ಮತ್ತೆ ನಳಿನ್, ಶೋಭಾಗೆ ಟಿಕೆಟ್

ಮಂಗಳೂರು: ಲೋಕಸಭಾ ಚುನಾವಣೆಗೆ ಹಾಲಿ ಸಂಸದರನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿರುವ ಬಿಜೆಪಿ, ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರ ಹೆಸರುಗಳನ್ನು ಪ್ರಕಟಿಸಿದೆ. 2014ರ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಇವರಿಬ್ಬರೂ ಭಾರಿ ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

ಎರಡೂ ಕ್ಷೇತ್ರಗಳಿಂದ ಹಾಲಿ ಸಂಸದರಿಗೆ ಸ್ಪರ್ಧೆಗೆ ಅವಕಾಶ ನೀಡುವಂತೆ ಪಟ್ಟಿಯಲ್ಲಿ ಹೆಸರು ಸೇರಿಸಿ ರಾಜ್ಯ ಬಿಜೆಪಿ ರವಾನಿಸಿದ್ದು, ದೆಹಲಿಯಲ್ಲಿ ವರಿಷ್ಠರು ಇದನ್ನು ಅಂತಿಮಗೊಳಿಸಿದ್ದಾರೆ. ಇದರೊಂದಿಗೆ ಟಿಕೆಟ್ ಗೊಂದಲಗಳಿಗೆ ತೆರೆ ಬಿದ್ದಿದೆ.

ದ.ಕ. ಕ್ಷೇತ್ರದಲ್ಲಿ ನಳಿನ್ ಮೂರನೇ ಬಾರಿ ಹಾಗೂ ಉಡುಪಿಯಲ್ಲಿ ಶೋಭಾ ಎರಡನೇ ಬಾರಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದು, ಇಬ್ಬರಿಗೂ ಟಿಕೆಟ್ ನೀಡುವುದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಅಂತಿಮವಾಗಿ ಹಾಲಿ ಸಂಸದರಿಗೇ ಪಕ್ಷ ಮಣೆ ಹಾಕಿದೆ.

ಎರಡೂ ಕ್ಷೇತ್ರಗಳಲ್ಲಿ ಏ.18ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆ ಅವಧಿ ಈಗಾಗಲೇ ಆರಂಭವಾಗಿದ್ದು, ಬಿಜೆಪಿ ಅಭ್ಯ ರ್ಥಿಗಳ ನಾಮಪತ್ರ ಸಲ್ಲಿಕೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ಮಾರ್ಚ್ 26 ನಾಮಪತ್ರ ಸಲ್ಲಿಕೆ ಕೊನೇ ದಿನವಾಗಿದ್ದು, 27ರಂದು ಪರಿಶೀಲನೆ, 29ರಂದು ನಾಮಪತ್ರ ವಾಪಸ್ ಪಡೆಯಲು ಕೊನೇ ದಿನವಾಗಿದೆ. ಮೇ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ದ.ಕ. ಇತಿಹಾಸ: ದಕ್ಷಿಣ ಕನ್ನಡ ಕ್ಷೇತ್ರ (ಹಿಂದಿನ ಮಂಗಳೂರು) ಹೆಚ್ಚುಕಡಿಮೆ ಮೂರು ದಶಕಗಳಿಂದ ಬಿಜೆಪಿ ವಶದಲ್ಲಿದೆ. 1989ರಲ್ಲಿ ಜನಾರ್ದನ ಪೂಜಾರಿಯವರು ಸಂಸದರಾಗಿದ್ದುದೇ ಕೊನೆ. ನಂತರ ಸತತ ನಾಲ್ಕು ಬಾರಿ (1991, 1996, 1998, 1999) ವಿ.ಧನಂಜಯ ಕುಮಾರ್, 2004ರಲ್ಲಿ ಡಿ.ವಿ.ಸದಾನಂದಗೌಡರು ಆಯ್ಕೆಯಾಗಿದ್ದರು. ನಂತರ 2009, 2014ರಲ್ಲಿ ನಳಿನ್‌ಕುಮಾರ್ ಕಟೀಲು ಆಯ್ಕೆಯಾಗಿದ್ದರು. 2014ರ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಅವರನ್ನು 1, 43,709 ಮತಗಳ ಅಂತರದಿಂದ ನಳಿನ್ ಸೋಲಿಸಿದ್ದರು.

ಉಡುಪಿ ಇತಿಹಾಸ: ಉಡುಪಿ ಕ್ಷೇತ್ರದಲ್ಲಿ 1998ರಲ್ಲಿ ಬಿಜೆಪಿ ಖಾತೆ ತೆರೆದವರು ಐ.ಎಂ.ಜಯರಾಮ ಶೆಟ್ಟಿ. ಆದರೆ 1999ರಲ್ಲಿ ವಿನಯಕುಮಾರ್ ಸೊರಕೆ ಗೆಲುವು ಸಾಧಿಸುವ ಮೂಲಕ ಕ್ಷೇತ್ರ ಮತ್ತೆ ಕಾಂಗ್ರೆಸ್ ಪಾಲಾಗಿತ್ತು. 2004ರಲ್ಲಿ ಮನೋರಮಾ ಮಧ್ವರಾಜ್, 2009ರಲ್ಲಿ ಡಿ.ವಿ.ಸದಾನಂದ ಗೌಡರು ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ ನಂತರ 2012ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ ಗೆಲುವು ಸಾಧಿಸಿದರು. 2014ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಶೋಭಾ ಕರಂದ್ಲಾಜೆಯವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆಯವರನ್ನು 181,643 ಮತಗಳ ಮೂಲಕ ಸೋಲಿಸಿ ಆಯ್ಕೆಯಾದರು.

ಮತ್ತೆ ಸ್ಪರ್ಧಿಸಲು ಅವಕಾಶ ದೊರೆಯುವ ನಿರೀಕ್ಷೆ ಇತ್ತು. ಕಳೆದ ಎರಡು ಅವಧಿಯಲ್ಲಿ ಸಂಸದನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಸಂಸದನಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತದ್ದು ನನ್ನ ಭಾಗ್ಯ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಗೂ ಸಾಕಷ್ಟು ಸಮಯ ವಿನಿಯೋಗಿಸಿದ್ದೇನೆ. ಪಕ್ಷದ ಕಾರ್ಯಕರ್ತರ ಗೌರವಕ್ಕೆ ಚ್ಯುತಿಯಾಗದಂತೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ. ನನ್ನ ಸೇವೆಯನ್ನು ಹಿರಿಯರು ಗಮನಿಸಿ ಮತ್ತೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದಾರೆ.
|ನಳಿನ್‌ಕುಮಾರ್ ಕಟೀಲ್, ಸಂಸದ, ದ.ಕ.

ಉಡುಪಿ, ಚಿಕ್ಕಮಗಳೂರು ಕ್ಷೇತ್ರಕ್ಕೆ ಅಭ್ಯರ್ಥಿಯಾಗಿಸುವ ಮೂಲಕ ವಿಶ್ವಾಸವಿಟ್ಟು ಅವಕಾಶ ನೀಡಿದ್ದಾರೆ. ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿಯಿಂದ 300 ಸಂಸದರು ಗೆದ್ದು, ಒಗ್ಗಟ್ಟಾಗಿ ಬಿಜೆಪಿ ರಥ ಎಳೆಯುತ್ತೇವೆ. ನರೇಂದ್ರ ಮೋದಿಯವರನ್ನು ಮತ್ತೆ ಮಾಡುತ್ತೇವೆ. ಕ್ಷೇತ್ರದ ಜನತೆ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಸವಾಲಾಗಿ ಸ್ವೀಕರಿಸಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ, ಟಿಕೆಟ್‌ಬಯಸುವುದು ತಪ್ಪಲ್ಲ.
|ಶೋಭಾ ಕರಂದ್ಲಾಜೆ, ಸಂಸದೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರ

ಸಂಭಾವ್ಯರ ಪಟ್ಟಿಯಲ್ಲಿ ನನ್ನ ಹೆಸರು ಕೊನೆಯವರೆಗೂ ಮುಂಚೂಣಿಯಲ್ಲಿತ್ತು. ಕಾರ್ಯಕರ್ತರು, ಜನಪ್ರತಿನಿಧಿಗಳು ಎಲ್ಲರೂ ಜನಾಭಿಪ್ರಾಯ ಮೂಡಿಸಿದ್ದಾರೆ. ಇದು ನನಗೆ ಚುನಾವಣೆಯ ಗೆಲುವು ಸೋಲಿಗಿಂತಲೂ ಮುಖ್ಯ. ಇದುವರೆಗೂ ಜನರೊಂದಿಗೆ ಇದ್ದವನು ನಾನು, ಮುಂದೆಯೂ ಜನರೊಂದಿಗೇ ಇರುತ್ತೇನೆ. ಪಕ್ಷಾಂತರ ಮಾಡುವುದಿಲ್ಲ. ಪಕ್ಷದ ಪರ, ಅಧಿಕೃತ ಅಭ್ಯರ್ಥಿಯ ಪರ ಕೆಲಸ ಮಾಡುತ್ತೇನೆ.
|ಜಯಪ್ರಕಾಶ್ ಹೆಗ್ಡೆ, ಬಿಜೆಪಿ ಮುಖಂಡ