ಸಂಘಟನೆಯಲ್ಲಿ ರಾಜ್ಯ ಬಿಜೆಪಿಗೆ ಪದೋನ್ನತಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕವಾಗಿ 25 ಸಂಸದರನ್ನು ಕರ್ನಾಟಕದಲ್ಲಿ ಹೊಂದುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸಿರುವ ರಾಜ್ಯ ಬಿಜೆಪಿಗೆ ಇದೀಗ ಪದೋನ್ನತಿ ಸಿಕ್ಕಿದೆ. ಬಿಜೆಪಿ ಸಂಘಟನಾ ವ್ಯವಸ್ಥೆಯಲ್ಲಿ ಮೊದಲ ಹಂತಕ್ಕೆ ಕರ್ನಾಟಕ ಏರಿದ್ದು, ಮಂಡಲ ಮಟ್ಟದಿಂದ ರಾಜ್ಯಮಟ್ಟದವರೆಗೆ 6 ಸಾವಿರ ಹೆಚ್ಚುವರಿ ಪ್ರಮುಖ ಪದಾಧಿಕಾರಿಗಳಾಗಲು ಅವಕಾಶ ಸಿಗಲಿದೆ.

ಬಿಜೆಪಿ ಸಂವಿಧಾನದ ವ್ಯವಸ್ಥೆ: ವಿವಿಧ ರಾಜ್ಯಗಳ ಸಂಘಟನೆ ನಿರ್ವಹಿಸಲು ಬಿಜೆಪಿ ಸಂವಿಧಾನದಲ್ಲಿ ವಿಂಗಡಣೆ ಮಾಡಲಾಗಿದೆ. ರಾಷ್ಟ್ರದಿಂದ ಗ್ರಾಮದವರೆಗೆ ಒಟ್ಟು 7 ಹಂತಗಳಲ್ಲಿ ಬಿಜೆಪಿ ಸಂಘಟನೆ ಇದೆ. ಇದರ ಪ್ರಕಾರ ಮೂರು ಅಥವಾ ಅದಕ್ಕಿಂತ ಕಡಿಮೆ ಸಂಸದರನ್ನು ಹೊಂದುವ ರಾಜ್ಯವನ್ನು ಒಂದನೇ ವರ್ಗ, 4ರಿಂದ 20 ಸಂಸದರನ್ನು ಹೊಂದುವ ರಾಜ್ಯವನ್ನು ಎರಡನೇ ವರ್ಗ ಹಾಗೂ 20ಕ್ಕಿಂತ ಹೆಚ್ಚು ಸಂಸದರಿರುವ ರಾಜ್ಯವನ್ನು ಮೂರನೇ ವರ್ಗ ಎಂದು ವಿಂಗಡಿಸಲಾಗಿದೆ. ರಾಜ್ಯ ಬಿಜೆಪಿ ಇತಿಹಾಸದಲ್ಲಿ 19 ಸಂಸದರನ್ನು ಹೊಂದಿದ್ದೇ ಹೆಚ್ಚು. ಈಗ 20 ದಾಟಿರುವ ಕಾರಣ ಮೂರನೇ ವರ್ಗಕ್ಕೆ ರಾಜ್ಯ ಬಿಜೆಪಿ ಪದೋನ್ನತಿ ಪಡೆದಿದೆ.

