ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ 4 ಪಟ್ಟಣ ಪಂಚಾಯಿತಿ ಹಾಗೂ ಒಂದು ಪುರಸಭೆ ಬಿಜೆಪಿ ತೆಕ್ಕೆಗೆ ಬರಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬಿಜೆಪಿ 4 ಪಪಂಗೆ 44 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಶೃಂಗೇರಿ ಕ್ಷೇತ್ರದ ಶೃಂಗೇರಿ, ಕೊಪ್ಪ, ಎನ್.ಆರ್.ಪುರದಲ್ಲಿ 33 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದು ಎಲ್ಲ ಕಡೆಗಳಲ್ಲಿ ನಮ್ಮ ಅಭ್ಯರ್ಥಿಗಳು ಪೂರ್ಣ ಪ್ರಮಾಣದಲ್ಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎನ್.ಆರ್.ಪುರ ಹಾಗೂ ಕೊಪ್ಪದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಶೃಂಗೇರಿಯಲ್ಲಿ 9 ಹೊಸ ಅಭ್ಯರ್ಥಿಗಳು ಹಾಗೂ 2 ಹಾಲಿ ಸದಸ್ಯರಿಗೆ ಅವಕಾಶ ನೀಡಲಾಗಿದೆ. ಶೃಂಗೇರಿ ಕ್ಷೇತ್ರದ ಮೂರು ಪಪಂಗಳಲ್ಲಿ ನಮ್ಮ ಪಕ್ಷ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ, ಖಾಂಡ್ಯ ಹೋಬಳಿ ಮಾಜಿ ಅಧ್ಯಕ್ಷ ಎಂ.ಜೆ.ಚಂದ್ರಶೇಖರ್, ಯುವ ಮೋರ್ಚಾ ತಾಲೂಕು ಅಧ್ಯಕ್ಷ ರಚನ್ ಹುಯಿಗೆರೆ, ಶಿವಶಂಕರ್, ಸವಿನ್ ಹುಯಿಗೆರೆ, ಸದಾಶಿವ ಮತ್ತಿತರರಿದ್ದರು.
ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟರಿಗೆ ಅವಕಾಶ: ಎನ್.ಆರ್.ಪುರ ಪಪಂ ಚುನಾವಣೆಗೆ ಪಕ್ಷದಿಂದ ಮೂರು ಸಾಮಾನ್ಯ ಸ್ಥಾನಕ್ಕೆ ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಕ್ಷೇತ್ರದಲ್ಲೂ ದಲಿತರ ಸ್ಪರ್ಧೆಗೆ ಟಿಕೆಟ್ ಕೊಟ್ಟಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಪರ ಅಲೆ ಕಂಡುಬರುತ್ತಿದೆ ಎಂದು ಜೀವರಾಜ್ ತಿಳಿಸಿದರು.
ಮೇ 23ಕ್ಕೂ ಮೊದಲೇ ಸರ್ಕಾರ ಪತನ: ರಾಜ್ಯದ ಜನರಿಗೆ ಸಮ್ಮಿಶ್ರ ಸರ್ಕಾರ ಬೇಡವಾಗಿದ್ದು, ಮೇ 23ಕ್ಕೂ ಮೊದಲೇ ರಾಜ್ಯ ಸರ್ಕಾರ ಪತನವಾಗುವ ಸೂಚನೆ ಕಂಡುಬರುತ್ತಿದೆ ಎಂದು ಡಿ.ಎನ್.ಜೀವರಾಜ್ ಹೇಳಿದರು.
ಮೇ 19ರಂದು ಕುಂದಗೋಳ ಹಾಗೂ ಚಿಂಚೋಳಿ ಉಪಚುನಾವಣೆಗಳನ್ನು ಮುಂದಿಟ್ಟುಕೊಂಡು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ಸರ್ಕಾರ ವಿಸರ್ಜನೆಗೆ ಸಲಹೆ ನೀಡಿದ್ದಾರೆ. ಈ ಸರ್ಕಾರದಿಂದ ಜನರಿಗೆ ನ್ಯಾಯ ಸಿಗುವುದಿಲ್ಲವೆಂದು ಜೆಡಿಎಸ್ ಮುಖಂಡರೇ ಹೇಳುತ್ತಿದ್ದಾರೆ. ಮುಂದೆ ಸರ್ಕಾರ ಉರುಳಿದರೆ ಚುನಾವಣೆ ಹೇಗೆ ನಡೆಸಬೇಕೆಂಬುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ರೆಸಾರ್ಟ್ನಲ್ಲಿ ಕುಳಿತು ಪಕ್ಷದ ಮುಖಂಡರೊಂದಿಗೆ ರ್ಚಚಿಸುತ್ತಿದ್ದಾರೆ ಎಂದರು.
ಕಳಪೆ ಕಾಮಗಾರಿ ತನಿಖೆಗೆ ಒತ್ತಾಯ: ಶೃಂಗೇರಿ ಕ್ಷೇತ್ರದಲ್ಲಿ ಒಂದು ವರ್ಷದಿಂದ ನಡೆಯುತ್ತಿರುವ ಎಲ್ಲ ಕಾಮಗಾರಿಗಳು ಕಳಪೆಯಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಸಂಪೂರ್ಣ ತನಿಖೆ ನಡೆಸಬೇಕು ಎಂದು ಜೀವರಾಜ್ ಒತ್ತಾಯಿಸಿದರು.
ಪ್ರಕೃತಿ ವಿಕೋಪ ನಿಧಿಯಡಿ ಮಂಜೂರಾಗಿರುವ ಕಾಮಗಾರಿಗಳನ್ನು ಪೀಸ್ವರ್ಕ್ ಆಗಿ ನೀಡಲಾಗಿದೆ. ಪ್ರಕೃತಿ ವಿಕೋಪದಡಿ ಹಾನಿಯಾದ ಸ್ಥಳದಲ್ಲಿ ಕಾಮಗಾರಿ ನಡೆಸದೆ ಕಾಂಗ್ರೆಸ್ ಮುಖಂಡರ ಮನೆ ಬಾಗಿಲಲ್ಲಿ ಮಾತ್ರ ಪ್ರಕೃತಿ ವಿಕೋಪದ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಮಳೆ ಪಕ್ಷಪಾತಿಯಾಗಿ ಕಾಂಗ್ರೆಸ್ ಮುಖಂಡರ ಮನೆ ಆವರಣದಲ್ಲಿ ಮಾತ್ರ ಬಂದಿದೆಯೇ ಎಂದು ಟೀಕಿಸಿದರು.