Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಕಾಶ್ಮೀರದಲ್ಲಿ ಮೈತ್ರಿ ಮುರಿದ ಬಿಜೆಪಿ

Tuesday, 19.06.2018, 3:07 PM       No Comments

<<ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್​>>

ನವದೆಹಲಿ: ಜಮ್ಮು- ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ಅವರ ನೇತೃತ್ವದ ಪಿಡಿಪಿ (ಪೀಪಲ್​ ಡೆಮಾಕ್ರೆಟಿಕ್​ ಪಾರ್ಟಿ) ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಮಂಗಳವಾರ ಹಿಂತೆಗೆದುಕೊಂಡಿದೆ.

ಬಿಜೆಪಿಯಿಂದ ಬೆಂಬಲ ವಾಪಸ್​ ಪಡೆಯುವ ನಿರ್ಧಾರ ಹೊರ ಬೀಳುತ್ತಿದ್ದಂತೆ ಅತ್ತ ರಾಜ್ಯಪಾಲರನ್ನು ಭೇಟಿಯಾದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಪಿಡಿಪಿಗೆ ನೀಡಿದ್ದ ಬೆಂಬಲ ಹಿಂಪಡೆಯುತ್ತಿರುವ ಕುರಿತು ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್​ ಮಾಧವ್​, ಹಲವು ವಿಚಾರಗಳನ್ನು ತಿಳಿಸಿದರು.

“ಬೆಂಬಲ ಹಿಂತೆಗೆದುಕೊಳ್ಳಲು ಬಿಜೆಪಿ ತೀರ್ಮಾನ ಕೈಗೊಂಡಿದೆ. ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜತೆ ಹೋಗುವುದು ಸಮರ್ಥನೀಯವಲ್ಲ ಎಂಬ ನಿರ್ಧಾರಕ್ಕೆ ಬಿಜೆಪಿ ಬಂದಿದೆ. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ, ಅಶಾಂತಿ, ಮೂಲಭೂತವಾದ ಹೆಚ್ಚಳವಾಗಿದೆ. ಜನರ ಮೂಲಭೂತ ಹಕ್ಕುಗಳು ಅಪಾಯದ ಅಂಚಿನಲ್ಲಿವೆ. ಇತ್ತೀಚೆಗೆ ನಡೆದ ಪತ್ರಕರ್ತ ಶುಜಾತ್​ ಬುಕಾರಿ ಹತ್ಯೆ ಇದಕ್ಕೆ ಇದಕ್ಕೆ ಸ್ಪಷ್ಟ ಉದಾಹರಣೆ. ಭಾರತದ ಭದ್ರತೆ ಮತ್ತು ಭಾವೈಕ್ಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ಬಳಿ ಇದ್ದ ಅಧಿಕಾರವನ್ನು ಹಿಂದಿರುಗಿಸಿದ್ದೇವೆ,” ಎಂದು ಮಾಧವ್​ ತಿಳಿಸಿದ್ದಾರೆ.

“ಜಮ್ಮು ಕಾಶ್ಮೀರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸಕಲ ನೆರವನ್ನು ನೀಡಿದೆ. ಪಾಕ್​ನಿಂದ ನಡೆಯುತ್ತಿದ್ದ ಕದನ ವಿರಾಮ ಉಲ್ಲಂಘನೆಯನ್ನು ಕೊನೆಗಾಣಿಸಲು ಶತಪ್ರಯತ್ನ ನಡೆಸಿದೆ. ಆದರೆ, ಪಿಡಿಪಿ ಜಮ್ಮು ಕಾಶ್ಮೀರದ ಜನರಿಗೆ ನೀಡಿದ್ದ ಭರವಸೆಗಳನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರದಲ್ಲಿ ನಮ್ಮ ಪ್ರತಿನಿಧಿಗಳು ಪಿಡಿಪಿಯಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ,” ಎಂದೂ ಅವರು ಹೇಳಿದ್ದಾರೆ.

ಅಲ್ಲದೆ, ರಾಷ್ಟ್ರಪತಿ ಆಡಳಿತ ಜಾರಿಯಾದರೂ, ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಕೇಂದ್ರ ಸರ್ಕಾರ ಕಣಿವೆ ರಾಜ್ಯದಲ್ಲಿ ಮುಂದುವರಿಸಲಿದೆ, ಎಂದೂ ರಾಮ್​ ಮಾಧವ್​ ಸ್ಪಷ್ಟಪಡಿಸಿದ್ದಾರೆ.

ಜನಾಭಿಪ್ರಾಯವನ್ನು ಗೌರವಿಸಲು ನಾವು ಪಿಡಿಪಿಗೆ ಬೆಂಬಲ ನೀಡಿದ್ದೆವು. ಒಂದು ವೇಳೆ ನಾವು ಸಮ್ಮನಿದ್ದಿದ್ದರೆ ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿರುತ್ತಿತ್ತು. ಕೇವಲ ಜನಾಭಿಪ್ರಾಯಕ್ಕಾಗಿ ನಾವು ಸರ್ಕಾರ ರಚನೆ ಮಾಡಿದ್ದೆವು ಎಂದು ಅವರು ರಾಮ್​ ಮಾಧವ್​ ತಿಳಿಸಿದರು.

ಬಿಜೆಪಿ ನಿರ್ಧಾರಕ್ಕೆ ಬೇಸರವೇನಿಲ್ಲ. ಆದರೆ, ಮುನ್ಸೂಚನೆಯನ್ನೇ ನೀಡಿಲ್ಲ
ಇನ್ನು ಬಿಜೆಪಿಯ ನಿರ್ಧಾರದ ಬಗ್ಗೆ ಮಾತನಾಡಿರುವ ಪಿಡಿಪಿ ವಕ್ತಾರ ರಫಿ ಅಹ್ಮದ್​, ಬಿಜೆಪಿಯೊಂದಿಗೆ ಸೇರಿ ಸರ್ಕಾರ ನಡೆಸಲು ನಾವು ಸಾಕಷ್ಟು ಪರಿಶ್ರಮ ಪಟ್ಟಿದ್ದೇವೆ. ಆದರೆ, ಈ ಬೆಳವಣಿಗೆ ನಡೆಯಲೇಬೇಕಿತ್ತು. ನಮಗೆ ಬಿಜೆಪಿ ನಿರ್ಧಾರದಿಂದ ಆಶ್ಚರ್ಯವಾಗಿದೆ. ಯಾಕೆಂದರೆ ಅವರು ನಮಗೆ ಮುನ್ಸೂಚನೆಯನ್ನೇ ನೀಡಿಲ್ಲ ಎಂದಿದ್ದಾರೆ.

ನಮ್ಮ ಬೆಂಬಲ ಇಲ್ಲ ಎಂದ ಕಾಂಗ್ರೆಸ್​
ಬಿಜೆಪಿ ಬೆಂಬಲ ಹಿಂಪಡೆದ ನಿರ್ಧಾರ ಒಳ್ಳೆಯದೇ ಎಂದು ನಾವು ನಂಬಿದ್ದೇವೆ. ಆಗಿದ್ದೆಲ್ಲವೂ ಒಳ್ಳೆಯದಕ್ಕೆ. ಈ ಮೂರು ವರ್ಷಗಳಲ್ಲಿ ಜಮ್ಮು ಕಾಶ್ಮೀರವನ್ನು ಬಿಜೆಪಿ ಹಾಳುಗೆಡವಿದೆ. ಈಗ ಸರ್ಕಾರದಿಂದ ಹೊರ ಬಂದಿದೆ. ಸರ್ಕಾರ ರಚನೆಯಾದಾಗಿನಿಂದ ಅಲ್ಲಿ ಸಾವಿರಾರು ನಾಗರಿಕರು ಭದ್ರತೆ ಕೊರತೆಯಿಂದ ಜೀವತೆತ್ತಿದ್ದಾರೆ. ಪಿಡಿಪಿಗೆ ಕಾಂಗ್ರೆಸ್ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್​ ಸ್ಪಷ್ಟಪಡಿಸಿದರು.

ನಮಗೆ ಬಹುಮತ ಇಲ್ಲ, ನಾವು ಸರ್ಕಾರ ರಚನೆ ಮಾಡಲ್ಲ
ಕ್ಷಿಪ್ರ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದ ನ್ಯಾಷನಲ್​ ಕಾನ್ಫರೆನ್ಸ್​ ಮುಖ್ಯಸ್ಥ ಒಮರ್​ ಅಬ್ದುಲ್ಲಾ, ನಮಗೆ ಬಹುಮತ ಇಲ್ಲ. ನಾವು ಸರ್ಕಾರ ರಚನೆ ಮಾಡಲು ಪ್ರಸ್ತಾವನೆ ಸಲ್ಲಿಸಿಲ್ಲ. ಯಾವ ಪಕ್ಷದವರನ್ನೂ ಸಂಪರ್ಕಿಸಿಲ್ಲ. ಇಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲದೇ ಇರುವ ಕಾರಣಕ್ಕೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿ ಮಾಡುವಂತೆ ನಾನು ಮನವಿ ಮಾಡಿದ್ದೇನೆ ಎಂದು ತಿಳಿಸಿದದ್ದಾರೆ.

89 ಸದಸ್ಯ ಬಲದ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಹೊಂದಿದ್ದು, ಪಿಡಿಪಿ 28 ಸ್ಥಾನಗಳನ್ನು ಹೊಂದಿದೆ. ಸರ್ಕಾರ ರಚಿಸಲು ಬೇಕಾದ 45 ಸ್ಥಾನಗಳು ಯಾರಿಗೂ ಲಭಿಸದ ಹಿನ್ನೆಲೆಯಲ್ಲಿ ಪಿಡಿಪಿ ಮತ್ತು ಬಿಜೆಪಿ ಸರ್ಕಾರ ರಚನೆ ಮಾಡಿದ್ದವು.

ಜಮ್ಮು ಕಾಶ್ಮೀರ ಬಲಾಬಲ

 • ಒಟ್ಟು ಸ್ಥಾನ- 89
 • ಸರ್ಕಾರ ರಚನೆಗೆ ಬೇಕಿರುವ ಸಂಖ್ಯೆ- 45
 • ಪಿಡಿಪಿ – 28
 • ಬಿಜೆಪಿ -25
 • ನ್ಯಾಷನಲ್​ ಕಾನ್ಫರೆನ್ಸ್​ – 15
 • ಕಾಂಗ್ರೆಸ್​- 12
 • ಇತರರು – 7

ಸಾಧ್ಯತೆಗಳು

 • ಜಮ್ಮು ಕಾಶ್ಮೀರದಲ್ಲಿ ಸದ್ಯ ಸರ್ಕಾರ ರಚಿಸಲು ಯಾವುದೇ ಪಕ್ಷಕ್ಕೆ 45 ಶಾಸಕರ ಸಂಖ್ಯೆ ಅಗತ್ಯ.
 • 28 ಶಾಸಕರನ್ನು ಹೊಂದಿರುವ ಪಿಡಿಪಿಗೆ 17 ಮಂದಿಯ ಬೆಂಬಲ ಬೇಕು.
 • 20 ಶಾಸಕರನ್ನು ಹೊಂದಿರುವ ಬಿಜೆಪಿಗೆ-25 ಶಾಸಕರ ಅಗತ್ಯವಿದೆ.
 • ಈ ಎರಡೂ ಪಕ್ಷಗಳೂ ಬೇರೆ ಬೇರೆ ಪಕ್ಷಗಳಿಂದ ಬೆಂಬಲ ಪಡೆದರೂ, ಪಕ್ಷೇತರರ ಬೆಂಬಲವನ್ನೂ ಪಡೆಯಬೇಕಾಗುತ್ತದೆ.
 • ಈಗಾಗಲೇ ಪಿಡಿಪಿಗೆ ನಮ್ಮ ಬೆಂಬಲ ಇಲ್ಲ ಎಂದು ಕಾಂಗ್ರೆಸ್​ ಘೋಷಿಸಿದೆ. ಹೀಗಾಗಿ ಪಿಡಿಪಿ-ಕಾಂಗ್ರೆಸ್​- ಪಕ್ಷೇತರರ ಸರ್ಕಾರ ರಚನೆ ಸಾಧ್ಯತೆ ಕ್ಷೀಣ.
 • 15 ಶಾಸಕರನ್ನು ಹೊಂದಿರುವ ನ್ಯಾಷನಲ್​ ಕಾನ್ಫರೆನ್ಸ್​ ಪಿಡಿಪಿಗೆ ಬೆಂಬಲ ನೀಡಿದರೂ ಕೆಲ ಪಕ್ಷೇತರ ಶಾಸಕರ ಬೆಂಬಲವೂ ಬೇಕಾಗುತ್ತದೆ.
 • ಒಂದು ವೇಳೆ ಯಾವುದೇ ಪಕ್ಷ ಸರ್ಕಾರ ರಚಿಸಲು ಹಕ್ಕು ಮಂಡಿಸದೇ ಹೋದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಲಿದೆ. ನಂತರ ಚುನಾವಣೆ ಎದುರಾಗಲಿದೆ.

 

Leave a Reply

Your email address will not be published. Required fields are marked *

Back To Top