ಮಂಡಲದಿಂದ ರಾಜ್ಯದವರೆಗೆ: ಪ್ರತಿ ವಿಧಾನಸಭಾವಾರು ಬಿಜೆಪಿ ಸಮಿತಿಗಳಲ್ಲಿ ಇಲ್ಲಿಯವರೆಗೆ 45 ಇದ್ದ ಸದಸ್ಯರ ಸಂಖ್ಯೆ ಈಗ 60ಕ್ಕೆ ಹೆಚ್ಚಾಗಲಿದೆ. ಎಸ್​ಸಿ-ಎಸ್​ಟಿ ಸದಸ್ಯರ ಸಂಖ್ಯೆ 3ರಿಂದ 4ಕ್ಕೆ, ಮಹಿಳಾ ಸದಸ್ಯರ ಸಂಖ್ಯೆ 15ರಿಂದ 20ಕ್ಕೆ, ಉಪಾಧ್ಯಕ್ಷರ ಸಂಖ್ಯೆ 4ರಿಂದ 6ಕ್ಕೆ ಹೆಚ್ಚಲಿದೆ. ಜಿಲ್ಲಾ ಸಮಿತಿಗಳಲ್ಲಿರುವ 66 ಸದಸ್ಯರ ಸಂಖ್ಯೆ 90ಕ್ಕೆ ಹೆಚ್ಚಲಿದೆ. ಮಹಿಳಾ ಸದಸ್ಯರ ಸಂಖ್ಯೆ 22ರಿಂದ 30ಕ್ಕೆ, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿ ಸಂಖ್ಯೆ ತಲಾ 6ರಿಂದ 8ಕ್ಕೆ ಹೆಚ್ಚಲಿದೆ. ರಾಜ್ಯ ಕಾರ್ಯಕಾರಿಣಿಯಲ್ಲೂ ಇದು ಪ್ರಭಾವ ಬೀರಲಿದೆ. ಒಟ್ಟು ಸದಸ್ಯರ ಸಂಖ್ಯೆ 90ರಿಂದ 105ಕ್ಕೆ ಏರಿಕೆ ಆಗಲಿದೆ. ಎಸ್​ಸಿ-ಎಸ್​ಟಿ ಸದಸ್ಯರ ಸಂಖ್ಯೆ 7ರಿಂದ 9ಕ್ಕೆ ಹೆಚ್ಚಲಿದೆ. ಮಂಡಲ ಮಟ್ಟದಲ್ಲಿ ಹೆಚ್ಚುವರಿಯಾಗಿ ಸುಮಾರು 4 ಸಾವಿರ, ಜಿಲ್ಲಾಮಟ್ಟದಲ್ಲಿ 1,200 ಹಾಗೂ ರಾಜ್ಯಮಟ್ಟದಲ್ಲಿ 22 ಹೆಚ್ಚುವರಿ ಅವಕಾಶ ಸಿಗಲಿದೆ.

ಹೊಸ ಸಮಿತಿ ರಚನೆ: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ 3 ವರ್ಷ ಪೂರೈಸಿರುವ ಬಿ.ಎಸ್. ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಸಿಎಂ ಸ್ಥಾನ ಅಲಂಕರಿಸಿದರೆ ಸಹಜವಾಗಿಯೇ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸಬೇಕು. ಯಡಿಯೂರಪ್ಪ ಅವರೇ ಎರಡನೇ ಅವಧಿಗೆ ಮುಂದುವರಿಯಬೇಕು ಎಂಬುದು ಕೆಲವರ ಒತ್ತಾಯ. ರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯವಾಗಿದ್ದು, ಯಾವುದೇ ಸಂದರ್ಭದಲ್ಲೂ ರಾಜ್ಯದಿಂದ ಮಂಡಲ ಮಟ್ಟದವರೆಗೆ ಹೊಸ ಸಮಿತಿಗಳನ್ನು ರಚಿಸಬೇಕಿದೆ. ಈಗ ಮೂರನೇ ವರ್ಗಕ್ಕೆ ಪದೋನ್ನತಿ ಆಗಿರುವ ಕಾರಣ ಹೆಚ್ಚಿನ ಕಾರ್ಯಕರ್ತರು, ಸ್ಥಳೀಯ ನಾಯಕರಿಗೆ ಸಂಘಟನೆಯಲ್ಲಿ ಅವಕಾಶಗಳು ಸಿಗುತ್ತವೆ. ರಾಷ್ಟ್ರ ಮಟ್ಟದಲ್ಲೂ ಕರ್ನಾಟಕ ಬಿಜೆಪಿ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ರಾಜ್ಯ ನಾಯಕರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.

ಸಂಘಟನಾ ವ್ಯವಸ್ಥೆಯಲ್ಲಿ ಬಿಜೆಪಿ ರಾಜ್ಯ ಘಟಕ ಪದೋನ್ನತಿ ಹೊಂದಿದ್ದರಿಂದ ಪಕ್ಷ ಸಂಘಟನೆಗೆ ಸಹಾಯವಾಗುತ್ತದೆ. ಸಾಕಷ್ಟು ಶಕ್ತಿವಂತರು ಈ ಬಾರಿ ಗೆದ್ದಿದ್ದಾರೆ, ಸಂಘಟನೆ ಬೆಳೆದಿದೆ. ಕೇಂದ್ರ ಹಾಗೂ ರಾಜ್ಯದ ಸಂಘಟನೆಯಲ್ಲಿ ಯಾವ ಬದಲಾವಣೆ ಆಗಲಿದೆ ನೋಡೋಣ. ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಲು ಪ್ರಯತ್ನಿಸುತ್ತೇವೆ.

| ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