ಬರು ಸಚಿವರನ್ನು ಕೈ ಬಿಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಸೋಮವಾರ ತಿಳಿಸಿದೆ.

ಬಿಜೆಪಿಯ ನಗರಾಭಿವೃದ್ಧಿ ಇಲಾಖೆ ಸಚಿವ ಫ್ರಾನ್ಸಿಸ್​ ಡಿಸೋಜಾ ಮತ್ತು ಇಂಧನ ಸಚಿವ ಪಾಂಡುರಂಗ ಮಡ್ಕೈಕರ್ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಬ್ಬರನ್ನೂ ಸಂಪುಟದಿಂದ ಕೈಬಿಡಲಾಗಿದೆ ಎಂದು ಕಚೇರಿಯ ಅಧಿಕೃತ ಮಾಹಿತಿ ತಿಳಿಸಿದೆ.

ಡಿಸೋಜಾ ಅವರು ಸದ್ಯ ಅಮೆರಿಕದ ಆಸ್ಪತ್ರೆಗೆ ದಾಖಲಾಗಿದ್ದು, ಮಡ್ಕೈಕರ್​ ಅವರು ಬ್ರೇನ್​ ಸ್ಟ್ರೋಕ್​ಗೆ ಒಳಗಾಗಿದ್ದು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರ ಬದಲಿಗೆ ಬಿಜೆಪಿ ಮುಖಂಡರಾದ ನೀಲೇಶ್​ ಕಾರ್ಬಲ್ ಮತ್ತು ಮಿಲಿಂದ್​ ನಾಯ್ಕ್​ ಅವರು ಇಂದು ಸಂಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ. ಮಿಲಿಂದ್​ ನಾಯ್ಕ್​ ಹಿಂದಿನ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರು. ನೀಲೇಶ್​ ಕಾರ್ಬಲ್ ಇದೇ ಮೊದಲ ಬಾರಿಗೆ ಮಂತ್ರಿಯಾಗಲಿದ್ದಾರೆ.

ಗೋವಾ ಸಿಎಂ ಮನೋಹರ್​ ಪರಿಕ್ಕರ್​ಗೆ ಚಿಕಿತ್ಸೆ ಮುಂದುವರಿಯುತ್ತಿದೆ. ಗೋವಾ ಮುಖ್ಯಮಂತ್ರಿಯಾಗಿ ಮನೋಹರ್​ ಪರಿಕ್ಕರ್​ ಅವರೇ ಮುಂದುವರಿಯಲಿದ್ದಾರೆ. ಅತಿ ಶೀಘ್ರವಾಗಿ ಸಚಿವ ಸಂಪುಟದಲ್ಲಿ ಬದಲಾವಣೆ ಮಾಡುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಭಾನುವಾರ ತಿಳಿಸಿದ್ದರು.