ಅಳುವುದರಲ್ಲಿ ಕಾಲಕಳೆಯುತ್ತಿರುವ ಸಿಎಂ

ಬಾಳೆಹೊನ್ನೂರು: ರಾಜ್ಯದಲ್ಲಿ ಸಿಎಂಗೆ ಆಳ್ವಿಕೆ ನಡೆಸಲು ಅಧಿಕಾರ ಕೊಟ್ಟರೆ ಅವರು ಅಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕ್ಷೇತ್ರಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ದೇಶಾದ್ಯಂತ ನಡೆದ ಎಲ್ಲ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಎನ್​ಡಿಎ ಮೈತ್ರಿ ಕೂಟಕ್ಕೆ ಸ್ಪಷ್ಟ ಬಹುಮತ ಲಭಿಸಿದೆ. ಕಳೆದ ಬಾರಿ ರಾಜ್ಯದಲ್ಲಿ 17 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದ್ದು, ಈ ಬಾರಿ ಇನ್ನೂ ಹೆಚ್ಚಿನ ಐದಾರು ಸ್ಥಾನ ಗೆಲ್ಲುವುದು ಖಚಿತ ಎಂದು ತಿಳಿಸಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್​ನವರು ಅಭ್ಯರ್ಥಿಯನ್ನು ಕಾಂಗ್ರೆಸ್​ನಿಂದ ಸಾಲ ತೆಗೆದುಕೊಂಡು ಬಂದಿದ್ದಾರೆ. ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರ ಶಾಲಿನಲ್ಲಿ ಹಸ್ತ ಮತ್ತು ತೆನೆ ಹೊತ್ತ ಮಹಿಳೆಯ ಚಿಹ್ನೆಯಿದ್ದು, ಚುನಾವಣೆ ನಂತರ ಯಾವ ಚಿಹ್ನೆ ಅವರ ಬಳಿ ಉಳಿಯಲಿದೆ ಎಂಬುದು ಪ್ರಶ್ನೆಯಾಗಿದೆ ಎಂದು ಛೇಡಿಸಿದರು.

2014ರಲ್ಲಿ ದೇಶದಲ್ಲಿ ನರೇಂದ್ರ ಮೋದಿ ಹದಗೆಟ್ಟಿರುವ ಆಡಳಿತದ ಸುಧಾರಣೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದರು. ಆದರೆ ಇಂದು ಅಭಿವೃದ್ಧಿಯ ಆಧಾರದಲ್ಲಿ ಚುನಾವಣೆಗೆ ಹೊರಟಿದ್ದೇವೆ. 2022ರ ವೇಳೆಗೆ ದೇಶದಲ್ಲಿ ಪ್ರತಿ ಮನೆಗೂ ಗ್ಯಾಸ್ ಸಂಪರ್ಕ ವಿದ್ಯುತ್, ಇಂಟರ್​ನೆಟ್, ಶೌಚಗೃಹ ಸೌಲಭ್ಯ ಕಲ್ಪಿಸುವ ಸಂಕಲ್ಪವನ್ನು ಮೋದಿ ಕೈಗೊಂಡಿದ್ದು, ಅದನ್ನು ಪೂರೈಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.

ಕಾಂಗ್ರೆಸ್ ಹಗರಣ ಎಬಿಸಿಡಿ ಚಾರ್ಟ್: ದೇಶದಲ್ಲಿ ಸ್ವಾತಂತ್ರ್ಯಂತರ ಅಧಿಕಾರ ನಡೆಸಿದ ಕಾಂಗ್ರೆಸ್ ಹಗರಣಗಳು ಶಾಲೆಯಲ್ಲಿ ಹಾಕಿರುವ ಎಬಿಸಿಡಿ ಚಾರ್ಟ್​ನಂತಿವೆ ಎಂದು ಸಂತೋಷ್ ಜೀ ಹೇಳಿದರು. ಬುಧವಾರ ಉಡಾವಣೆ ಮಾಡಿರುವ ಎ-ಸ್ಯಾಟ್ ಕ್ಷಿಪಣಿ ಕುರಿತು ಮಲ್ಲಿಕಾರ್ಜುನ ಖರ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಹಲವು ಇಂತಹ ಕ್ಷಿಪಣಿ ಉಡಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಅದು ಅವರ ಮನೆಯಲ್ಲಿ ಮಕ್ಕಳು ಬಿಡುವ ಪಟಾಕಿ, ರಾಕೆಟ್​ಗಳು ಇರಬೇಕು ಎಂದು ಲೇವಡಿ ಮಾಡಿದರು. ಇಂತಹ ಕ್ಷಿಪಣಿಗಳನ್ನು ಉಡಾವಣೆ ಮಾಡಲು ಗುಂಡಿಗೆ ಇರಬೇಕು. ಅದು ನರೇಂದ್ರ ಮೋದಿಗಿದೆ. ಮೋದಿಯವರು ಯಾವುದೇ ಕಾರ್ಯಕ್ಕೆ ಅಡಿಗಲ್ಲು ಹಾಕಿದರೆ ಕೆಲ ದಿನಗಳಲ್ಲಿ ಅದು ಕಾರ್ಯಗತವಾಗಿ ಅದು ಅವರಿಂದಲೇ ಉದ್ಘಾಟನೆಯಾಗುತ್ತದೆ. ಆದರೆ ದೇವೇಗೌಡರು ಅಡಿಗಲ್ಲು ಹಾಕಿದರೆ ಅದು ಆರಂಭವಾಗುವುದೇ ಇಲ್ಲ ಎಂದು ವ್ಯಂಗ್ಯವಾಡಿದರು.