ಮಳೆಗಾಲದ ಅಧಿವೇಶನದಲ್ಲಿ ಸಂತಾಪ ಸೂಚನೆ ಬಳಿಕ ಪ್ರತಿಭಟಿಸಲು ಬಿಜೆಪಿ ನಿರ್ಧಾರ: ಸುಪ್ರೀಂ ಆದೇಶದ ಮೇಲೂ ಕಣ್ಣು

ಬೆಂಗಳೂರು: ಇಂದು ಆರಂಭವಾಗಲಿರುವ ವಿಧಾನಮಂಡಲದ ಮಳೆಗಾಲದ ಅಧಿವೇಶನದಲ್ಲಿ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸದನದಲ್ಲಿ ಹಾಜರಿರುವಂತೆ ಪಕ್ಷದ ಎಲ್ಲ ಶಾಸಕರಿಗೂ ಪ್ರತಿಪಕ್ಷ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಸೂಚಿಸಿದ್ದಾರೆ ಎನ್ನಲಾಗಿದೆ.

10ಕ್ಕೂ ಹೆಚ್ಚು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿಕೂಟ ಬಹುಮತ ಕಳೆದುಕೊಂಡು, ಅಲ್ಪಮತಕ್ಕೆ ಕುಸಿದಿದೆ. ಬಹುಮತ ಇಲ್ಲದ ಸರ್ಕಾರ ಅಧಿವೇಶನ ನಡೆಸಬಾರದು ಎಂಬ ಕಾರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರತಿಭಟನೆ ನಡೆಸಲಿರುವುದಾಗಿ ಹೇಳಲಾಗುತ್ತಿದೆ.

ಸುಪ್ರೀಂಕೋರ್ಟ್​ ಆದೇಶದ ಮೇಲೂ ಕಣ್ಣು
ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿರುವ ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್​ ವಿಳಂಬನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ದೂರಿನ ಕುರಿತು ಸುಪ್ರೀಂಕೋರ್ಟ್​ನಲ್ಲಿ ಶುಕ್ರವಾರ ವಿಚಾರಣೆ ನಡೆಯಲಿದೆ. ಈ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್​ ಯಾವ ರೀತಿಯ ಆದೇಶ ನೀಡುತ್ತದೆ ಎಂಬುದರ ಮೇಲೂ ಬಿಜೆಪಿ ನಾಯಕರು ಕಣ್ಣಿಟ್ಟಿದ್ದಾರೆ. ಇದನ್ನು ಆಧರಿಸಿ ತಮ್ಮ ರಣನೀತಿ ಸಿದ್ಧಪಡಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.

11.30ಕ್ಕೆ ಬಿಜೆಪಿ ಶಾಸಕರ ಸಭೆ
ವಿಧಾನಸೌಧದಲ್ಲಿರುವ ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿ ಶುಕ್ರವಾರ ಬೆಳಗ್ಗೆ 11.30ಕ್ಕೆ ಬಿಜೆಪಿ ಶಾಸಕರ ಸಭೆ ನಡೆಯಲಿದೆ. ಇಂದಿನ ಕಲಾಪದಲ್ಲಿ ಪಕ್ಷ ತೆಳೆಯಲಿರುವ ನಿಲುವು, ನಿರ್ಧರಿಸಿರುವ ಹೋರಾಟದ ರೂಪುರೇಷೆ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.

ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತು ವಿಧಾನಸಭಾಧ್ಯಕ್ಷರಿಗೆ ಮತ್ತೊಮ್ಮೆ ನಿಲುವಳಿ ಸಲ್ಲಿಸುವ ಕುರಿತು, ರಾಜ್ಯಪಾಲ ವಿ.ಆರ್​. ವಾಲಾ ಅವರನ್ನು ಭೇಟಿಯಾಗಿ ಬಹುಮತ ಸಾಬೀತುಪಡಿಸಲು ಸರ್ಕಾರಕ್ಕೆ ಸೂಚಿಸುವಂತೆ ಒತ್ತಡ ಹೇರುವ ಕುರಿತು ಈ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *