ಮೈತ್ರಿ ಸರ್ಕಾರ ಹಣಬಲದಿಂದ ನಿರೀಕ್ಷಿಸಿದಷ್ಟು ಸ್ಥಾನ ಬಿಜೆಪಿಗೆ ಸಿಗಲಿಲ್ಲ ಎಂದ ಬಿಎಸ್​ವೈ

ಬೆಂಗಳೂರು: ಜೆಡಿಎಸ್​ ಕಾಂಗ್ರೆಸ್​ನ ಮೈತ್ರಿ, ಶಕ್ತಿ, ಹಣ ಬಲದಿಂದಾಗಿ ನಾವು ನಿರೀಕ್ಷೆಯಷ್ಟು ಸ್ಥಾನಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಆದರೂ ಪಕ್ಷ ಉತ್ತಮ ಸಾಧನೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಚುನಾವಣೆ ಫಲಿತಾಂಶ ಸ್ಪಷ್ಟವಾಗುತ್ತಿದ್ದಂತೆ ತಮ್ಮ ನಿವಾಸ “ದವಳಗಿರಿ” ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ರಾಜ್ಯದ ಕಾಂಗ್ರೆಸ್​-ಜೆಡಿಎಸ್​ ಮೈತ್ರಿಯ ಎದುರು ನಮ್ಮ ಪಕ್ಷ ನಿರೀಕ್ಷಿತ ಫಲಿತಾಂಶ ಕಾಣದೇ ಹೋದರೂ, ಹಲವೆಡೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಮಾಡುವ ಸ್ಥಿತಿಯಲ್ಲಿದೆ. ಶಿವಮೊಗ್ಗದಲ್ಲಿ ಭಾರಿ ದೊಡ್ಡ ಗೆಲುವು ಸಿಕ್ಕಿದೆ. ಮೈಸೂರು ಮತ್ತು ತುಮಕೂರುಗಳಲ್ಲಿ ಪಕ್ಷ ಉತ್ತಮ ಸಾಧನೆ ಮಾಡಿದೆ. ಇನ್ನುಳಿದಂತೆ 15 ನಗರಸಭೆಗಳಲ್ಲಿ, 11 ಪುರಸಭೆಗಳಲ್ಲಿ, 8 ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿರುವುದು ಉತ್ತಮ ಸಾಧನೆ,” ಎಂದು ಹೇಳಿದರು.

“ಸ್ಥಳೀಯ ಸಂಸ್ಥೆ ಚುನಾವಣೆಗೂ ಸರ್ಕಾರದ ಅಸ್ಥಿರತೆಗೂ ಏನಾದರೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಫಲಿತಾಂಶಕ್ಕೂ ಸರ್ಕಾರ ಅಸ್ಥಿರಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಕಚ್ಚಾಟ, ಗೊಂದಲಗಳಿಂದಲೇ ಸರ್ಕಾರ ಬೀಳಲಿದೆ,” ಎಂದರು.
ಲೋಕಸಭೆ ಚುನಾವಣೆ ಮೇಲೆ ಈ ಫಲಿತಾಂಶ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮ ಹಿಡಿತವಿರುವ ಪ್ರದೇಶದಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಬಂದಿರುವುದು ಈ ಚುನಾವಣೆಯಲ್ಲಿ ಗೊತ್ತಾಗಿದೆ. ಮಂಡ್ಯ, ಮೈಸೂರು, ರಾಮನಗರದಲ್ಲಿ ನಮಗೆ ಹಿನ್ನಡೆಯಾಗಿದೆ. ಲೋಕಸಭೆಯಲ್ಲಿ 25ಕ್ಕೂ ಹೆಚ್ಚು ಸ್ಥಾನ ಸಿಗಲಿದೆ,” ಎಂದರು.

ಮಾಜಿ ಉಪ ಮುಖ್ಯಮಂತ್ರಿ ಆರ್​. ಆಶೋಕ್​ ಮಾತನಾಡಿ, “ಕಾಂಗ್ರೆಸ್​ ಹಿಂದಿಗಿಂತ ಕಡಿಮೆ ಸ್ಥಾನ ಗೆದ್ದಿದೆ. ಹಲವೆಡೆ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ ಈ ಬಾರಿ ನಮಗೆ ಸಿಕ್ಕಿದೆ. ಕಾಂಗ್ರೆಸ್​-ಜೆಡಿಎಸ್​ ಸರ್ಕಾರದ ಕೌಂಟ್​ಡೌನ್​ ಶುರುವಾಗಿದೆ,”ಎಂದರು.

“ಸಾಮಾನ್ಯವಾಗಿ ಸರ್ಕಾರವಿರುವ ಪಕ್ಷದ ಕಡೆಗೇ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬರುತ್ತದೆ. ಆದರೆ, ಈ ಫಲಿತಾಂಶ ಅದಕ್ಕೆ ವ್ಯತಿರಿಕ್ತವಾಗಿದೆ,” ಎಂದರು.

ಅತಂತ್ರ ಸ್ಥಿತಿ ಇರುವ ಕಡೆಗಳಲ್ಲಿ ಮೈತ್ರಿ ಮಾಡಿಕೊಳ್ಳಲಾಗುವುದೇ ಎಂಬ ಪ್ರಶ್ನೆಗೆ, “ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯ ಮಟ್ಟದಲ್ಲಿ ಮೈತ್ರಿ ಇಲ್ಲ,” ಎಂದರು.